ರಾಂಚಿ: ಕಳೆದ ಎರಡು ವರ್ಷಗಳಿಂದ ಕೊವಿಡ್ 19 ಕಾರಣದಿಂದ ಗಣೇಶೋತ್ಸವ ದೊಡ್ಡ ಮಟ್ಟದಲ್ಲಿ ನಡೆದಿರಲಿಲ್ಲ. ಆದರೆ ಈ ಸಲ ಎಲ್ಲ ಕಡೆ ಪೆಂಡಾಲ್ಗಳನ್ನು ಹಾಕಿ, ಗಣೇಶನನ್ನು ಕೂರಿಸಿ ಸಂಭ್ರಮದಿಂದ ಪೂಜೆ ನೆರವೇರಿಸಲಾಗುತ್ತಿದೆ. ಸೆಪ್ಟೆಂಬರ್ 9ರವರೆಗೂ ವಿವಿಧೆಡೆಗಳಲ್ಲಿ ಗಣೇಶೋತ್ಸವ ನಡೆಯಲಿದೆ. ಇದೆಲ್ಲದರ ಮಧ್ಯೆ ಜಾರ್ಖಂಡ್ನ ಜಮ್ಶೆಡ್ಪುರದಲ್ಲಿ ಹಾಕಲಾದ ಒಂದು ಗಣೇಶನ ಪೆಂಡಾಲ್ ಗಮನ ಸೆಳೆದಿದೆ.
ಜೆಮ್ಶೆಡ್ಪುರದ ಈ ಪೆಂಡಾಲ್ನ್ನು ಥೇಟ್ ಆಧಾರ್ ಕಾರ್ಡ್ ರೂಪದಲ್ಲಿ ರಚಿಸಲಾಗಿದೆ. ಬಿಳಿಬಣ್ಣದ ಪೆಂಡಾಲ್ ಆಧಾರ್ ಕಾರ್ಡ್ ಮಾದರಿಯಲ್ಲೇ ಇದ್ದು, ಅದರಲ್ಲಿ ಗಣೇಶನ ಫೋಟೋ, ವಿಳಾಸಗಳನ್ನೆಲ್ಲ ನಮೂದಿಸಲಾಗಿದೆ. ಗಣಪತಿಯ ಆಧಾರ್ ನಂಬರ್ 9678 9959 4584. ವಿಳಾಸ: ಕೈಲಾಸ ಪರ್ವತದ ಟಾಪ್ ಫ್ಲೋರ್. ಮಾನಸ ಸರೋವರ, ಕೈಲಾಸ. ಹುಟ್ಟಿದ ದಿನಾಂಕ 1/1/600ನೇ ಇಸ್ವಿ (6ನೇ ಶತಮಾನ) ಎಂದು ಆಧಾರ್ ಕಾರ್ಡ್ ಪೆಂಡಾಲ್ ಮೇಲೆ ಬರೆದಿದ್ದು ವಿಶೇಷವಾಗಿ ಗಮನಸೆಳೆಯುತ್ತಿದೆ. ಇಲ್ಲಿ ಗಣಪತಿ ನೋಡಲು ಬರುವ ಜನರನ್ನು ಪೆಂಡಾಲ್ ಕೂಡ ವಿಶೇಷವಾಗಿ ಆಕರ್ಷಿಸುತ್ತಿದೆ.
ಈ ಗಣೇಶ ಪೆಂಡಾಲ್ ನಿರ್ಮಿಸಿದ್ದು ಸಾರವ್ ಕುಮಾರ್, ಅವರು ಎಎನ್ಐ ಜತೆ ಮಾತನಾಡಿ, ‘ಕೋಲ್ಕತ್ತದಲ್ಲಿ ಒಂದು ಕಡೆ ಫೇಸ್ಬುಕ್ ಥೀಮ್ನ ಪೆಂಡಾಲ್ ಹಾಕಲಾಗಿತ್ತು. ಅದನ್ನು ನೋಡಿದ ಮೇಲೆ ನನಗೂ ಏನಾದರೂ ವಿಭಿನ್ನವಾಗಿ ಮಾಡಬೇಕು ಎನ್ನಿಸಿತು. ಹೀಗೆ ಯೋಚನೆ ಮಾಡುತ್ತಿದ್ದಾಗ, ಆಧಾರ್ ಕಾರ್ಡ್ ರೂಪದಲ್ಲಿ ಪೆಂಡಾಲ್ ನಿರ್ಮಿಸಿದರೆ ಚೆನ್ನಾಗಿ ಇರುತ್ತದೆ ಎಂದು ಅನ್ನಿಸಿ, ಹಾಗೇ ಮಾಡಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral Video | ಜೋರಾಗಿ ಉಯ್ಯಾಲೆ ಆಡುತ್ತ ತಿರುತಿರುಗಿ ಬಿದ್ದ ಮಹಿಳೆ; ಜೋಕಾಲಿ ಜೋಕೆ !