Site icon Vistara News

Viral news | ರಕ್ಷಾಬಂಧನಕ್ಕಾಗಿ ಡೇಟಿಂಗ್‌ ಸೈಟ್‌ನಲ್ಲಿ ತಂಗಿಯರನ್ನು ಹುಡುಕಿದ!

rakhi

ಇನ್ನೇನು ರಕ್ಷಾಬಂಧನ ಬಂದಿದೆ. ಅಣ್ಣತಂಗಿಯರ ಬಂಧಕ್ಕೆ ಮುನ್ನುಡಿಯಂತಹ ಈ ಹಬ್ಬದ ಸಂದರ್ಭ ಇಲ್ಲೊಂದು ವಿಚಿತ್ರ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ! ಮುಂಬೈಯ ಯುವಕನೊಬ್ಬ ಟಿಂಡರ್‌ ಡೇಟಿಂಗ್‌ ಸೈಟ್‌ ಮೂಲಕ ತನಗಿಬ್ಬರು ಸಹೋದರಿಯರನ್ನು ಹುಡುಕಿಕೊಂಡಿದ್ದಾನಂತೆ!

ರಕ್ಷಾಬಂಧನದ ದಿನ ಬಂತೆಂದರೆ, ತಾವು ಕಣ್ಣು ಹೊಡೆದ ಹುಡುಗಿಯರೆಲ್ಲಿ ಸೀದಾ ಬಂದು ತನ್ನ ಕೈಗೆ ರಾಖಿ ಕಟ್ಟಿ ಬಿಡುತ್ತಾರೋ ಎಂಬ ಭಯದಲ್ಲಿ ರಕ್ಷಾಬಂಧನದ ದಿನ ಹುಡುಗರು ತಲೆಮರೆಸಿಕೊಂಡು ಓಡಾಡುವುದುಂಟು. ಕಾಲೇಜಲ್ಲಿ ಯಾರ ಕೈಯಲ್ಲಿ ಅತ್ಯಧಿಕ ರಾಖಿಗಳಿವೆಯೋ ಅವರನ್ನು ಹುಡುಗರು ಹುಡುಗಿಯರ ʻಬ್ರದರ್‌ ಮೆಟೀರಿಯಲ್ಲುʼ ಎಂದು ಕಿಚಾಯಿಸುವುದುಂಟು. ಇದಕ್ಕಾಗಿಯೇ, ಆ ಯುವ ವಯಸ್ಸಿನಲ್ಲಿ ರಾಖಿ ಕಟ್ಟಿಸಿಕೊಂಡ ಭಾಗ್ಯಕ್ಕೆ ತಲೆ ಮೇಲೆ ಕೈಹೊತ್ತು ಕೂರುವುದೂ ಉಂಟು.

ಆದರೆ, ಇಲ್ಲೊಂದು ವಿಚಿತ್ರ ಕಥೆಯಿದೆ. ಯಾರಾದರೂ, ಡೇಟಿಂಗ್‌ ಜಾಲತಾಣದಲ್ಲಿ ʻನನಗೆ ಸಿಸ್ಟರ್‌ ಬೇಕಪ್ಪೋʼ ಅಂತ ಪೋಸ್ಟ್‌ ಹಾಕುವ ಹುಡುಗನನ್ನು ನೋಡಿದ್ದೀರಾ? ಇಲ್ಲ ಎಂದಾದಲ್ಲಿ ಕಣ್ಬಿಟ್ಟು ನೋಡಿ. ಶಿವ ಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ ಈತ ಡೇಟಿಂಗ್‌ ಜಾಲತಾಣದಲ್ಲಿ ಇಂಥದ್ದೊಂದು ಪೋಸ್ಟ್‌ ಹಾಕಿ ತಂಗಿಯರನ್ನು ಗಿಟ್ಟಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ, ʻಅಣ್ಣ ತಂಗಿಯರ ಸಂಬಂಧ, ಜನುಮಜನುಮದಾ ಅನುಬಂಧʼ ಎಂದು ಹಾಡುತ್ತಾ ರಾಖಿ ಕಟ್ಟಿಸಿಕೊಳ್ಳಲಿದ್ದಾನಂತೆ. ಹಾಗೆ ಆತನೇ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಮದುವೆಯಲ್ಲಿ ವಧುವಿನ ಕಾಲಿಗೆರಗಿದ ವರ; ಸಮಾನತೆಯತ್ತ ಇನ್ನೊಂದು ಹೆಜ್ಜೆ!

