ಲಖನೌ: ತೇಲುವ ಕಲ್ಲೊಂದು ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಜಿಲ್ಲೆಯ ಅಹಿಮಲ್ಪುರ್ ಪ್ರದೇಶದಲ್ಲಿ ಇಸಾನ್ ನದಿಯಲ್ಲಿ ಕಂಡು ಬಂದ ಈ ತೇಲುವ ಕಲ್ಲಿನ ಮೇಲೆ ಬರೆದಿರುವ ಅಕ್ಷರಗಳನ್ನು ಕಂಡ ಗ್ರಾಮಸ್ಥರು, ಇದು ತ್ರೇತಾಯುಗ ಕಾಲದ ರಾಮಸೇತುವಿನ ಕಲ್ಲು ಎಂದೂ ವ್ಯಾಖ್ಯಾನಿಸಿದ್ದಾರೆ. ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮಕ್ಕಳ ಕಣ್ಣಿಗೆ, ನದಿಯಲ್ಲಿ ತೇಲುತ್ತಿದ್ದ ಈ ಕಲ್ಲು ಗೋಚರಿಸಿತ್ತು. ಕುತೂಹಲ ತಡೆಯಲಾರದ ಮಕ್ಕಳು ಅದನ್ನು ತಂದು ಹಿರಿಯರಿಗೆ ತೋರಿಸಿದ್ದರು. ಸುಮಾರು ೫.೭ ಕೆ.ಜಿ. ತೂಗುವ ಈ ಕಲ್ಲು ನೀರಿನಲ್ಲಿ ತೇಲುತ್ತಿರುವ ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ.
ʻನದಿಯಲ್ಲಿ ತೇಲುವ ಕಲ್ಲೊಂದು ನಮಗೆ ದೊರೆತಿರುವುದು ನಿಜ. ಅದರ ಮೇಲೆ ರಾಮ ನಾಮ ಬರೆದಿರುವುದೂ ಹೌದು. ರಾಮೇಶ್ವರದಲ್ಲಿ ರಾಮ ಸೇತು ಕಟ್ಟುವಾಗ ಉಪಯೋಗಿಸಿದ ಕಲ್ಲಿದು ಎಂದೂ ಗ್ರಾಮದ ಕೆಲವರು ಹೇಳುತ್ತಿದ್ದಾರೆ. ಎಲ್ಲರಿಗೂ ಅವರವರದ್ದೇ ಅಭಿಪ್ರಾಯವಿರಬಹುದಲ್ಲʼ ಎಂದು ಗ್ರಾಮದ ಮುಖ್ಯಸ್ಥ ನಿತಿನ್ ಪಾಂಡೆ ಹೇಳಿದ್ದಾರೆ. ಈ ಕಲ್ಲನ್ನು ಸಮೀಪದ ದೇವಳದಲ್ಲಿ ಇರಿಸಬೇಕು. ಅದಕ್ಕೆ ಪೂಜೆ ಸಲ್ಲಿಸುವಂತಾಗಬೇಕು ಎಂದೂ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಲಾಹೋರಿನ ಕೆಎಫ್‌ಸಿ ಡೆಲಿವರಿ ಗರ್ಲ್ ಮೀರಬ್ ಸ್ಫೂರ್ತಿ ಕತೆ ಈಗ ವೈರಲ್!