Site icon Vistara News

Ganesh Chaturthi: 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್‌ ಕಂಪೆನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ

ganapa

ganapa

ಮುಂಬಯಿ: ದೇಶದೆಲ್ಲೆಡೆ ಆಚರಿಸುವ ಹಬ್ಬಗಳಲ್ಲಿ ಗಣೇಶ ಚರ್ತುಥಿಯೂ(Ganesh Chaturthi) ಒಂದು. ಸಾಮಾನ್ಯವಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ಬಳಿಕ ವಿಸರ್ಜಿಸುವುದು ವಾಡಿಕೆ. ಪ್ರಸಿದ್ಧ ಕಂಪೆನಿ ಹ್ಯಾವಲ್ಸ್‌(Havells) ಚೌತಿ ಸಂದರ್ಭದಲ್ಲಿ ಸೃಜನಾತ್ಮಕವಾಗಿ ಶುಭ ಹಾರೈಸಿದೆ. ಈ ವಿಡಿಯೊ ಇದೀಗ ವೈರಲ್‌ ಆಗಿದೆ. ʼಹ್ಯಾವಲ್ಸ್‌ ಕೆ ದೇವʼ(Havells Ke Deva) ಹೆಸರಿನಲ್ಲಿ ಕಂಪೆನಿ ಅಭಿಯಾನ ಆಯೋಜಿಸಿದ್ದು, ಇದರಲ್ಲಿ ಕಲೆ, ತಂತ್ರಜ್ಞಾನ ಮತ್ತು ಸಂಪ್ರದಾಯವನ್ನು ಸರಿಯಾದ ರೀತಿಯಲ್ಲಿ ಬೆರಸಿ ಶುಭಾಶಯ ಕೋರಿದೆ.

ಸುಮಾರು 100 ಫ್ಯಾನ್‌ಗಳನ್ನು ಉಪಯೋಗಿಸಿ ಗಣೇಶ ಮೂರ್ತಿಯನ್ನು ರಚಿಸಲಾಗಿದೆ. ಕಂಪೆನಿಯ ಈ ಸೃಜನಾತ್ಮಕ ಐಡಿಯಾಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಗಣೇಶ ಮೂರ್ತಿಯನ್ನೊಳಗೊಂಡ ಬೋರ್ಡ್‌ ಅನ್ನು ಕಂಪೆನಿಯು ಥಾಣೆಯ ಮಜಿವಾಡ ಫ್ಲೈಓವರ್‌ ಬಳಿ ಸ್ಥಾಪಿಸಿದೆ. ಇದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮುಂಬಯಿ ಹೆರಿಟೇಜ್‌ ಪೇಜ್ ಹಂಚಿಕೊಂಡಿದೆ. ಈಗಾಗಲೇ ಈ ಚಿಕ್ಕ ವಿಡಿಯೊ ತುಣುಕನ್ನು 3 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ʼಥಾಣೆಯ ಮಜಿವಾಡ ಫ್ಲೈಓವರ್‌ ಬಳಿ ಕಂಡು ಬಂದ 100 ಫ್ಯಾನ್ ಗಳಿಂದ ರಚಿಸಿದ ಗಣೇಶ ಮೂರ್ತಿ. ಇದು ಹ್ಯಾವೆಲ್ಸ್‌ನ ಅಭಿಯಾನʼ ಎಂದು ಮುಂಬಯಿ ಹೆರಿಟೇಜ್‌ ಬರೆದುಕೊಂಡಿದೆ.

ನೆಟ್ಟಿಗರ ಮೆಚ್ಚುಗೆ

ಕಂಪೆನಿಯ ಈ ಸೃಜನಶೀಲತೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ಮಂದಿ ಶ್ಲಾಘಿಸಿ ಕಮೆಂಟ್‌ ಮಾಡಿದ್ದಾರೆ. ಕಮೆಂಟ್‌ ಸೆಕ್ಷನ್‌ ತುಂಬಾ ಹೊಗಳಿಕೆಯ ಮಾತುಗಳೇ ಕಂಡುಬಂದಿದೆ. ಈ ಐಡಿಯಾ ಜನರ ಗಮನ ಸೆಳೆದಿದೆ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರಂತೂ ಕಂಪೆನಿಯ ಅಭಿಮಾನಿಯಾದೆ ಎಂದಿದ್ದಾರೆ. ಇನ್ನೊಬ್ಬರು ಕ್ರಿಯೇಟಿವ್‌ ಆಗಿದೆ ಎಂದು ಹೊಗಳಿದ್ದಾರೆ.

