ಈ ಗಿನ್ನಿಸ್ ದಾಖಲೆ ಎಂಬ ದುನಿಯಾವೇ ವಿಚಿತ್ರ. ಇದರೊಳಕ್ಕೆ ಹೊಕ್ಕರೆ ಪ್ರಪಂಚದಲ್ಲಿ ಎಷ್ಟೆಲ್ಲ ಚಿತ್ರ ವಿಚಿತ್ರ ಸಂಗತಿಗಳು ನಡೆಯುತ್ತದಲ್ಲ ಎಂದು ಆಶ್ಚರ್ಯವಾಗುತ್ತದೆ. ಮೀಟರ್‌ಗಟ್ಟಲೆ ಉದ್ದ ಉಗುರು ಬೆಳೆಸಿ ಮಾಡುವ ದಾಖಲೆಯಿಂದ ಹಿಡಿದು ಜೀವ ಒತ್ತೆ ಇಟ್ಟು ಮಾಡುವ ಸಾಹಸಗಳವರೆಗೆ ಥರಹೇವಾರಿ ದಾಖಲೆಗಳು ಇದರಲ್ಲಿ ಇತಿಹಾಸವಾಗುತ್ತದೆ. ಎಲ್ಲರೂ ಮಾಡದ, ಎಲ್ಲರಿಗೂ ಮಾಡಲಾಗದ ಏನನ್ನೋ ಮಾಡಿ ಜಗತ್ತಿಗೇ ತೋರಿಸುವುದು ಹಲವರಿಗೆ ತಮ್ಮ ಜೀವನದ ಮುಖ್ಯ ಮೈಲುಗಲ್ಲಾಗಿರುತ್ತದೆ. ಇಲ್ಲೂ ಅಂಥದ್ದೇ ಒಂದು ಸಾಹಸ ಇದೀಗ ಗಿನ್ನಿಸ್ ದಾಖಲೆ ಬರೆದಿದ್ದು, ಇದನ್ನು ನೋಡುತ್ತಾ ನೋಡುತ್ತಾ ನಮ್ಮ ಎದೆ ಬಡಿತ ಹೆಚ್ಚಾಗಿ ಕುರ್ಚಿಯ ತುದಿಗೆ ಬಂದಿರುತ್ತೇವೆ!
ನಿಂತ ಕಾರಿನ ಚಕ್ರ ಬದಲಾಯಿಸಲು ನಾವು ನೀವೆಲ್ಲ ಪರದಾಡುತ್ತೇವೆ. ಆದರೆ ಇಟಲಿಯ ಮಿಲಾನ್‌ನಲ್ಲಿ ಈ ಇಬ್ಬರು ಓಡುತ್ತಿರುವ ಕಾರಿನ ಚಕ್ರವನ್ನು ಅತೀ ಕಡಿಮೆ ಸಮಯದಲ್ಲಿ ಬದಲಾಯಿಸುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಆ ಮೂಲಕ ಹೀಗೂ ಉಂಟೇ ಎಂದು ಎಲ್ಲರನ್ನೂ ಚಕಿತರನ್ನಾಗಿಸಿದ್ದಾರೆ.
ಕಾರು ಚಲಾಯಿಸುತ್ತಿದ್ದ ಮ್ಯಾನುಯೆಲ್ ಝೋಲ್ಡನ್ ಹಾಗೂ ಚಕ್ರ ಬದಲಾವಣೆ ಮಾಡುವುದರಲ್ಲಿ ಪಳಗಿದ ಕೈ ಎಂದೇ ಹೆಸರಾಗಿದ್ದ ಗಿಯಾನ್ಲುಕಾ ಫಾಲ್ಕೋ ಈ ಕಾರ್ಯ ಮಾಡಿದ್ದಾರೆ. ಇಟಲಿಯ ಗಿನ್ನಿಸ್ ರೆಕಾರ್ಡ್ ಒಂದರ ಕಾರ್ಯಕ್ರಮ ʻಲೋ ಸೋ ಡಿ ರೆಕಾರ್ಡ್ʼದಲ್ಲಿ ಇವರು ಇದರ ಪ್ರದರ್ಶನ ಮಾಡಿದ್ದು, ಇದೇ ವಿಭಾಗದಲ್ಲಿದ್ದ ಹಳೆಯ ಇನ್ನೊಂದು ದಾಖಲೆಯನ್ನೂ ಮುರಿದಿದ್ದಾರೆ. ಒಂದು ನಿಮಿಷ ೧೭ ಸೆಕೆಂಡುಗಳಲ್ಲೇ ಚಕ್ರ ಬದಲಿಸಿ, ಹಳೆಯ ಒಂದು ನಿಮಿಷ ೩೦ ಸೆಕೆಂಡುಗಳಲ್ಲಿದ್ದ ದಾಖಲೆಯನ್ನು ಇವರು ಮುರಿದಿದ್ದಾರೆ.
