Site icon Vistara News

Viral video | ಚಿಕಾಗೋನಲ್ಲಿ ಭಾರತೀಯನ ಮದುವೆಗೆ ಸೀರೆಯುಟ್ಟು ಬಿಂದಿಯಿಟ್ಟು ಬಂದ ಗೆಳೆಯರು!

Viral video

ಫ್ಯಾಷನ್‌ ವಿಷಯಕ್ಕೆ ಬಂದರೆ ಅದಕ್ಕೊಂದು ನಿರ್ಧಿಷ್ಟ ಚೌಕಟ್ಟಿಲ್ಲ. ಚೌಕಟ್ಟಿನ ಒಳಗೆ ಮಾಡಿದರೆ ಅದು ಫ್ಯಾಷನ್‌ ಅಲ್ಲವೂ ಅಲ್ಲ. ಚೌಕಟ್ಟಿನ ಹೊರಗೆ ಹಾರಿದರೇ ಅದು ಈಗ ಟ್ರೆಂಡ್‌, ಫ್ಯಾಷನ್. ಏನು ಮಾಡಿದರೂ ಫ್ಯಾಷನ್‌ ಎಂಬ ಕಾಲದಲ್ಲಿ ಇದೀಗ ಇಬ್ಬರು ಯುವಕರು ತಮ್ಮ ಭಾರತೀಯ ಗೆಳೆಯನ ಮದುವೆಗೆ ಸೀರೆಯುಟ್ಟು ಬಂದಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಹಿಳೆಯರು ಪುರುಷರ ಉಡುಗೆ ತೊಡುವುದು ಸರ್ವೇ ಸಾಮಾನ್ಯ. ಆದರೆ, ಪುರುಷರು ಮಹಿಳೆಯರ ಉಡುವನ್ನು ಧರಿಸುವುದು ಸಾಮಾನ್ಯ ಅಲ್ಲ. ಹಾಗಾಗಿಯೇ ಇದು ಸುದ್ದಿಯಾಗಿದೆ, ಸದ್ದಾಗಿದೆ. ಅದರಲ್ಲೂ ಮಹಿಳೆಯರ ಸೀರೆಯೆಂಬ ಸಾಂಪ್ರದಾಯಿಕ ಉಡುಪನ್ನು ಇಬ್ಬರು ಪುರುಷರು ಧರಿಸಿರುವುದೇ ಈಗ ತಮಾಷೆಯೆನಿಸಿ ಸುದ್ದಿಯಾಗಿದೆ. ಗೆಳೆಯನ ಮದುವೆಗೆ ತಮಾಷೆಯಾಗಿ ಸರ್ಪ್ರೈಸ್‌ ಕೊಡಲು ಹೊರಟ ವಿದೇಶೀಯರ ಈ ನಡೆ, ಭಾರತೀಯ ದಂಪತಿಗಳ ಮುಖದಲ್ಲಿ ನಗು ತರಿಸಿದೆ!

ಚಿಕಾಗೋ ಮೂಲದ ಮದುವೆ ವಿಡಿಯೋಗ್ರಾಫಿ ತಂಡ ಪಾರಾಗೋನ್‌ಫಿಲ್ಮ್ಸ್‌ ತನ್ನ ಇನ್ಸ್‌ಟಾಗ್ರಾಂ ಪ್ರೊಫೈಲಿನಲ್ಲಿ ಇಂಥದ್ದೊಂದು ವಿಡಿಯೋ ಪೋಸ್ಟ್‌ ಮಾಡಿದ್ದು ಎಲ್ಲರ ಮನ ಸೆಳೆಯುತ್ತಿದೆ. ʻಮಿಚಿಗನ್‌ ಅವೆನ್ಯೂನಲ್ಲಿ ಮದುವೆಯೊಂದಕ್ಕೆ ಬಂದ ಮದುಮಗನ ಇಬ್ಬರು ಗೆಳೆಯರು, ಮದುವೆಯೊಂದರ ಬೆಳಗಿನ ಒಂದು ಸಾಮಾನ್ಯ ದೃಶ್ಯ, ಅಷ್ಟೇ!ʼ ಎಂಬರ್ಥ ನೀಡುವ ಬರಹದೊಂದಿಗೆ ಒಂದು ಲಘು ಹಾಸ್ಯಭರಿತ ಪೋಸ್ಟ್‌ ಇದಾಗಿದೆ.‌

ಇದನ್ನೂ ಓದಿ | Kantara Movie | ಕಾಂತಾರ ನೋಡುವಾಗಲೇ ಮಹಿಳೆ ಮೈ ಮೇಲೆ ಬಂದ ದೇವರು; ಕುಣಿಯುತ್ತಿರುವ ದೃಶ್ಯ ವೈರಲ್

