Site icon Vistara News

Guinness World Records: ವಿಶ್ವದ ಅತೀ ಗಿಡ್ಡ ಮನುಷ್ಯ, ಅತೀ ಎತ್ತರದ ಮನುಷ್ಯನ ಕಾಲ್ತುಳಿತಕ್ಕೆ ಸಿಕ್ಕರೆ!?

tallest man shortest man

ವಿಶ್ವದ ಅತೀ ಎತ್ತರದ ಮನುಷ್ಯನ (world’s tallest man) ಕಾಲ್ತುಳಿತಕ್ಕೆ ಸಿಕ್ಕಿ ಅತೀ ಗಿಡ್ಡದ ಮನುಷ್ಯ (world’s shortest man) ಅಪ್ಪಚ್ಚಿಯಾಗಿಬಿಟ್ಟರೆ?!

ಹೌದು ಹೀಗೊಂದು ಯೋಚನೆ ಇನ್ಯಾರದೋ ತಲೆಯಲ್ಲಿ ನುಸುಳಿದ್ದಲ್ಲ. ಸ್ವತಃ ವಿಶ್ವದ ಅತೀ ಉದ್ದದ ಮನುಷ್ಯನಿಗೇ ಅನಿಸಿತ್ತಂತೆ. ಹಾಗಂತ ತನ್ನ ಹಳೆಯ ನೆನಪುಗಳನ್ನು ಅವರು ಮೆಲುಕು ಹಾಕಿಕೊಂಡಿದ್ದಾರೆ. ಅತೀ ಗಿಡ್ಡದ ಮನುಷ್ಯನನ್ನು ಭೇಟಿಯಾದ ಸಂದರ್ಭ ತಾನೆಲ್ಲಿ ಆತನನ್ನು ತಿಳಿಯದೆ ತುಳಿದುಬಿಟ್ಟು ಎಲುಬು ಪುಡಿಪುಡಿಯಾಗಿಸುತ್ತೇನೋ ಎಂದು ಗಾಬರಿಯಾಗಿಬಿಟ್ಟಿತ್ತಂತೆ!

ಎಂಟು ಅಡಿ ಮೂರು ಇಂಚು ಎತ್ತರವಿರುವ ವಿಶ್ವದ ಅತೀ ಎತ್ತರದ ಮನುಷ್ಯ ಎಂಬ ಗಿನ್ನಿಸ್‌ ದಾಖಲೆ ಹೊಂದಿರುವ ಟರ್ಕಿಯ ಸುಲ್ತಾಣ್‌ ಕೋಸೆನ್‌ ಎಂಬಾತ ಲಂಡನ್ನಲ್ಲಿ 2014ರಲ್ಲಿ ಗಿನ್ನಿಸ್‌ ದಾಖಲೆಯ ಸಂದರ್ಭ ವಿಶ್ವದ ಅತೀ ಕುಳ್ಳ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ, ಕೇವಲ ಒಂದು ಅಡಿ ಒಂಬತ್ತುವರೆ ಇಂಚು ಎತ್ತರದ ಭಾರತದ ಚಂದ್ರ ಬಹಾದೂರ್‌ ಡಂಗಿ ಎಂಬಾತನನ್ನು ಭೇಟಿಯಾಗಿದ್ದರು. ಭೇಟಿಯ ಸಂದರ್ಭ ತಾನೆಲ್ಲಿ ಗಿಡ್ಡದ ಮನುಷ್ಯನನ್ನು ತುಳಿದು ಅಪ್ಪಚ್ಚಿ ಮಾಡಿ ಬಿಡುತ್ತೇನೋ ಎಂದು ಹೆದರಿ, ʼದಯವಿಟ್ಟು, ಆತನನ್ನು ನನ್ನಿಂದ ದೂರ ಇರುವಂತೆ ಹೇಳಿʼ ಎಂದು ಆಗಾಗ ಗಿನ್ನಿಸ್‌ ಅಧಿಕಾರಿಗಳಿಗೆ ಹೇಳುತ್ತಲೇ ಇದ್ದರಂತೆ. ಆದರೆ, ಈ ಭಯ ಭೇಟಿಯ ನಂತರ ಮಾಯವಾಯಿತಂತೆ. ಇವರಿಬ್ಬರೂ ಪರಸ್ಪರ ಭೇಟಿಯಾಗಿ ಮಾತುಕತೆಯನ್ನೂ ನಡೆಸಿ, ವಿಚಾರ ವಿನಿಮಯವೂ ಸಾಕಷ್ಟು ನಡೆದು ಗೆಳೆಯರಾದರಂತೆ. ತನ್ನ ದೇಶವಾದ ಟರ್ಕಿಗೂ ಬರಲು ಸುಲ್ತಾನ್‌, ಚಂದ್ರ ಬಹಾದೂರ್‌ಗೆ ಹೇಳಿದ್ದರಂತೆ. ಆದರೆ, 2015ರಲ್ಲಿ ಚಂದ್ರ ಬಹಾದೂರ್‌ ಅವರ ನಿಧನದ ಸುದ್ದಿ ಕೇಳಿ ಸುಲ್ತಾನ್‌ ಬಹಳ ನೊಂದುಕೊಂಡರಂತೆ. ಹಾಗಂತ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಬಹಾದೂರ್‌ ನಂತರ 2018ರಲ್ಲಿ ವಿಶ್ವದ ಅತ್ಯಂತ ಗಿಡ್ಡ ಮಹಿಳೆ ಎಂಬ ಗಿನ್ನಿಸ್‌ ದಾಖಲೆ ಬರೆದ ಜ್ಯೋತಿ ಕಿಸಂಜಿ ಅಮ್ಗೆ ಅವರನ್ನೂ ಈಜಿಪ್ಟ್‌ನಲ್ಲಿ ಭೇಟಿಯಾಗಿದ್ದರು. ವಿಶ್ವದ ಅತ್ಯಂತ ಗಿಡ್ಡ ಮನುಷ್ಯರ ಜೊತೆಗೆ ಮಾತುಕತೆಯಾಡುವ ಸಂದರ್ಭ, ʻನಿಜವಾಗಿಯೂ ಅವರು ಏನು ಮಾತಾಡುತ್ತಿದ್ದರೆಂಬುದೂ ಕೇಳುತ್ತಿರಲಿಲ್ಲ, ಅಷ್ಟು ಅವರು ಗಿಡ್ಡವಿದ್ದರು, ನಾನೂ ಅಷ್ಟು ಉದ್ದವಿದ್ದೆʼ ಎಂದು ತಮಾಷೆಯಾಗಿ ಹೇಳಿಕೊಂಡಿದ್ದರು.

