ಮುಂಬೈ: ನಿಮಗೆ ನೃತ್ಯ ಮಾಡಿ ಎಂದರೆ ಎಷ್ಟು ಹೊತ್ತು ಮಾಡಬಲ್ಲಿರಿ? ಐದು , ಹತ್ತು ನಿಮಿಷ ಅಥವಾ ಹೆಚ್ಚೆಂದರೆ ಒಂದರ್ಧ ಗಂಟೆ. ಅದಕ್ಕಿಂತ ಹೆಚ್ಚು ಮಾಡುವುದಕ್ಕೆ ಸಾಧ್ಯವಾಗದೆ ಆಯಸ್ಸಿನಲ್ಲಿ ಕುಳಿತುಬಿಡುತ್ತೀರಿ. ಆದರೆ ಮಹಾರಾಷ್ಟ್ರದ ಈ ಬಾಲಕಿ ಹಾಗಲ್ಲ. ಬರೋಬ್ಬರಿ ಐದು ದಿನಗಳ ಕಾಲ ಬಿಡದೆ ನೃತ್ಯ ಮಾಡಿರುವ ಈ ಬಾಲಕಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅನ್ನೇ (Viral News) ಬರೆದಿದ್ದಾಳೆ.
ಮಹಾರಾಷ್ಟ್ರದ ಲಾಥೂರ್ ಜಿಲ್ಲೆಯ 16 ವರ್ಷದ ಬಾಲಕಿ ಸೃಷ್ಟಿ ಸುಧೀರ್ ಜಗಪತ್ ಈ ದಾಖಲೆ ಬರೆದಿರುವ ಬಾಲಕಿ. ಈಕೆ ಮೇ 29ರ ಬೆಳಗ್ಗೆ ನೃತ್ಯ ಮಾಡಲು ಆರಂಭಿಸಿದ್ದು ಜೂನ್ 3ರ ಮಧ್ಯಾಹ್ನಕ್ಕೆ ನೃತ್ಯ ನಿಲ್ಲಿಸಿದ್ದಾಳೆ. ಬರೋಬ್ಬರಿ 128 ತಾಸುಗಳ ಕಾಲ ನೃತ್ಯ ಮಾಡಿದ್ದಾಳೆ. ಇದಕ್ಕೂ ಮೊದಲು ನೇಪಾಳದ ಮಹಿಳೆಯೊಬ್ಬರು 127 ತಾಸು ನೃತ್ಯ ಮಾಡಿ ದಾಖಲೆ ಬರೆದಿದ್ದರು. ಇದೀಗ ನಮ್ಮ ಭಾರತದ ಸೃಷ್ಟಿ ಆ ದಾಖಲೆಯನ್ನು ಮುರಿದಿದ್ದಾಳೆ.
ಇದನ್ನೂ ಓದಿ: Viral News : ಈ ದೇಶಕ್ಕೆ ಹೋಗಿ ವಾಸಿಸೋದಾದರೆ ಅಲ್ಲಿನ ಸರ್ಕಾರವೇ ನಿಮಗೆ ಕೊಡತ್ತೆ 71 ಲಕ್ಷ ರೂ!
ಈ ದಾಖಲೆ ನಿರ್ಮಾಣ ಮಾಡುವುದಕ್ಕೆಂದು ಸೃಷ್ಟಿ ಸಾಕಷ್ಟು ತರಬೇತಿ ಪಡೆದಿದ್ದಾಳೆ. ಬೆಳಗ್ಗೆ ಮೂರು ಗಂಟೆಗೆ ಎದ್ದೇಳುವ ಆಕೆ ನಾಲ್ಕು ತಾಸು ಧ್ಯಾನ, ಆರು ತಾಸು ನೃತ್ಯ ತರಬೇತಿ ಮತ್ತು ಮೂರು ತಾಸು ದೈಹಿಕ ವ್ಯಾಯಾಮ ಮಾಡುತ್ತಾಳೆ. ಮತ್ತೆ ರಾತ್ರಿ 10 ಗಂಟೆಗೆ ಮಲಗಿ ಒಟ್ಟು ಐದು ತಾಸುಗಳ ನಿದ್ರೆ ಮಾಡುತ್ತಾಳೆ. ಈಕೆಯ ದಾಖಲೆ ನಿರ್ಮಾಣಕ್ಕೆಂದು ಬಾಲಕಿ ಓದುವ ಶಾಲೆಯ ವೇದಿಕೆಯಲ್ಲೇ ವ್ಯವಸ್ಥೆ ಮಾಡಿಕೊಡಲಾಗಿತ್ತು.
ಸೃಷ್ಟಿಗೆ ಪ್ರತಿ ಗಂಟೆಗೆ ಐದು ನಿಮಿಷಗಳ ಕಾಲ ವಿಶ್ರಾಂತಿ ಪಡೆಯುವುದಕ್ಕೆ ಅವಕಾಶವಿತ್ತು. ಆ ಅವಕಾಶವನ್ನು ಆಕೆ ಮಧ್ಯ ರಾತ್ರಿಯ ವೇಳೆಗಳಲ್ಲಿ ಬಳಸಿಕೊಂಡಿದ್ದಾಳೆ. ಬಾಲಕಿಯ ಪ್ರೋತ್ಸಾಹಕ್ಕೆ ನಿಂತ ಪೋಷಕರು ಆಕೆಯ ಮುಖಕ್ಕೆ ಆಗಾಗ ನೀರು ಚಿಮುಕಿಸಿ ಉತ್ತೇಜಿಸುತ್ತಿದ್ದರಂತೆ. ಈ 128 ತಾಸುಗಳ ಕಾಲವೂ ಆಕೆ ಕತಕ್ ನೃತ್ಯ ಮಾಡಿದ್ದಾಳೆ. ಭಾರತವನ್ನು ನೃತ್ಯದ ಮೂಲಕ ದಾಖಲೆಯಲ್ಲಿ ಇರಿಸಬೇಕು ಎನ್ನುವ ಕಾರಣಕ್ಕೆ ಈ ಪ್ರಯತ್ನ ಮಾಡಿದ್ದಾಗಿ ಸೃಷ್ಟಿ ಹೇಳಿದ್ದಾಳೆ.