ಇದನ್ನೂ ಓದಿ | Spinning Swing | ಮೇಲಿನಿಂದ ನೆಲಕ್ಕೆ ಅಪ್ಪಳಿಸಿದ ಸ್ಪಿನ್ನಿಂಗ್ ಸ್ವಿಂಗ್! 10ಕ್ಕೂ ಹೆಚ್ಚು ಜನರಿಗೆ ಗಾಯ, ವಿಡಿಯೋ ವೈರಲ್
ಮ್ಯಾನುಯೆಲ್ ಝೋಲ್ಡನ್ ಕಾರು ಚಾಲನೆ ಮಾಡುತ್ತಲೇ, ಕಾರನ್ನು ಒಂದು ಬದಿಗೆ ವಾಲಿಸಿ ಕೇವಲ ಎರಡೇ ಚಕ್ರಗಳಲ್ಲಿ ಕಾರನ್ನು ಚಲಿಸುವಂತೆ ಮಾಡಿ, ಆ ಸಂದರ್ಭ ಕಾರಿನ ಕಿಟಕಿಯಿಂದ ಗಿಯಾನ್ಲುಕಾ ಫಾಲ್ಕೋ ಹೊರ ತಲೆಹಾಕಿ ಬಗ್ಗೆ ಕಾರಿನ ಚಕ್ರವನ್ನು ಬದಲಾಯಿಸಿದ್ದಾರೆ. ಕೇವಲ ಒಂದು ನಿಮಿಷ ೧೭ ಸೆಕೆಂಡುಗಳಲ್ಲಿ ಚಕ್ರವನ್ನು ಬದಲಾಯಿಸಿ ಕಾರನ್ನು ಮತ್ತೆ ಸಹಜ ಸ್ಥಿತಿಗೆ ತರಲಾಗುತ್ತದೆ. ಈ ಚಕ್ರ ಬದಲಾವಣೆಯ ಸಮಯ ಕಾರು ಎರಡೂ ಚಕ್ರಗಳಲ್ಲಿ ಚಾಲನೆಯಲ್ಲೇ ಇದ್ದಿದ್ದು ಈ ದಾಖಲೆಯ ವಿಶೇಷ.
ಇಂತಹ ಚಿತ್ರ ವಿಚಿತ್ರ ದಾಖಲೆಗಳೇನೂ ಗಿನ್ನಿಸ್‌ಗೇನೂ ಹೊಸತಲ್ಲ. ಹಿಂದೆ ತಮಿಳುನಾಡಿನಲ್ಲೊಬ್ಬರು ಕೇವಲ ಮೂಗಿನ ಮೂಲಕ ಲಾರಿ ಟ್ಯೂಬ್‌ಗೆ ಗಾಳಿ ಭರ್ತಿ ಮಾಡುವ ವಿಚಿತ್ರ ದಾಖಲೆ ಮಾಡಿದ್ದರು. ಸೇಲಂನ ನಟರಾಜ್ ಎಂಬವರು ಮೂರು ಲಾರಿ ಟ್ಯೂಬ್‌ಗಳಿಗೆ ಕೇವಲ ಒಂಭತ್ತು ನಿಮಿಷ ೪೫ ಸೆಕೆಂಡುಗಳಲ್ಲಿ ಮೂಗಿನ ಹೊಳ್ಳೆಯ ಮೂಲಕ ಗಾಳಿ ಹಾಕಿ ಟ್ಯಾಲೆಂಟ್ ಬುಕ್ ಆಫ್ ರೆಕಾರ್ಡಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಯೋಗಪಟುವಾಗಿರುವ ಈ ನಟರಾಜ್ ೯೮ ಬಾರಿ ಈ ದಾಖಲೆ ಮಾಡಿದ್ದು ಗಿನ್ನಿಸ್ ದಾಖಲೆಯಲ್ಲೂ ಸ್ಥಾನ ಗಿಟ್ಟಿಸಿಕೊಂಡದ್ದನ್ನು ಇಲ್ಲಿ ನೆನಪಿಸಬಹುದು.
ಹಾಗಂತ ಈ ಗಿನ್ನಿಸ್ ದಾಖಲೆಗಳನ್ನು ನೋಡಿ ತಾನೂ ಮೂಗಿನಲ್ಲಿ ಚಕ್ರಕ್ಕೆ ಗಾಳಿ ತುಂಬಿಸುತ್ತೇನೆ, ಓಡುವ ಕಾರಿನ ಚಕ್ರ ಬದಲಾಯಿಸುತ್ತೇನೆ ಎಂದೆಲ್ಲ ಸಾಹಸಕ್ಕೆ ಮುಂದಾಗದಿರಿ. ಮೂಗಿನಲ್ಲಿ ಗಾಳಿ ತುಂಬಿಸುವುದೂ ಕೂಡಾ ಸಾವಿಗೆ ಕಾರಣವಾಗಬಹುದು, ದಯವಿಟ್ಟು ನೀವು ಪ್ರಯತ್ನ ಮಾಡಬೇಡಿ ಎಂದು ಸ್ವತಃ ನಟರಾಜ್ ಹೇಳಿದ್ದರು.
ಹಾಗೆಯೇ, ಇಟಲಿಯ ಈ ಇಬ್ಬರನ್ನು ನೋಡಿ ನೀವು ಓಡುವ ಚಕ್ರವನ್ನು ಒಂದು ಬದಿಗೆ ವಾಲಿಸಿ, ಚಕ್ರ ಬದಲಿಸುತ್ತೇನೆ ಎಂಬ ಸಾಹಸಕ್ಕೆ ತಲೆ ಹಾಕಬೇಡಿ. ನಿಮ್ಮ ಜೀವದ ಜವಾಬ್ದಾರಿ ನಿಮ್ಮದೇ ಎಂದು ನೆನಪಿಡಿ.
ಇದನ್ನೂ ಓದಿ | Viral news | ಫ್ರೀಜರ್ ತುಂಡಿನಲ್ಲಿ ತೇಲುತ್ತಾ 11 ದಿನ ಸಮುದ್ರದಲ್ಲಿ ಬದುಕುಳಿದ!