ಈ ವಿಡಿಯೋನಲ್ಲಿ ಒಬ್ಬ ಮಹಿಳೆ ಈ ಇಬ್ಬರಿಗೆ ಸೀರೆ ಉಡಿಸುವ ಝಲಕ್‌ ಇದೆ. ಭಾರತೀಯ ಸಾಂಪ್ರದಾಯಿಕ ಜರತಾರಿ ಸೀರೆಯಲ್ಲಿ ಇಬ್ಬರು ಯುವಕರು ನಗುವನ್ನೇ ಭೂಷಣವಾಗಿಸಿಕೊಂಡು ಚಿಕಾಗೋನ ಮಿಚಿಗನ್‌ ಅವೆನ್ಯೂನಲ್ಲಿ  ನಡೆದು ಬರುತ್ತಿರುವ ತಮಾಷೆಯ ದೃಶ್ಯ ಎಲ್ಲರಿಗೂ ಖುಷಿಯನ್ನು ಹಂಚುತ್ತಿದೆ. ಇವರು, ಹಣೆಯಲ್ಲಿ ಬಿಂದಿಯನ್ನೂ ಧರಿಸಿದ್ದು, ನಡೆದು ಬಂದು ತಮ್ಮ ಭಾರತೀಯ ಗೆಳೆಯನಿಗೆ ಸರ್ಪ್ರೈಸ್‌ ಕೊಟ್ಟಿದ್ದಾರೆ. ಭಾರತೀಯ ನವ ದಂಪತಿ ಈ ಇಬ್ಬರು ಗೆಳೆಯರ ಅವತಾರ ಕಂಡು ಹೊಟ್ಟೆ ಹುಣ್ಣಾಗುವಂತೆ ಬಿದ್ದು ಬಿದ್ದು ನಗುವ ಈ ಪುಟಾಣಿ ವಿಡಿಯೋ ಈಗ ಎಲ್ಲರ ಮುಖದಲ್ಲೂ ನಗು ಜಿನುಗಿಸುತ್ತಿದೆ.

ಬಹಳಷ್ಟು ಮಂದಿ ಈ ವಿಡಿಯೋ ನೋಡಿ ತಾವೂ ಬಿದ್ದು ಬಿದ್ದು ನಕ್ಕಿದ್ದು, ಗೆಳೆಯನೊಬ್ಬನ ಮದುವೆಗೆ ಕೊಡಬಹುದಾದ ಬೆಸ್ಟ್‌ ಸರ್ಪ್ರೈಸ್‌ ಇದು ಎಂದೂ ಕಾಮೆಂಟ್‌ ಮಾಡಿದ್ದಾರೆ. ಇದನ್ನು ಸಾವಿರಾರು ಮಂದಿ ಲೈಕ್‌ ಮಾಡಿದ್ದು, ಇದೊಂದು ನಿಜಕ್ಕೂ ಬಹಳ ಖುಷಿ ಕೊಡುವ ವಿಡಿಯೋ ಎಂದೂ ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಕೆಲವು, ಇತ್ತೀಚೆಗೆ ಪುರುಷರು ಹೆಚ್ಚು ಹೆಚ್ಚು ಕ್ರಿಯಾತ್ಮಕವಾಗಿ ಯೋಚಿಸುತ್ತಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂದಿದ್ದಾರೆ. ಇನ್ನೂ ಒಬ್ಬರು, ಬಿಳಿಯ ಪುರುಷರು ಏನು ಧರಿಸಿದರೂ ಅದ್ಭುತವಾಗಿ ಕಾಣುತ್ತಾರೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಇಬ್ಬರಿಗೂ ಚಂದಕ್ಕೆ ಸೀರೆಯ ಸೆರಗು ಹಾಗೂ ನಿರಿಗೆಗಳನ್ನು ಹಾಕಿ ಉಡಿಸಿರುವುದರಿಂದ ಬಹಳ ಮುದ್ದಾಗಿ ಕಾಣುತ್ತಾರೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಪಶ್ಚಿಮ ಬಂಗಾಳದ ಯುವಕನೊಬ್ಬ ಮಿಲಾನ್‌ನಲ್ಲಿ ಸೀರೆಯುಟ್ಟು ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು!

ಇದನ್ನೂ ಓದಿ | Video Viral | ಆನೆಯನ್ನು ನಾಯಿ ಅಟ್ಟಾಡಿಸಿತೋ ಇಲ್ಲವೇ ನಾಯಿ ಜತೆ ಆನೆ ಆಟವಾಡಿತೋ; ವೈರಲ್‌ ಆಯ್ತು ವಿಡಿಯೊ!

Exit mobile version