ವಿಮಾನದಲ್ಲಿ ಪ್ರಯಾಣ ಮಾಡುವುದಕ್ಕೆಂದು ಪೂರ್ತಿ ಸಿದ್ಧತೆ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ಹೋಗಿರುತ್ತೀರಿ. ಆಗ ನಿಮ್ಮ ವಿಮಾನ ಬರೋಬ್ಬರಿ 18 ತಾಸು ವಿಳಂಬಗೊಂಡಿದೆ ಎಂದು ಘೋಷಣೆಯಾಗಿಬಿಟ್ಟರೆ ಏನು ಮಾಡುತ್ತೀರಿ? ಒಂದೋ ಬೇರೊಂದು ವಿಮಾನ ಹತ್ತುತ್ತೀರಿ. ಇಲ್ಲವೇ ಮನೆಗೆ ವಾಪಸು ಬರುತ್ತೀರಿ ಅಲ್ಲವೆ? ಆದರೆ ಇಲ್ಲೊಬ್ಬ ವ್ಯಕ್ತಿ ಅದ್ಯಾವುದನ್ನೂ ಮಾಡದೆ ಬರೋಬ್ಬರಿ 18 ತಾಸು ಕಾದು ವಿಮಾನ ಹತ್ತಿದ್ದಾನೆ. ಆಗ ಆತನಿಗೆ ಆದ ಅನುಭವ ಪೂರ್ತಿ ಜೀವನದಲ್ಲಿ (Viral Video) ಮರೆಯುವಂಥದ್ದಲ್ಲ.
ಅಮೆರಿಕನ್ ಏರ್‌ಲೈನ್ ವಿಮಾನವೊಂದರಲ್ಲಿ ಇಂತಹ ವಿಶೇಷ ಘಟನೆ ನಡೆದಿದೆ. ಫಿಲ್ ಸ್ಟ್ರಿಂಜರ್ ಹೆಸರಿನ ವ್ಯಕ್ತಿ 18 ತಾಸುಗಳನ್ನು ವಿಮಾನ ನಿಲ್ದಾಣದಲ್ಲೇ ಕಳೆದು ನಂತರ ವಿಮಾನ ಬಂದಾಗ ಹತ್ತಿದ್ದಾನೆ. ವಿಶೇಷವೆಂದರೆ ಆ ವಿಮಾನ ಬಂದಾಗ ಅದನ್ನು ಹತ್ತಲೆಂದು ಹೋದವನು ಅವನೊಬ್ಬನೇ. ಆ ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿದ್ದ ಎಲ್ಲರೂ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡು ವಿಮಾನ ನಿಲ್ದಾಣದಿಂದ ಹೊರ ನಡೆದಿದ್ದರು.
ಇದನ್ನೂ ಓದಿ: Viral Video : ಕತ್ತಲೆ ತುಂಬಿದ ಮನೆಗೆ ಬೆಳಕು ತಂದ ಐಪಿಎಸ್ ಅಧಿಕಾರಿ!
ವಿಮಾನದ ಸಿಬ್ಬಂದಿಗಳೊಂದಿಗೆ ತಾನೊಬ್ಬನೇ ಪ್ರಯಾಣ ಮಾಡಿದ ವಿಡಿಯೊವನ್ನು ಫಿಲ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಸಿಬ್ಬಂದಿ ಆತನೊಂದಿಗೆ ಎಂಜಾಯ್ ಮಾಡಿದ್ದು, ವಿಮಾನದೊಳಗೆ ಕುಳಿತುಕೊಂಡು ಫೋಟೋಗಳನ್ನು ತೆಗೆದುಕೊಂಡ ದೃಶ್ಯಗಳನ್ನೆಲ್ಲ ಆತ ವಿಡಿಯೊದಲ್ಲಿ ತೋರಿಸಿದ್ದಾನೆ.
ಫಿಲ್ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಎರಡು ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಣೆ ಪಡೆದುಕೊಂಡಿದೆ. ಸಾವಿರಾರು ಮಂದಿ ವಿಡಿಯೊಗೆ ಲೈಕ್ ಮಾಡಿದ್ದಾರೆ. ಹಲವಾರು ಮಂದಿ ವಿವಿಧ ರೀತಿಯ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. “ನಾನು ಪ್ರಯಾಣಿಸುವ ವಿಮಾನಗಳೂ ಇದೇ ರೀತಿಯಲ್ಲಿ ಇರುವುದಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು” ಎಂದು ಅನೇಕರು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಫಿಲ್ ಅವರು ತಮ್ಮ ವಿಮಾನ ಪ್ರಯಾಣ ಮುಗಿಸಿದ ಮೇಲೆ ಏನಾಯಿತು ಎನ್ನುವುದನ್ನೂ ಮತ್ತೊಂದು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ವಿಮಾನ ಮುಂಜಾನೆ ನಾಲ್ಕು ಗಂಟೆಗೇ ಲ್ಯಾಂಡಿಂಗ್ ಆಯಿತು. ಆದರೆ ನನ್ನ ಲಗೇಜ್ ಇನ್ನೂ ಬಂದಿಲ್ಲ. ಹಾಗಾಗಿ ವಿಮಾನ ನಿಲ್ದಾಣದಲ್ಲೇ ಕುಳಿತುಕೊಂಡು ಕಾಯುವಂತಾಗಿದೆ ಎಂದು ಅವರು ವಿಡಿಯೊದಲ್ಲಿ ಮಾಹಿತಿ ನೀಡಿದ್ದಾರೆ.