ಮುಂಬೈ: ಹೇಳಿ ಕೇಳಿ ಇದು ನವರಾತ್ರಿಯ ಸಮಯ. ಎಲ್ಲಿ ನೋಡಿದರೂ ಸಂಭ್ರಮ ಮನೆ ಮಾಡಿದೆ. ಈ ಹಬ್ಬಕ್ಕೆ ಇನ್ನಷ್ಟು ಮೆರುಗು ತಂದುಕೊಡುವುದು ಗರ್ಬಾ ನೃತ್ಯ. ಅದರಲ್ಲೂ ಉತ್ತರ ಭಾರತದಲ್ಲಿ ಈ ನೃತ್ಯ ಪ್ರದರ್ಶನವಿಲ್ಲದೆ ನವರಾತ್ರಿ ಸಂಪನ್ನವಾಗುವುದಿಲ್ಲ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದು ಜನ ಜೀವನದಲ್ಲಿ ಹಾಸು ಹೊಕ್ಕಿದೆ (Garba Fever). ಇದನ್ನು ಸಮರ್ಥಿಸುವಂತೆ ಮುಂಬೈಯ ಲೋಕಲ್ ರೈಲೊಂದರಲ್ಲಿ ಪ್ರಯಾಣಿಕರ ಗುಂಪೊಂದು ಗರ್ಬಾ ನೃತ್ಯಕ್ಕೆ ಹೆಜ್ಜೆ ಹಾಕಿದ್ದು, ವಿಡಿಯೊ ವೈರಲ್ (Viral Video) ಆಗಿದೆ.
ಜನಸಂದಣಿಯ ನಡುವೆಯೂ ಈ ಪ್ರಯಾಣಿಕರು ಕುಣಿದಿದ್ದು ಹಲವರ ತುಟಿಯಲ್ಲಿ ನಗು ಅರಳಿಸಿದೆ. ಮುಂಬೈ ಲೋಕಲ್ ರೈಲು ಎಂದರೆ ಗೊತ್ತಲ್ಲ? ಸದಾ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತದೆ. ಇಷ್ಟೆಲ್ಲ ಗಡಿಬಿಡಿ ನಡುವೆಯೂ ಒಂದಷ್ಟು ಮಧ್ಯ ವಯಸ್ಕ ಪ್ರಯಾಣಿಕರು ಚಿಂತೆ ಬಿಟ್ಟು ಕುಣಿದಿದ್ದಾರೆ. ಇವರ್ಯಾರೂ ತರಬೇತಿ ಪಡೆದ ನೃತ್ಯಪಟುಗಳಲ್ಲ. ತಮ್ಮ ಖುಷಿಗೆ ಮನಃಪೂರ್ವಕವಾಗಿ ನೃತ್ಯ ಮಾಡಿದ್ದಾರೆ. ಇತರ ಪ್ರಯಾಣಿಕರು ಅವರನ್ನು ಹುರಿದುಂಬಿಸುತ್ತಿದ್ದಾರೆ. ಹಿನ್ನೆಲೆಯಲ್ಲಿ ಗರ್ಬಾ ಹಾಡು ಕೇಳಿ ಬರುತ್ತಿದೆ. ಅದರಲ್ಲೂ ಹಿರಿಯ ವ್ಯಕ್ತಿಯೊಬ್ಬರು ಯಾವುದರ ಹಂಗಿಲ್ಲದೆ, ಪರಿವೇ ಇಲ್ಲದೆ ಡ್ಯಾನ್ಸ್ ಮಾಡುತ್ತ ಸಿಕ್ಕ ಅಲ್ಪ ಸಮಯವನ್ನು ಸಂತಸದಿಂದ ಕಳೆದಿದ್ದಾರೆ.
