ಲಖನೌ: ಸಂಭ್ರಮವೇ ತುಂಬಿ ತುಳುಕುತ್ತಿದ್ದ ಮದುವೆ ಮನೆಯೊಂದು ವರ ಮಾಡಿದ ಒಂದು ಕೆಲಸದಿಂದಾಗಿ ದುಃಖದ ಮನೆಯಾಗಿ ಬದಲಾಯಿತು. ಮೆರವಣಿಗೆ ವೇಳೆ ಸಂಭ್ರಮದ ಆಚರಣೆ ಮಾಡಲು ಹೋದ ಅವನು, ಕ್ರೈಂ ಮಾಡಿಬಿಟ್ಟಿದ್ದ. ವರ ಈಗ ಅರೆಸ್ಟ್ ಆಗಿದ್ದಾನೆ. ಮದುವೆ ಅರ್ಧಕ್ಕೇ ನಿಂತಿದೆ. ಅಷ್ಟಕ್ಕೂ ಆಗಿದ್ದೇನು? ಅಲ್ಲೇನು ಕ್ರೈಂ ನಡೆಯಿತು? ಇಲ್ಲಿದೆ ನೋಡಿ ವಿವರ
ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯ ಬ್ರಹ್ಮನಗರದ ಮನೆಯೊಂದರಲ್ಲಿ ಮದವೆ ಸಂಭ್ರಮ. ಅದ್ದೂರಿಯಾಗಿಯೇ ಪ್ರಾರಂಭವಾಗಿತ್ತು ವರನ ಮೆರವಣಿಗೆ. ಆ ವರ ಭರ್ಜರಿ ಅಲಂಕಾರ ಮಾಡಿಕೊಂಡು ರಥದ ಮೇಲೆ ನಿಂತಿದ್ದ. ತನ್ನ ಮದುವೆ ಕಾರಣಕ್ಕೆ ಸಿಕ್ಕಾಪಟೆ ಖುಷಿಯಲ್ಲೂ ಇದ್ದ. ವರನ ಮೆರವಣಿಗೆ ವೇಳೆ ಪಟಾಕಿ ಹೊಡೆಯುವುದು ಸಾಮಾನ್ಯ. ಕೆಲವರು ಗಾಳಿಯಲ್ಲಿ ಗುಂಡು ಕೂಡ ಹಾರಿಸುತ್ತಾರೆ. ಹಾಗೇ ಈ ವರ ಕೂಡ ರಥದ ಮೇಲೆ ನಿಂತು, ಕೈಯಲ್ಲಿ ಪಿಸ್ತೂಲ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ. ಆದರೆ ಅದು ಗುಂಡು ಹಾರಲಿಲ್ಲ. ಅದೇನಾಯಿತು ಎಂದು ನೋಡಲು ಅವನು ಗನ್‌ನ್ನು ಕೆಳಗೆ ಇಳಿಸುತ್ತಿದ್ದಂತೆ ಗುಂಡು ಹಾರಿದೆ. ಆ ಗುಂಡು ವರನ ಆತ್ಮೀಯ ಸ್ನೇಹಿತ ಬಾಬು ಲಾಲ್ ಯಾದವ್ ಎಂಬುವರ ಪ್ರಾಣ ತೆಗೆದಿದೆ. ಬಾಬು ಲಾಲ್ ಸೈನಿಕನಾಗಿದ್ದು ಮಿತ್ರನ ಮದುವೆಗಾಗಿ ಬಂದು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಅದೇ ಸ್ನೇಹಿತನ ಗುಂಡೇಟಿಗೆ ಬಲಿಯಾಗಿದ್ದಾರೆ.
ವರನ ಹೆಸರು ಮನೀಶ್ ಮಾದೇಶಿಯಾ ಎಂದಾಗಿದ್ದು, ಮೃತನ ಕುಟುಂಬದವರು ನೀಡಿದ ದೂರಿನ ಅನ್ವಯ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಸೋನಭದ್ರಾ ಎಸ್‌ಪಿ ಅಮ್ರೇಂದ್ರ ಪ್ರತಾಪ್ ಸಿಂಗ್ ಮಾಹಿತಿ ನೀಡಿದ್ದಾರೆ. ಮೃತ ಯುವಕ ಮತ್ತು ವರ ಇಬ್ಬರೂ ಸ್ನೇಹಿತರು. ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಯಾದವ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಅಯೋಧ್ಯೆ ನದಿಯಲ್ಲಿ ಸ್ನಾನ ಮಾಡುವಾಗ ಪತ್ನಿಗೆ ಮುತ್ತುಕೊಟ್ಟು ಜನರಿಂದ ಗೂಸಾ ತಿಂದ!