ಜೀವನದಲ್ಲಿ, ಈ ಉದ್ದ ದೇಹದ ಕಾರಣದಿಂದ ಯಾವುದನ್ನೂ ಸರಿಯಾಗಿ ಮಾಡಲಿಲ್ಲ. ಶಾಲೆಗೂ ಸರಿಯಾಗಿ ಹೋಗಲಾಗಲಿಲ್ಲ. ಕುರ್ಚಿಯಲ್ಲಿ ಕೂರಲು ನನ್ನ ದೇಹವೇ ಸಮಸ್ಯೆಯಾಯಿತು. ಯಾವ ಕೆಲಸವೂ ನನಗೆ ಹೊಂದಿಕೆಯಾಗುತ್ತಿರಲಿಲ್ಲ. ಆದರೂ ಜೀವನ ನಿರ್ವಹಣೆಗೆ ಒಂದಷ್ಟು ಕಾಲ ಅಲ್ಲಲ್ಲಿ ದುಡಿದೆ. ಆದರೆ, ಎಲ್ಲೂ ಶಾಶ್ವತವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ. ನನ್ನ ದೇಹವೇ ನನಗೆ ಸಮಸ್ಯೆ ಎಂದು ಅವರು ಹೇಳಿಕೊಂಡಿದ್ದಾರೆ.

2008ರಲ್ಲಿ ವಿಶ್ವದ ಅತೀ ಉದ್ದದ ಮನುಷ್ಯ ಎಂಬ ದಾಖಲೆ ಬರೆದ ಸುಲ್ತಾನ್‌ ಅವರು 20 ವರ್ಷಗಳ ಕಾಲ ಈ ದಾಖಲೆಯನ್ನು ಉಳಿಸಿಕೊಂಡಿದ್ದರು. ಇತ್ತೀಚೆಗೆ 2022ರಲ್ಲಿ ಒಂಬತ್ತು ಅಡಿ ಆರು ಇಂಚು ಎತ್ತರವಿರುವ ಘಾನಾದ ಸುಲೇಮಾನಾ ಅಬ್ದುಲ್‌ ಸಮೀದ್‌ ಎಂಬವರು ಸುಲ್ತಾನ್‌ ಅವರ ದಾಖಲೆಯನ್ನು ಮುರಿದು ವಿಶ್ವದ ಅತೀ ಎತ್ತರದ ಮನುಷ್ಯ ಎಂಬ ಗಿನ್ನಿಸ್‌ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡರು.

ಇದನ್ನೂ ಓದಿ: Guinness Records: ಗಿನ್ನೆಸ್​ ದಾಖಲೆ ಸೇರಿದ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂ

Exit mobile version