ʻಅಂದಹಾಗೆ ಇವನ್ಯಾವ ಸೀಮೆ ಹುಡುಗʼ ಎಂದು ನಗಬೇಡಿ. ಇಲ್ಲಿ ಆಗಿದ್ದೇನು ಎಂದರೆ, ಮುಂಬೈ ಮೂಲದ ಯುವಕನೊಬ್ಬ ಕಳೆದ ಎರಡು ವರ್ಷಗಳಿಂದ ತನ್ನ ಸಾಮಾಜಿಕ ಜಾಲತಾಣದಲ್ಲಿ ತನಗೊಬ್ಬ ತಂಗಿ ಬೇಕು, ರಕ್ಷಾಬಂಧನ ಆಚರಿಸಲು ಎಂದು ಪೋಸ್ಟ್‌ ಹಾಕಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲವಂತೆ. ನಿಜವಾಗಿಯೂ ಈತನಿಗೆ ತಂಗಿಯರೇ ಇಲ್ಲದಿದ್ದುದರಿಂದ, ತಂಗಿ ಬೇಕು ಎನಿಸಿತ್ತಂತೆ. ರಕ್ಷಾಬಂಧನದ ದಿನ ರಾಖಿ ಕಟ್ಟಿಸಿಕೊಡು, ತಾನವರಿಗೆ ಪ್ರೀತಿಯಿಂದ ಗಿಫ್ಟ್‌ ಕೊಡಿಸಿ ಅಣ್ಣನ ಪ್ರೀತಿ ತೋರಬೇಕೆಂಬ ಆಸೆಯಂತೆ. ಇಂಥದ್ದೊಂದು ಚಂದದ ಭಾವ- ಬಂಧ ಜೀವನದಲ್ಲಿ ಮಿಸ್‌ ಮಾಡಿಕೊಳ್ಳುತ್ತಿದ್ದೇನೆಂದು ಆ ಯುವಕನಿಗೆ ಅನಿಸಿ ಈ ಬಾರಿಯೂ ಟಿಂಡರ್‌ನಲ್ಲಿ ತಂಗಿ ಬೇಕಾಗಿದ್ದಾಳೆ ರಕ್ಷಾಬಂಧನವನ್ನು ಆಚರಿಸಲು ಎಂದು ಪೋಸ್ಟ್‌ ಮಾಡಿದ್ದಾನೆ. ಕಳೆದೆರಡು ಬಾರಿ ಆಗದ್ದು, ಈ ಬಾರಿ ಈ ಪೋಸ್ಟ್‌ ವರ್ಕ್‌ ಔಟ್‌ ಆಗಿದೆ. ನಿಜವಾಗಿಯೂ ಇಬ್ಬರು ತಂಗಿಯರು ಈತನಿಗೆ ದಕ್ಕಿದ್ದಾರೆ. ಅದನ್ನೂ ಆತ ಖುಷಿಯಿಂದ ಹೇಳಿಕೊಂಡಿದ್ದು, ನಾವು ಮೂವರೂ ರಕ್ಷಾಬಂಧನದ ದಿನ ಭೇಟಿಯಾಗಿ ಭರ್ಜರಿಯಾಗಿ ಆಚರಿಸಲಿದ್ದೇವೆ. ನನ್ನ ತಂಗಿಯರು ನನಗೆ ರಾಖಿ ಕಟ್ಟಲಿದ್ದಾರೆ, ನಾನವರಿಗೆ ಗಿಫ್ಟ್‌ ನೀಡಲಿದ್ದೇನೆ. ಥ್ಯಾಂಕ್ಸ್‌ ಟು ಟಿಂಡರ್!‌ ಎಂದು ಸಂತೋಷದಿಂದ ಪೋಸ್ಟ್‌ ಮಾಡಿದ್ದಾನೆ!

ಈತನ ಈ ಪೋಸ್ಟ್‌ ವೈರಲ್‌ ಆಗಿದ್ದು ನೂರಾರು ಜನರು ನಗೆಯಾಡಿದ್ದಾರೆ. ʻಶಾದಿ ಡಾಟ್‌ ಕಾಂನಲ್ಲಿ ಹೋಗಿ ನಾನು ಅನಾಥ, ಅಪ್ಪ ಅಮ್ಮ ನನಗೆ ಬೇಕುʼ ಎಂಬ ಪೋಸ್ಟ್‌ ಹಾಕಿದಂತಾಯಿತು ಇದು ಎಂದು ತಮಾಷೆ ಮಾಡಿದ್ದಾರೆ.

ಇನ್ನೂ ಹಲವರು, ಇಂಥ ಪೋಸ್ಟ್‌ಗೆ ಇದು ಜಾಗವೇ ಅಲ್ಲ ಎಂದು ಆತನಿಗೆ ನೇರವಾಗಿ ಹೇಳಿದ್ದೂ ಅಲ್ಲ, ನಿಮ್ಮದೇ ಕುಟುಂಬದಲ್ಲಿ ಚಿಕ್ಕಪ್ಪ ದೊಡ್ಡಪ್ಪಂದಿರ ಮಕ್ಕಳಿಲ್ಲವೇ? ಅವರ ಜೊತೆಗೆ ರಕ್ಷಾಬಂಧನ ಆಚರಿಸಬಹುದು ಎಂದಿದ್ದಾರೆ. ಹಿಂದೊಮ್ಮೆ, ಇಂಥದ್ದೇ ಡೇಟಿಂಗ್‌ ಸೈಟೊಂದರಲ್ಲಿ ತನಗೆ ಅಪಾರ್ಟ್‌ಮೆಂಟೊಂದರ ಅರ್ಜೆಂಟ್‌ ಅಗತ್ಯವಿದೆ ಎಂದು ಪೋಸ್ಟ್‌ ಹಾಕಿ, ಆತನಿಗೆ ಜನರು, ಹಾರ್ಟ್‌ ಹುಡುಕುವ ಜಾಗದಲ್ಲಿ ಈತ ಮನೆಯೇ ಹುಡುಕಿಕೊಳ್ಳುತ್ತಿದ್ದಾನೆ ಎಂದು ನಗೆಯಾಡಿದ್ದರು. ಇದೂ ಅಂಥದ್ದೇ ಒಂದು ಪ್ರಕರಣವಾಗಿ ಕಂಡಿದ್ದು, ಈತನ ಪೋಸ್ಟನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ! ಈ ಪೋಸ್ಟ್‌ ನಿಜವಾಗಿದ್ದರೆ, ಒಬ್ಬ ಹೀಗೆ ತಂಗಿಯರು ಬೇಕು ಎಂದು ಬಯಸಿದ್ದೇ ಆಗಿದ್ದರೆ, ಇದೊಂದು ನಿಜವಾಗಿಯೂ ಭಾವನಾತ್ಮಕ ಪೋಸ್ಟೇ ಸರಿ!

ಇದನ್ನೂ ಓದಿ: Breastfeeding Week 2022 | ಅಮ್ಮನ ಹಾಲೇ ಅಮೃತ!

Exit mobile version