ಹ್ಯಾವೆಲ್ಸ್‌ನ ಇವಿಪಿ ರೋಹಿತ್‌ ಕಪೂರ್‌ ಈಗ್ಗೆ ಮಾತನಾಡಿ, ʼʼಗಣೇಶ ಚತುರ್ಥಿ ಹೊಸ ಸಂಶೋಧನೆ, ಪರಿವರ್ತನೆ ಮತ್ತು ಹೊಸ ಆರಂಭವನ್ನು ಗೌರವಿಸುವ ಹಬ್ಬ. ನಾವು ಹ್ಯಾವಲ್ಸ್ ದೇವ ಅಭಿಯಾನವನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ. ಹ್ಯಾವಲ್ಸ್ ಯಾವಾಗಲೂ ಜಾಹೀರಾತಿನ ಗಡಿಗಳನ್ನು ಮರುವ್ಯಾಖ್ಯಾನಿಸಲು ಶ್ರಮಿಸುತ್ತಿದೆ ಮತ್ತು ನಮ್ಮ ಇತ್ತೀಚಿನ ಅಭಿಯಾನದ ಮೂಲಕ, ನಾವು ಹಬ್ಬವನ್ನು ಆಚರಿಸುವುದು ಮಾತ್ರವಲ್ಲದೆ ನಾವೀನ್ಯತೆಗಾಗಿ ತೆರೆದುಕೊಳ್ಳುವ ಗುರಿಯನ್ನು ಹೊಂದಿದ್ದೇವೆʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಎಲ್​ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು ​, ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ

ಇದರ ಜೊತೆಗೆ ಹ್ಯಾವಲ್ಸ್‌ ಕಂಪೆನಿ ಗಣೇಶ ಚತುರ್ಥಿಯನ್ನು ಬರ ಮಾಡಿಕೊಳ್ಳುವ ಇನ್ನೊಂದು ವಿಡಿಯೊವನ್ನು ಬಿಡುಗಡೆ ಮಾಡಿದೆ. ನೆರಳು, ಬೆಳಕಿನ ಮೂಲಕ ಇದನ್ನು ತಯಾರಿಸಲಾಗಿದೆ. ಕಂಪೆನಿಯ ಉತ್ಪನ್ನಗಳನ್ನು ಬಳಸಿ ಗಣಪತಿಯನ್ನು ಪ್ರತಿನಿಧಿಸುವ ಆನೆಯನ್ನು ರಚಿಸಲಾಗಿದೆ. ಜೊತೆಗೆ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಕೆಲವು ಕೊಡುಗೆಗಳನ್ನೂ ಪ್ರಕಟಿಸಿದೆ. ರೇಡಿಯೋ ಒನ್‌ ಮತ್ತು ರೇಡಿಯೋ ಸಿಟಿ ಮಹಾರಾಷ್ಟ್ರದ ಜೊತೆ ಸೇರಿಕೊಂಡು ಗ್ರಾಹಕರಿಗೆ ಕೊಡುಗೆ ನೀಡುವ ಅಭಿಯಾನ ಪ್ರಕಟಿಸಿದೆ.

ಗಮನ ಸೆಳೆದ ಎಂಜಿ ಮೋಟಾರ್ಸ್

ಹ್ಯಾವಲ್ಸ್ ನಂತೆಯೇ ಎಂಜಿ ಮೋಟಾರ್ಸ್ ಕೂಡ ಗಣೇಶ ಚತುರ್ಥಿಯನ್ನು ತನ್ನದೇ ಆದ ವಿಶಿಷ್ಟ ಅಭಿಯಾನದ ಮೂಲಕ ಆಚರಿಸಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ. ವಿವಿಧ ಸಂದರ್ಭಗಳಲ್ಲಿನ ಸಂಚಾರ ಪೊಲೀಸರ ಚಿತ್ರಗಳ ಸರಣಿಯನ್ನು ತಯಾರಿಸಲು ಕೃತಕ ಬುದ್ಧಿಮತ್ತೆ(AI)ಯನ್ನು ಬಳಸಿದೆ. ಭಾರಿ ಮಳೆಯಲ್ಲಿ ಕೆಲಸ ಮಾಡುವುದು, ದೊಡ್ಡ ಜನಸಂದಣಿಯನ್ನು ನಿರ್ವಹಿಸುವುದು, ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವುದು ಮುಂತಾದ ಚಿತ್ರಗಳನ್ನು ಬಳಸಲಾಗಿದೆ. ಗಣೇಶ ಚರ್ತುಥಿಯಂತಹ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ನೋಡಿಕೊಳ್ಳುವ ಟ್ರಾಫಿಕ್‌ ಪೊಲೀಸರಿಗೆ ಈ ಮೂಲಕ ಗೌರವ ಸಲ್ಲಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version