Garba in Mumbai Local pic.twitter.com/Xd4MtiQsGu
— Mumbai Heritage (@mumbaiheritage) October 18, 2023
ಇಂಪ್ರೆಸ್ ಆದ ನೆಟ್ಟಿಗರು
ನಾವು ಖುಷಿಯಾಗಿರಲು ದೊಡ್ಡ ದೊಡ್ಡ ಕಾರಣ ಬೇಕಾಗಿಲ್ಲ. ಪ್ರತಿಯೊಂದು ಕ್ಷಣವನ್ನೂ ನಮ್ಮದೇ ಎಂದು ಭಾವಿಸಿದರೆ ದುಃಖ ಪಡಬೇಕಾದ ಪ್ರಮೇಯವೇ ಬರುವುದಿಲ್ಲ ಎನ್ನುವುದನ್ನು ನಾವು ಇವರಿಂದ ಕಲಿತುಕೊಳ್ಳಬಹುದಾದ ಬಹು ದೊಡ್ಡ ಪಾಠ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಹಲವರು ಮುಂಬೈಯ ಬತ್ತದ ಉತ್ಸಾಹವನ್ನು ಕೊಂಡಾಡಿದ್ದಾರೆ. ʼʼಮುಂಬೈಯ ಉತ್ಸಾಹವನ್ನು ಯಾರಿಂದಲೂ ಸೋಲಿಸಲು ಸಾಧ್ಯವಾಗದುʼʼ ಎಂದು ಒಬ್ಬರು ಉದ್ಗರಿಸಿದ್ದಾರೆ. ʼʼಮುಂಬೈ ಲೋಕಲ್ ರೈಲಿನಲ್ಲಿ ಗರ್ಬಾ ನೃತ್ಯ. ವ್ಹಾವ್!ʼʼ ಎಂದು ಇನ್ನೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ʼʼಮುಂಬೈಯ ಸ್ಥಳೀಯರ ವರ್ತನೆ ಯಾವತ್ತಿಗೂ ಆಸಕ್ತಿದಾಯಕವಾಗಿರುತ್ತದೆʼʼ ಎಂದಿದ್ದಾರೆ ಮತ್ತೊಬ್ಬರು. ಅನೇಕರಂತೂ ಈ ಸನ್ನಿವೇಶವನ್ನು ಲೈವ್ ಆಗಿ ನೋಡುವ ಅವಕಾಶದಿಂದ ವಂಚಿತರಾಗಿದ್ದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಅಲ್ಲಿ ನಾವೂ ಇರಬೇಕಿತ್ತು ಎಂದು ಹುಲುಬಿದ್ದಾರೆ.
ಇದನ್ನೂ ಓದಿ: Viral Video: ಜಾನುವಾರು ರಕ್ಷಣೆಗೆ ಧಾವಿಸದೆ ವಿಡಿಯೊ ಮಾಡುತ್ತಿದ್ದವರ ಝಾಡಿಸಿದ ನೆಟ್ಟಿಗರು!
ಆಕ್ಷೇಪಕ್ಕೂ ಕಡಿಮೆ ಇಲ್ಲ
ಈ ವಿಡಿಯೊವನ್ನು ಹಲವರು ಮೆಚ್ಚಿದ್ದಾರೆ. ಇನ್ನು ಕೆಲವರು ನೃತ್ಯ ಮಾಡಿದವರ ವರ್ತನೆಗೆ ಆಕ್ಷೇಪವನ್ನೂ ಸೂಚಿಸಿದ್ದಾರೆ. ʼʼಒಂದು ವೇಳೆ ನಾನು ಆ ಬೋಗಿಯಲ್ಲಿದ್ದಿದ್ದರೆ ಆ ಗಲಾಟೆ ನನಗೆ ಹಿಂಸೆಯಾಗುತ್ತಿತ್ತುʼʼ ಎಂದು ಒಬ್ಬರು ಕಿಡಿ ಕಾರಿದ್ದಾರೆ. ʼʼಈ ಸಂದರ್ಭದಲ್ಲಿ ಯಾರಾದರೊಬ್ಬರು ತಮ್ಮ ಪ್ರೀತಿಪಾತ್ರದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರೆ ಅವರ ಪರಿಸ್ಥಿಯನ್ನೊಮ್ಮೆ ಊಹಿಸಿಕೊಳ್ಳಿ. ಯಾರಾದರೂ ಅನಾರೋಗ್ಯ ಪೀಡಿತರಿದ್ದರೆ ಅವರಿಗೂ ನರಕ ಅನುಭವವಾಗಿರುತ್ತಿತ್ತು. ಇದು ಸಾರ್ವಜನಿಕ ಸಾರಿಗೆ. ಇಲ್ಲಿ ಇಂತಹ ವರ್ತನೆ ಸಲ್ಲʼʼ ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
#Garba #Navrathri
— Mumbai Railway Users (@mumbairailusers) September 28, 2022
MUMBAI LOCALS CREATE MOMENTS
Now in yesterday's 10.02 am #AClocal from Kalyan.
FUN HAS NO LIMIT. pic.twitter.com/Hruzxwbeqr
ಹಿಂದೆಯೂ ನಡೆದಿತ್ತು
ಮುಂಬೈ ಲೋಕಲ್ ಟ್ರೈನ್‌ನಲ್ಲಿ ಇಂತಹ ಸಂಭ್ರಮಾಚರಣೆ ನಡೆಯುತ್ತಿರುವುದು ಇದು ಮೊದಲ ಸಲವೇನಲ್ಲ. ಕಳೆದ ವರ್ಷ ಮಹಿಳೆಯರ ಗುಂಪೊಂದು ಗರ್ಬಾ ನೃತ್ಯ ಪ್ರದರ್ಶನ ನೀಡುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಆಗಲೂ ಇದೇ ರೀತಿಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.