Site icon Vistara News

Viral Video: ಕಡಲ ತೀರಕ್ಕೆ ಬಂತು ತಿಮಿಂಗಿಲ ಶವ; ಹತ್ತಿರ ಹೋಗಬೇಡಿ ಬ್ಲಾಸ್ಟ್‌ ಆಗತ್ತೆ ಎಂದ ನೆಟ್ಟಿಗರು

bluewale

bluewale

ತಿರುವನಂತಪುರಂ: ಕೇರಳದ ಕಲ್ಲಿಕೋಟೆ (Kozhikode) ಕಡಲ ತೀರದಲ್ಲಿ ಬೃಹತ್ ತಿಮಿಂಗಿಲದ ಶವವೊಂದು (Giant whale carcass) ಪತ್ತೆಯಾಗಿದೆ. ಈ ಬೃಹತ್‌ ಪ್ರಾಣಿಯ ಮೃತದೇಹದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ʼಬ್ಲೂ ವೇಲ್‌ನ ಮೃತದೇಹ ಬೆಳಗ್ಗೆ ಕೋಯಿಕ್ಕೋಡ್‌ನ ದಕ್ಷಿಣ ಕಡಲ ತೀರದಲ್ಲಿ ಕಂಡು ಬಂತು. ಈ ಅಪರೂಪದ ನೀಲಿ ತಿಮಿಂಗಿಲಕ್ಕೆ ಸುಮಾರು 80-100 ವರ್ಷ ವಯಸ್ಸಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆʼ ಎಂದು ಕ್ಯಾಪ್ಶನ್‌ ಬರೆಯಲಾಗಿದೆ. ಈ ಅಪರೂಪದ ಪ್ರಾಣಿಯನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುವ ದೃಶ್ಯ (Viral Video) ವಿಡಿಯೊದಲ್ಲಿ ಸೆರೆಯಾಗಿದೆ.

ಈ ವಿಡಿಯೊವನ್ನು ಅಕ್ಟೋಬರ್‌ 1ರಂದು ಪೋಸ್ಟ್‌ ಮಾಡಲಾಗಿದ್ದು, ಇದುವರೆಗೆ 1 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕ ಮಂದಿ ಈ ನೀಲ ತಿಮಿಂಗಿಲ ಕಡಲ ತೀರದಲ್ಲಿ ಕಂಡುಬಂದುದು ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸಂತಬೊಮ್ಮಲಿ ಮಂಡಲದ ಮೇಘವರಂ ಗ್ರಾಮದ ಸಮುದ್ರ ದಂಡೆಯಲ್ಲಿ ಸತ್ತ ಬೃಹತ್‌ ಗಾತ್ರದ ತಿಮಿಂಗಿಲವೊಂದು ಪತ್ತೆಯಾಗಿತ್ತು. ಆ ತಿಮಿಂಗಿಲದ ಮೃತದೇಹವನ್ನು ಜನರು ವೀಕ್ಷಿಸುವ ವಿಡಿಯೊಗಳೊಂದಿಗೆ ಕೆಲವು ಸಮಯದ ಹಿಂದೆ ಎಲ್ಲೆಡೆ ಹರಿದಾಡಿತ್ತು. ಆಗ ಸತ್ತ ತಿಮಿಂಗಿಲವನ್ನು ಪರೀಕ್ಷಿಸಿದ ತಜ್ಞರು ಅದರ ವಿಶಿಷ್ಟ ಭೌತಿಕ ಗುಣಲಕ್ಷಣಗಳ ಆಧಾರದಲ್ಲಿ ಬ್ರೈಡ್ಸ್ ತಿಮಿಂಗಿಲ ಎಂದು ಗುರುತಿಸಿದ್ದರು. ಉಷ್ಣವಲಯದ ತಿಮಿಂಗಿಲಗಳು ಎಂದು ಕರೆಯಲ್ಪಡುವ ಬ್ರೈಡ್ಸ್ ತಿಮಿಂಗಿಲಗಳು ನಯವಾದ ದೇಹಗಳು ಮತ್ತು ತೆಳುವಾದ, ಚೂಪಾದ ಈಜಲು ಸಹಾಯ ಮಾಡುವ ಕೈಯಂತಹ ರಚನೆಗಳನ್ನು ಹೊಂದಿದೆ.

