Site icon Vistara News

Video |‘ಒಂದು ಮಸಾಲೆ ದೋಸೆ’; ಬೆಂಗಳೂರಿನ ಹೋಟೆಲ್​​ನಲ್ಲಿ ಕನ್ನಡದಲ್ಲೇ ಫುಡ್ ಆರ್ಡರ್​ ಮಾಡಿದ ಜರ್ಮನಿ ಅಧಿಕಾರಿಗಳು

Viral Video

ಬೆಂಗಳೂರು: ಜರ್ಮನ್​ ರಾಯಭಾರಿ ಕಚೇರಿಯ ಇಬ್ಬರು ಅಧಿಕಾರಿಗಳು ಬೆಂಗಳೂರಿನ ಹೋಟೆಲ್​ವೊಂದಕ್ಕೆ ಬಂದು, ಕನ್ನಡದಲ್ಲೇ ಮಸಾಲೆ ದೋಸೆ ಆರ್ಡರ್​ ಮಾಡಿ, ಬಿಸಿಬಿಸಿ ದೋಸೆಯನ್ನು ಸವಿದು ಹೋಗಿದ್ದಾರೆ. ಭಾರತದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಜರ್ಮನಿ ರಾಯಭಾರಿ ಅಚಿಮ್ ಬರ್ಕಾರ್ಟ್ ಅವರು ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅವರ ಇಬ್ಬರು ಸಹೋದ್ಯೋಗಿಗಳು ಲಾಲ್​ ಬಾಗ್​ ಬಳಿಯ ಎಂಟಿಆರ್​ ಹೋಟೆಲ್​​ಗೆ ಹೋದ ವಿಡಿಯೋವನ್ನು ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿ, ‘ನನ್ನಿಬ್ಬರು ಸಹೋದ್ಯೋಗಿಗಳು ಎಂಟಿಆರ್​ಗೆ ಹೋಗಿ, ಕನ್ನಡದಲ್ಲೇ ತಿಂಡಿ ಆರ್ಡರ್​ ಮಾಡಿದ್ದಾರೆ. ಈ ಬಗ್ಗೆ ನಿಮಗೆಲ್ಲ ಏನೆನ್ನಿಸಿತು?’ ಎಂದು ಪ್ರಶ್ನಿಸಿದ್ದಾರೆ.

ಇಬ್ಬರು ಅಧಿಕಾರಿಗಳು ಮಾವಳ್ಳಿ ಟಿಫಿನ್ ರೂಮ್ಸ್ (MTR)ಗೆ ಹೋಗುತ್ತಾರೆ. ಅದರಲ್ಲೊಬ್ಬರು ವೇಟರ್​ ಬಳಿ ಕನ್ನಡದಲ್ಲೇ, ‘ನಮಸ್ಕಾರ, ಎಂಟಿಆರ್​ ಸ್ಪೆಶಲ್​ ಏನು?’ ಎಂದು ಕೇಳುತ್ತಾರೆ. ಅದಕ್ಕೆ ಆತ ಉತ್ತರಿಸಿ ‘ಎಂಟಿಆರ್​ ರವಾ ಇಡ್ಲಿ, ಮಸಾಲದೋಸಾ’ ಎನ್ನುತ್ತಾನೆ. ಆಗ ಇನ್ನೊಬ್ಬ ಜರ್ಮನ್​ ಅಧಿಕಾರಿ ‘ನನಗೆ ಒಂದು ಮಸಾಲೆ ದೋಸೆ ಕೊಡಿ‘ ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ. ಮತ್ತೊಬ್ಬರು ‘ಆಮೇಲೆ ಒಂದು ಬಾಟಲಿ ನೀರು’ ಎನ್ನುತ್ತಾರೆ. ಬಳಿಕ ದೋಸೆಯ ಒಂದು ತುತ್ತು ಬಾಯಿಗಿಟ್ಟು ‘ಸಖತ್ತಾಗಿದೆ’ ಎನ್ನುತ್ತಾರೆ.

ಕರ್ನಾಟಕದ ಫೇಮಸ್​ ಫುಡ್​ ಬ್ರ್ಯಾಂಡ್ ಮಾವಳ್ಳಿ ಟಿಫಿನ್ ರೂಮ್ಸ್ (MTR) ​ದೇಶಾದ್ಯಂತ ಹೆಸರು ಮಾಡಿದೆ. ಬೆಂಗಳೂರಿನಲ್ಲೇ 10ಕ್ಕೂ ಹೆಚ್ಚು ಹೋಟೆಲ್​ಗಳಿವೆ. ಅದರಾಚೆ ರಾಜ್ಯದ ಉಡುಪಿ, ಮೈಸೂರುಗಳಿಗೂ ವಿಸ್ತರಣೆಯಾಗಿದೆ. ಅಷ್ಟೇ ಅಲ್ಲ, ಸಿಂಗಾಪುರ, ಮಲೇಷಿಯಾದ ಕೌಲಾಲಂಪುರ್​, ಲಂಡನ್​ ಮತ್ತು ದುಬೈನಲ್ಲೂ ಕೂಡ ಎಂಟಿಆರ್ ಕಾಣಸಿಗುತ್ತದೆ. ಈಗ ಜರ್ಮನಿಯ ಇಬ್ಬರು ಅಧಿಕಾರಿಗಳು ಟಿಫಿನ್​ ಸೆಂಟರ್​​ಗೆ ಬಂದು ಕನ್ನಡದಲ್ಲೇ ಆರ್ಡರ್​ ಮಾಡಿದ್ದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: Viral Video | ಪಂಜರದಲ್ಲಿರುವ ಮನುಷ್ಯರನ್ನು ನೋಡಲು ಬಂದು ನಿಲ್ಲುವ ಕಾಡು ಪ್ರಾಣಿಗಳು !

Exit mobile version