ಬೆಂಗಳೂರು: ಹಾವು ಕಂಡರೆ ಮಾರು ದೂರ ಓಡುವವರಿದ್ದಾರೆ. ಬೇರೆ ಎಲ್ಲದಕ್ಕಿಂತ ಹಾವು ಕಂಡರೇ ಹೆಚ್ಚು ಭಯ ಎಂದು ಹೇಳುವವರನ್ನೂ ನೀವು ನೋಡಿರುತ್ತೀರಿ. ಇನ್ನು ಕೆಲವರು ಆ ಹಾವುಗಳನ್ನೇ ತಮ್ಮ ಸ್ನೇಹಿತರೇನೋ ಎನ್ನುವಂತೆ ಹಿಡಿದುಕೊಳ್ಳುವವರೂ ಇರುತ್ತಾರೆ. ಅದೇ ರೀತಿಯಲ್ಲಿ ಯುವತಿಯೊಬ್ಬಳು ಒಂದಲ್ಲ, ಎರಡಲ್ಲ, ಒಟ್ಟು ಮೂರು ಹಾವುಗಳನ್ನು ಒಂದೇ ಕೈನಲ್ಲಿ ನಿರ್ಭಯವಾಗಿ ಹಿಡಿದುಕೊಂಡಿರುವ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ವೈರಲ್ (Viral Video) ಆಗಿದೆ.
ಇಂಥದ್ದೊಂದು ವಿಡಿಯೊವನ್ನು ಶೀತಲ್ ಕಸರ್ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ನೀಲಿ ಬಣ್ಣದ ಟಿ ಶರ್ಟ್ ಜತೆ ಬೂದು ಬಣ್ಣದ ಪ್ಯಾಂಟ್ ಧರಿಸಿರುವ ಶೀತಲ್ ಒಂದೇ ಕೈನಲ್ಲಿ ಮೂರು ಹಾವನ್ನು ಹಿಡಿದುಕೊಂಡಿರುವುದನ್ನು ಕಾಣಬಹುದು. ಆ ಹಾವುಗಳು ಆಕೆಯ ಕೈ ಮೂಲಕ ಭುಜದ ಹತ್ತಿರಕ್ಕೆ ಬರುವುದನ್ನು ವಿಡಿಯೊದ ಅಂತ್ಯದಲ್ಲಿ ನೀವು ಕಾಣಬಹುದು. ಭಯಾನಕವಾಗಿ ಕಾಣುವ ಹಾವುಗಳನ್ನು ಯುವತಿ ಹಿಡಿದುಕೊಂಡಿದ್ದರೆ, ಹಾವುಗಳು ಆಕೆಗೆ ಏನೂ ಮಾಡದೆ ತಮ್ಮ ಪಾಡಿಗೆ ತಾವಿರುವುದು ವಿಶೇಷವಾಗಿದೆ.
ಇದನ್ನೂ ಓದಿ: Viral Video: ಏರ್‌ಪೋರ್ಟ್‌ಗೆ ನುಗ್ಗಿದ ಮಂಗಣ್ಣ! ಯಾವ ಊರಿಗೆ ಪ್ರಯಾಣಿಸಬೇಕೆಂದು ಕಾಲೆಳೆದ ನೆಟ್ಟಿಗರು
ಈ ವಿಡಿಯೊವನ್ನು ಶೀತಲ್ ಕಸರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರು ದಿನಗಳ ಮೊದಲು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ಈ ವಿಡಿಯೊವನ್ನು 1.2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಐದು ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್ ಮಾಡಿದ್ದಾರೆ. ಹಾಗೆಯೇ ನೂರಾರು ಮಂದಿ ಈ ಯುವತಿಯ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಮತ್ತು ಕುಟುಂಬಸ್ಥರೊಂದಿಗೆ ಹಂಚಿಕೊಂಡಿದ್ದಾರೆ. ಹಲವಾರು ಮಂದಿ ವಿಡಿಯೊ ಬಗ್ಗೆ ಹಲವಾರು ರೀತಿಯ ಕಾಮೆಂಟ್‌ಗಳನ್ನು ಮಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
“ಅಬ್ಬಾ, ಇದು ಎಷ್ಟೊಂದು ಅಪಾಯದ ಕೆಲಸ”, “ಅದು ಯಾವ ಹಾವುಗಳು? ಅವು ಯುವತಿಯನ್ನು ಕಚ್ಚುತ್ತಿಲ್ಲ ಏಕೆ?” ಎಂದು ಜನರು ಕೇಳಲಾರಂಭಿಸಿದ್ದಾರೆ. ಎಷ್ಟೋ ಮಂದಿ ವಿಡಿಯೊಗೆ “ವಾವ್” ಎಂದು ಕಾಮೆಂಟ್‌ಗಳನ್ನು ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
ಅಂದ ಹಾಗೆ ಈ ಶೀತಲ್ ಅವರ ಇನ್‌ಸ್ಟಾಗ್ರಾಂನಲ್ಲಿ ಹಾವಿನ ವಿಡಿಯೊ ಇರುವುದು ಇದೊಂದೇ ಅಲ್ಲ. ಇವರು ತಮ್ಮ ಪ್ರೊಫೈಲ್‌ನಲ್ಲಿ ತಾವು ವನ್ಯಜೀವಿಗಳ ರಕ್ಷಕಿ ಎಂದು ಹೇಳಿಕೊಂಡಿದ್ದಾರೆ. ಈಕೆ ಹಲವಾರು ಕಡೆಗಳಲ್ಲಿ ಹಾವುಗಳನ್ನು ಭಯವಿಲ್ಲದೆ ಹಿಡಿಯುವ ವಿಡಿಯೊಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅದರಿಂದಾಗಿ ಈಕೆಗೆ 95 ಸಾವಿರದಷ್ಟು ಫಾಲೋವರ್‌ಗಳು ಇದ್ದಾರೆ.
ಹಿಂದೊಮ್ಮೆ ಅವರು ಯಾರದ್ದೋ ಹೊಲದ ಬಾವಿಯೊಳಗೆ ಬಿದ್ದಿದ್ದ ನಾಗರ ಹಾವನ್ನು ರಕ್ಷಿಸಿದ್ದರು. ಹಾವನ್ನು ರಕ್ಷಿಸಲೆಂದು ತಾವೇ ಬಾವಿಗೆ ಇಳಿದು ರಕ್ಷಣೆ ಮಾಡಿದ ವಿಡಿಯೊವನ್ನು ಜುಲೈ 14ರಂದು ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಆ ವಿಡಿಯೊವನ್ನು 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 80 ಸಾವಿರದಷ್ಟು ಮಂದಿ ಆ ವಿಡಿಯೊವನ್ನು ಮೆಚ್ಚಿಕೊಂಡಿದ್ದರು. ನೂರಾರು ಮಂದಿ ಆ ವಿಡಿಯೊಗೆ ಮೆಚ್ಚುಗೆಯ ಕಾಮೆಂಟ್‌ಗಳನ್ನೂ ಮಾಡಿದ್ದರು.