ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ರಾಜ್ನಗರ ಎಕ್ಸ್ಟೆನ್ಷನ್ನ ಚಾರ್ಮ್ಸ್ ಕ್ಯಾಸಲ್ ಫ್ಲ್ಯಾಟ್ನ ಲಿಫ್ಟ್ವೊಂದರಲ್ಲಿ ಪುಟ್ಟ ಬಾಲಕನೊಬ್ಬನಿಗೆ ನಾಯಿ ಕಚ್ಚಿದ ವಿಡಿಯೋ ವೈರಲ್ ಆಗುತ್ತಿದೆ. ಆ ಚಿಕ್ಕ ಹುಡುಗನಿಗೆ ನಾಯಿ ಕಚ್ಚಿದರೂ ಅದರ ಯಜಮಾನಿ ಮಾತ್ರ ಸುಮ್ಮನೆ ನೋಡುತ್ತ ನಿರ್ಲಿಪ್ತವಾಗಿ ನಿಂತಿದ್ದರು. ಹುಡುಗನ ಸಹಾಯಕ್ಕೂ ಹೋಗಿರಲಿಲ್ಲ. ಲಿಫ್ಟ್ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಈ ವಿಡಿಯೋ ನೋಡಿದ ಜನರೆಲ್ಲ ಮಹಿಳೆಯದ್ದು ಕ್ರೂರತನದ ಪರಮಾವಧಿ ಎಂದಿದ್ದರು. ಮತ್ತೊಬ್ಬರ ಮನೆ ಮಕ್ಕಳೆಂದರೆ ಅಷ್ಟು ಉದಾಸೀನವಾ ಎಂದೂ ಆಕ್ರೋಶದಿಂದ ಪ್ರಶ್ನೆ ಕೇಳಿದ್ದರು.
ಹೀಗೆ ತನ್ನದೇ ಶ್ವಾನ ಹುಡುಗನೊಬ್ಬನಿಗೆ ಕಚ್ಚಿದರೂ, ಆತ ಕಾಲು ನೋವಿನಿಂದ ಪರಿತಪಿಸುತ್ತಿದ್ದರೂ ಸುಮ್ಮನೆ ನಿಂತಿದ್ದ ಮಹಿಳೆಗೆ ಇದೀಗ ಘಾಜಿಯಾಬಾದ್ ಮುನ್ಸಿಪಲ್ ಕಾರ್ಪೋರೇಶನ್ 5 ಸಾವಿರ ರೂಪಾಯಿ ದಂಡ ವಿಧಿಸಿದೆ. ತಮ್ಮ ಮಗನಿಗೆ ನಾಯಿ ಕಚ್ಚಿದ್ದಕ್ಕೆ ಆತನ ಪಾಲಕರು ಕುಪಿತಗೊಂಡು ಪೊಲೀಸರಿಗೆ ದೂರನ್ನೂ ಕೊಟ್ಟಿದ್ದರು. ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದಾರೆ. ಅದರ ಬೆನ್ನಲ್ಲೇ ಘಾಜಿಯಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಸಿಬ್ಬಂದಿ ಕೂಡ ಆ ಮಹಿಳೆಯ ಮನೆಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ನಾಯಿಯನ್ನು ಸಾಕುವಾಗ ಕಾನೂನು ಪ್ರಕಾರ ನೋಂದಣಿ ಮಾಡಿಸಿರಬೇಕು. ಆದರೆ ಈ ಮಹಿಳೆ ತನ್ನ ಶ್ವಾನವನ್ನು ರಿಜಿಸ್ಟರ್ ಮಾಡಿಸಿಲ್ಲ ಎಂಬುದು ಗೊತ್ತಾಗಿದೆ. ಪೊಲೀಸರೂ ಕೂಡ ತನಿಖೆ ಪ್ರಾರಂಭಿಸಿದ್ದಾರೆ.
ಏನಿದು ಘಟನೆ?
ಲಿಫ್ಟ್ನಲ್ಲಿ ಪುಟ್ಟ ಬಾಲಕನೊಬ್ಬ ಶಾಲಾ ಬ್ಯಾಗ್ ಹಾಕಿಕೊಂಡು ಮೊದಲೇ ನಿಂತಿದ್ದಾನೆ. ಆಗ ಅಲ್ಲೊಬ್ಬಳು ಮಹಿಳೆ, ತನ್ನ ಸಾಕು ನಾಯಿಯನ್ನು ಕರೆದುಕೊಂಡು ಬರುತ್ತಾಳೆ. ಒಂದು ಮೂಲೆಯಲ್ಲಿ ನಿಂತಿದ್ದ ಬಾಲಕ ಸ್ವಲ್ಪ ಮುಂದೆ ಹೋಗಲು ಪ್ರಯತ್ನಿಸಿದಾಗ ಆ ನಾಯಿ ಹುಡುಗನ ಬಲತೊಡೆಗೆ ಕಚ್ಚಿದೆ. ಆ ಹುಡುಗನಿಗೆ ತುಂಬ ನೋವಾಗಿದೆ. ಬಲಗಾಲನ್ನು ಮೇಲೆತ್ತಿ ಕುಂಟುತ್ತಾನೆ, ಆ ಭಾಗವನ್ನು ಉಜ್ಜಿಕೊಳ್ಳುತ್ತಾನೆ. ಅಷ್ಟೆಲ್ಲ ಆದರೂ ಮಹಿಳೆ ಮಾತ್ರ ಅದನ್ನು ನೋಡಿಯೂ ನೋಡಿಲ್ಲದಂತೆ ನಿಂತಿದ್ದಾಳೆ. ಹುಡುನ ಬಳಿ ಏನಾಯಿತೆಂದೂ ಅವಳು ಕೇಳಲಿಲ್ಲ. ಅವಳ ಫ್ಲೋರ್ ಬಂದ ತಕ್ಷಣ ಲಿಫ್ಟ್ನಿಂದ ಆಚೆಗೆ ಬರುತ್ತಾಳೆ. Akassh Ashok Gupta ಎಂಬುವರು ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿದ್ದರು.
ಇದನ್ನೂ ಓದಿ: Video | ನಾಯಿ ಕಚ್ಚಿ ಬಾಲಕ ಒದ್ದಾಡುತ್ತಿದ್ದರೂ ಸುಮ್ಮನೇ ನಿಂತಿದ್ದ ಮಹಿಳೆ; ಆಕೆಯದ್ದೇ ಶ್ವಾನ ಅದು !