ವಿಶ್ವದ ಅತ್ಯಂತ ಎತ್ತರದ ವ್ಯಕ್ತಿ, ಅತಿ ಕುಳ್ಳನೆಯ ವ್ಯಕ್ತಿ, ವಿಶ್ವದಲ್ಲೇ ಅತ್ಯಂತ ಉದ್ದನೆಯ ಮೀಸೆ ಹೊಂದಿರುವವರು, ದೊಡ್ಡ ಪಾದ ಇರುವ ವ್ಯಕ್ತಿ..ಹೀಗೆ ವಿವಿಧ ಕಾರಣಗಳಿಗೆ ಗಿನ್ನೀಸ್ ವಿಶ್ವ ದಾಖಲೆ ಪುಸ್ತಕ ಸೇರಿದವರು ಇದ್ದಾರೆ. ಆದರೆ ವಿಶ್ವದಲ್ಲಿಯೇ ಅತ್ಯಂತ ಉದ್ದನೆಯ ಮೂಗು ಹೊಂದಿರುವ ವ್ಯಕ್ತಿ ಎಂದು ದಾಖಲೆ ಬರೆದವರು ಯಾರು? ಇಂಥದ್ದೊಂದು ದಾಖಲೆ ಗಿನ್ನೀಸ್ ಬುಕ್ನಲ್ಲಿ ಸೇರಿದೆಯಾ? -ಈ ಬಗ್ಗೆ ನಾವು-ನೀವು ಎಂದಿಗೂ ಆಲೋಚನೆ ಮಾಡಿರಲಿಕ್ಕಿಲ್ಲ. ಆದರೆ ಖಂಡಿತವಾಗಿಯೂ ಅಂಥದ್ದೊಂದು ದಾಖಲೆ ಇದೆ. ಹೀಗೊಂದು ವಿಚಿತ್ರ ಕಾರಣಕ್ಕೆ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಬುಕ್ ಸೇರಿದವರು ಥಾಮಸ್ ವೆಡರ್ಸ್. 18ನೇ ಶತಮಾನದಲ್ಲಿಯೇ ಬಾಳಿ-ಬದುಕಿದ್ದ ಇವರ ಮೂಗು 19 ಸೆಂಟಿಮೀಟರ್ (7.5 ಇಂಚು) ಉದ್ದ ಇತ್ತು. ಅವರು ಬದುಕಿದ್ದಾಗ ಇನ್ನೂ ಈ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಶುರುವಾಗಿ ಇಲ್ಲದ ಕಾರಣ, ಮರಣೋತ್ತರವಾಗಿ ಥಾಮಸ್ ಹೆಸರನ್ನು ದಾಖಲಿಸಲಾಗಿದೆ.
Historic Vids ಎಂಬ ಟ್ವಿಟರ್ ಅಕೌಂಟ್ನಲ್ಲಿ ಥಾಮಸ್ ವೆಡರ್ಸ್ ಕುತೂಹಲಕಾರಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇವರು ಇಂಗ್ಲೆಂಡ್ನವರಾಗಿದ್ದು, 1770ರ ದಶಕದಲ್ಲಿ ಇದ್ದರು. ಸರ್ಕಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಉದ್ದನೆಯ, ದಪ್ಪನೆಯ ಮೂಗಿನ ಕಾರಣಕ್ಕೆ ಸಿಕ್ಕಾಪಟೆ ಫೇಮಸ್ ಆಗಿದ್ದರು ಎಂದು ಈ ಟ್ವಿಟರ್ ಅಕೌಂಟ್ನಲ್ಲಿ ಹೇಳಲಾಗಿದೆ. ಈ ಟ್ವೀಟ್ಗೆ 1.16 ಲಕ್ಷ ಲೈಕ್ಸ್ಗಳು ಬಂದಿದ್ದು, 6,800 ಬಾರಿ ರೀಟ್ವೀಟ್ ಆಗಿದೆ. ವಿಶ್ವದ ಅತ್ಯಂತ ಉದ್ದನೆಯ ಮೂಗನ್ನು ಹೊಂದಿದ್ದ ವ್ಯಕ್ತಿ ಬಗ್ಗೆ ಅನೇಕರು ಗೂಗಲ್ನಲ್ಲೂ ಸರ್ಚ್ ಮಾಡಲು ಆರಂಭಿಸಿದ್ದಾರೆ.
ಅಂದಹಾಗೇ, ಥಾಮಸ್ ಮರಣೋತ್ತರವಾಗಿ ಗಿನ್ನೀಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದರೆ, ಸದ್ಯ ಜೀವಂತವಾಗಿರುವ ಟರ್ಕಿಯ ವ್ಯಕ್ತಿ, ಮೆಹ್ಮೆತ್ ಓಝುರೆಕ್ ಎಂಬುವರು ತಮ್ಮ ಅತ್ಯಂತ ಉದ್ದನೆಯ ಮೂಗಿನಿಂದ ಗಿನ್ನೀಸ್ ದಾಖಲೆ ಸೃಷ್ಟಿಸಿದ್ದಾರೆ. ಇವರ ಮೂಗು 8.80 ಸೆಂಟಿಮೀಟರ್ ಉದ್ದ (3.47 ಇಂಚು) ಇದೆ.
ಇದನ್ನೂ ಓದಿ: Viral Video | ಬಾಲಿಯಲ್ಲಿ ಸಾಂಪ್ರದಾಯಿಕ ಸಂಗೀತ ಸಾಧನ ಬಾರಿಸಿದ ಮೋದಿ, ಇಲ್ಲಿದೆ ವಿಡಿಯೊ