ಬಕ್ಸ್ವಾಹಾ: ನೀರು-ಬೆಂಕಿ ಒಂದಕ್ಕೊಂದು ತದ್ವಿರುದ್ಧ. ನೀರು ಇರುವಲ್ಲಿ ಬೆಂಕಿ ಹೊತ್ತಿಸಲು ಸಾಧ್ಯವಿಲ್ಲ. ಉರಿಯುತ್ತಿರುವ ಬೆಂಕಿಯ ಮೇಲೆ ನೀರು ಹಾಕಿದರೆ ಅದು ಆರಿ ಹೋಗುತ್ತದೆ. ಅಂಥದ್ದರಲ್ಲಿ ಒಂದು ಕೈ ಪಂಪ್ನಿಂದ ನೀರು ಮತ್ತು ಬೆಂಕಿ ಒಟ್ಟೊಟ್ಟಿಗೇ ಹೊರಬೀಳುತ್ತಿರುವ ದೃಶ್ಯವೊಂದು ಕಾಣಸಿಕ್ಕಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಕಚಾರ್ ಎಂಬ ಹಳ್ಳಿಯಲ್ಲಿ ಒಂದು ಕೈ ಪಂಪ್ ಇದೆ. ಅದು ಸುಸ್ಥಿತಿಯಲ್ಲಿ ಇಲ್ಲದ ಪಂಪ್. ಅದರಲ್ಲೀಗ ಒಟ್ಟೊಟ್ಟಿಗೇ ನೀರು ಮತ್ತು ಬೆಂಕಿ ಹೊರಬರುತ್ತಿದೆ. ಒಮ್ಮೆ ನೀರು ಹೊರಬಿದ್ದರೆ, ಮತ್ತೊಮ್ಮೆ ಅದು ಬೆಂಕಿಯನ್ನು ಉಗುಳುತ್ತಿದೆ. ಈ ಅಸಹಜತೆಯನ್ನು ಸ್ಥಳೀಯರೇ ವಿಡಿಯೋ ಮಾಡಿದ್ದಾರೆ. ಕೆಲವು ಟ್ವಿಟರ್ ಅಕೌಂಟ್ನಲ್ಲೂ ಶೇರ್ ಮಾಡಲಾಗಿದೆ. ಸದ್ಯ ಈ ಬೆಂಕಿಯ ಜ್ವಾಲೆ ಮತ್ತು ನೀರು ಒಟ್ಟಿಗೇ ಹೊರಬರುತ್ತಿರುವುದಕ್ಕೆ ಕಾರಣ ಗೊತ್ತಾಗಿಲ್ಲ. ಆದರೆ ವಿಡಿಯೋ ಮಾತ್ರ ಅಚ್ಚರಿ ಹುಟ್ಟಿಸಿದೆ.
ಮಧ್ಯಪ್ರದೇಶದ ಹಲವು ಕಡೆಗಳಲ್ಲಿ ಇರುವ ಕೈಪಂಪ್ಗಳಲ್ಲಿ ದೋಷವಿದೆ ಎಂದು ರಹವಾಲಿ ಎಂಬ ಹಳ್ಳಿಯ ರೈತನೊಬ್ಬ, ಮುಖ್ಯಮಂತ್ರಿ ಸಹಾಯವಾಣಿ ಮೂಲಕ ದೂರು ನೀಡಿದ್ದರು. ಹ್ಯಾಂಡ್ಪಂಪ್ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗೆ ಕಾರಣವೇನು ಎಂದು ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಡಿಪಾರ್ಟ್ಮೆಂಟ್ನಿಂದ ಪ್ರತಿಕ್ರಿಯೆ ಬೇಕು ಎಂದು ಹೇಳಿದ್ದರು. ಆದರೆ ಅದಕ್ಕೆ ಬಂದ ಪ್ರತಿಕ್ರಿಯೆ ವಿಚಿತ್ರವಾಗಿತ್ತು. ‘ಈ ದೂರನ್ನು ಅದ್ಯಾರೋ ತಲೆಕೆಟ್ಟವನೇ ಕೊಟ್ಟಿದ್ದಾನೆ. ಅವನ ಎದೆಯೇ ಮೇಲೆಯೇ ಹ್ಯಾಂಡ್ ಪಂಪ್ ಅಳವಡಿಸಲಾಗುವುದು’ ಎಂಬ ಉಡಾಫೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದನ್ನೂ ಓದಿ: Viral Video | ಕೊಲೆ ಕೇಸ್ ಭೇದಿಸಲು ಅಧ್ಯಾತ್ಮ ಗುರುವಿನ ಸಹಾಯ ಕೇಳಿದ ಪೊಲೀಸ್ ಅಧಿಕಾರಿ, ಮುಂದೇನಾಯಿತು?