ಲಂಡನ್: ಕೆಲವು ಪ್ರಸಿದ್ಧ ಪುಸ್ತಕಗಳ ಮೊದಲ ಮುದ್ರಣದ ಪ್ರತಿಗಳಿಗೆ ಭಾರೀ ಬೇಡಿಕೆಯಿರುತ್ತದೆ. ಅದೇ ರೀತಿಯಲ್ಲಿ ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್ ಪುಸ್ತಕ ಕೂಡ. 1997ರಲ್ಲಿ ಮುದ್ರಣವಾಗಿ 32 ರೂ. ಮುಖಬೆಲೆಯಲ್ಲಿ ಮಾರಾಟವಾಗಿದ್ದ ಈ ಪುಸ್ತಕ ಇದೀಗ 11 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು (Viral News) ಮಾಡುತ್ತಿದೆ.
1997ರಲ್ಲಿ ಬ್ಲೂಮ್ಸ್‌ಬರಿಯಿಂದ ಈ ಮುಸ್ತಕವನ್ನು ಮುದ್ರಣ ಮಾಡಿಸಲಾಗಿತ್ತು. ಆಗಿನ ಕಾಲಕ್ಕೆ ಕೇವಲ 500 ಪ್ರತಿಗಳನ್ನು ಮುದ್ರಣ ಮಾಡಲಾಗಿತ್ತು. ಅದರಲ್ಲಿ 300 ಪ್ರತಿಗಳನ್ನು ಗ್ರಂಥಾಲಯಕ್ಕೆ ಕೊಡಲಾಗಿತ್ತು. ಅದೇ ರೀತಿಯಲ್ಲಿ ಇದೀಗ ಹರಾಜಿನಲ್ಲಿ ಮಾರಾಟವಾದ ಪುಸ್ತಕವನ್ನು ಕೂಡ ವಾಲ್ವರ್‌ಹ್ಯಾಂಪ್ಟನ್ ಗ್ರಂಥಾಲಯಕ್ಕೆ ನೀಡಲಾಗಿತ್ತು.
ಇದನ್ನೂ ಓದಿ: Viral News : ಸಹಾಯಕ್ಕಾಗಿ ಕೂಗುತ್ತಿದ್ದ ಮಹಿಳೆಯ ಧ್ವನಿ ಹುಡುಕಿ ಬಂದ ಪೊಲೀಸರಿಗೆ ಶಾಕ್! ಆಗಿದ್ದೇ ಬೇರೆ…
ಈ ಪುಸ್ತಕವನ್ನು ಗ್ರಂಥಾಲಯದಿಂದ ಹಿಂಪಡೆದ ನಂತರ ಬರಂಟ್‌ವುಡ್‌ನ ಸಂಗ್ರಹಕಾರರೊಬ್ಬರು ಖರೀದಿಸಿದ್ದರು. ಅವರ ಸಾವಿನ ನಂತರ ಅವರ ಬಳಿ ಇದ್ದ ಸಾಮಾನುಗಳನ್ನು ರಿಚರ್ಜ್ ವಿಂಟರ್‌ಟನ್ ಹರಾಜುದಾರರ ತಂಡ ತೆಗೆದುಕೊಂಡಿದೆ. ಆಗ ಅವರಿಗೆ ಈ ಹ್ಯಾರಿ ಪಾಟರ್ ಪುಸ್ತಕವೂ ಸಿಕ್ಕಿದೆ. ಈವರೆಗೆ ಸಂಗ್ರಹಕಾರರ ಕುಟುಂಬ ಆ ಪುಸ್ತಕ ಕಳೆದುಹೋಗಿದೆ ಎಂದುಕೊಂಡಿದ್ದರಂತೆ. ಸಂಗ್ರಹಕಾರರಿಗೆ ತಾವು ಪುಸ್ತಕ ಖರೀದಿಸಿದ್ದೇನೆ ಎನ್ನುವುದು ಗೊತ್ತಿದ್ದಾದರೂ ಅದನ್ನು ಎಲ್ಲಿರಿಸಿದ್ದೇನೆ ಎನ್ನುವುದು ನೆನಪಿನಲ್ಲಿರಲಿಲ್ಲವಂತೆ.
ಪುಸ್ತಕವನ್ನು ಹರಾಜು ತಂಡ ತಮ್ಮದಾಗಿಸಿಕೊಂಡ ನಂತರ ಅದನ್ನು ಹರಾಜಿಗಿಡುವ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿತ್ತು. ಅದಕ್ಕಾಗಿ ಹ್ಯಾರಿ ಪಾಟರ್ ಪುಸ್ತಕದ ಅಭಿಮಾನಿಗಳು ಮತ್ತು ಪುಸ್ತಕ ಸಂಗ್ರಾಹಕರು ಮುಗಿಬಿದ್ದಿದ್ದರು. ಜುಲೈ 10ರಂದು ಹರಾಜು ಪ್ರಕ್ರಿಯೆ ನಡೆಸಲಾಗಿದ್ದು, ಅದನ್ನು 11 ಲಕ್ಷ ರೂ.ಗೆ ಹರಾಜು ಮಾಡಲಾಗಿದೆ. ಈ ಬಗ್ಗೆ ರಿಚರ್ಡ್ ವಿಂಟರ್‌ಟನ್ ಹರಾಜುದಾರರ ತಂಡ ಫೇಸ್‌ಬುಕ್‌ನಲ್ಲಿ ವಿಡಿಯೊವನ್ನೂ ಹಂಚಿಕೊಂಡಿದೆ. ಅಮೆರಿಕದ ಲಾಸ್ ಏಂಜಲೀಸ್ ಮೂಲದ ವ್ಯಕ್ತಿಯೊಬ್ಬರು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಹರಾಜು ಕೂಗಿ ಹ್ಯಾರಿ ಪಾಟರ್ ಪುಸ್ತಕದ ಮೊದಲ ಮುದ್ರಣದ ಪ್ರತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.