ಬೃಹತ್‌ ಗಾತ್ರ, ತೂಕ

ಕಲ್ಲಿಕೋಟೆಯಲ್ಲಿ ಕಂಡುಬಂದ ತಿಮಿಂಗಿಲ ಸುಮಾರು 50 ಅಡಿಗಳಷ್ಟು ಉದ್ದದ ದೇಹ ಹೊಂದಿದೆ. ತೂಕ ಸುಮಾರು 5 ಟನ್‌ ಇರಬಹುದು ಎಂದು ಅಂದಾಜಿಸಲಾಗಿದೆ. ಆಳವಿಲ್ಲದ ನೀರಿನಲ್ಲಿ ಸಿಕ್ಕಿ ಬಿದ್ದಿದ್ದರಿಂದ ಈ ತಿಮಿಂಗಿಲ ಅಲ್ಲಿಂದ ಹೊರ ಬರಲಾರದೆ ಮೃತಪಟ್ಟಿದ್ದಿರಬಹುದು ಎಂದು ಸ್ಥಳೀಯ ಮೀನುಗಾರರು ಊಹಿಸಿದ್ದಾರೆ.

ನೆಟ್ಟಿಗರು ಏನಂತಾರೆ?

ಈ ವಿಡಿಯೊ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ”ದಯವಿಟ್ಟು ಆ ತಿಮಿಂಗಿಲದ ಮೃತದೇಹದ ಬಳಿ ಹೋಗಬೇಡಿ. ಅದು ಹೆಪ್ಪುಗಟ್ಟಿದರೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಇದು ಬಹಳ ಅಪಾಯಕಾರಿ” ಎಂದು ಒಂದಿಬ್ಬರು ಎಚ್ಚರಿಸಿದ್ದಾರೆ. ”ಸ್ಫೋಟಗೊಳ್ಳುವ ಮುನ್ನ ಅಧಿಕಾರಿಗಳು ಇದನ್ನು ವಿಲೇವಾರಿ ಮಾಡಬೇಕು” ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Viral News: ಹುಟ್ಟುಹಬ್ಬದಂದು ಮಗಳಿಗೆ ಕೊಳಕು ನೀರು ತುಂಬಿದ ಬಾಟಲಿ ನೀಡಿದ ತಂದೆ; ಹಿಂದಿದೆ ಅದ್ಭುತ ಪಾಠ

ತಿಮಿಂಗಿಲಗಳ ಮೃತದೇಹ ಸ್ಫೋಟಗೊಳ್ಳುತ್ತಾ?

ಹೀಗೊಂದು ಕುತೂಹಲ ಕೆಲವರಲ್ಲಿದೆ. ಇಂತಹ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ದೊಡ್ಡ ತಿಮಿಂಗಿಲಗಳ ಶವದ ಒಳಗೆ ಅನಿಲಗಳು ನಿರ್ಮಾಣವಾದಾಗ ಸ್ಫೋಟಗೊಳ್ಳಬಹುದು. ಕೆಲವೊಮ್ಮೆ ಈ ಸ್ಫೋಟ ಸಣ್ಣ ಪ್ರಮಾಣದಲ್ಲಿದ್ದರೆ ಇನ್ನು ಕೆಲವೊಮ್ಮೆ ಬೃಹತ್ ಪ್ರಮಾಣದಲ್ಲಿರುತ್ತದೆ. ಇದಕ್ಕೆ ಉದಾಹರಣೆಗಳೂ ಇವೆ. 2004ರ ಜನವರಿ 29ರಂದು ತೈವಾನ್‌ನ ತೈನಾನ್ ನಗರದಲ್ಲಿ ತಿಮಿಂಗಿಲದ ಶವ ಸ್ಫೋಟಿಸಿತು. 2021ರ ಆಗಸ್ಟ್‌ನಲ್ಲಿ ಅಮೇರಿಕಾದ ಟೊಮಾಲೆಸ್ ಕೊಲ್ಲಿಯ ಬಳಿ ತಿಮಿಂಗಿಲ ಸ್ಫೋಟಗೊಳ್ಳುವ ವಿಡಿಯೊ ವೈರಲ್‌ ಆಗಿತ್ತು.

Exit mobile version