Site icon Vistara News

Viral News : ಕಾರು ನನ್ನಪ್ಪಂದು, ರೋಡ್​ ಅಲ್ಲ; ಸ್ಟಂಟ್​ ಮಾಡಿದ ​ಯುವಕನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿಸಿದ ಪೊಲೀಸರು!

Gujarat News

ನವದೆಹಲಿ: ಮೋಟಾರು ವಾಹನ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ ಆರೋಪದ ಮೇಲೆ ನಾಲ್ವರು ಪೊಲೀಸ್ ಸಿಬ್ಬಂದಿಗೆ ಗುಜರಾತ್ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದೆ. ಆರೋಪಿ ತನ್ನ ಮರ್ಸಿಡಿಸ್ ಬೆಂಝ್ ಎಸ್ ಯುವಿಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುತ್ತಿದ್ದ. ಆತನನ್ನು ಪತ್ತೆ ಹಚ್ಚಿದದ್ದ ಪೊಲೀಸರು, ಕಾರು ನನ್ನ ಅಪ್ಪಂದು, ರೋಡ್​ ಅಲ್ಲ ಎಂದು ಬೋರ್ಡ್​ ಹಿಡಿಸಿ ಮೆರವಣಿಗೆ ಮಾಡಿಸಿದ್ದರು. ಇದು ವೈರಲ್ (Viral News) ಆದ ಬೆನ್ನಲ್ಲೇ ಆರೋಪಿಯು ಕೋರ್ಟ್ ಮೆಟ್ಟಿಲೇರಿದ್ದ. ಇದೀಗ ಕೋರ್ಟ್ ಪೊಲೀಸರಿಗೆ ಛೀಮಾರಿ ಹಾಕಿದೆ.

ಕಳೆದ ತಿಂಗಳು ಜುಲೈ 5ರಂದು ಈ ಘಟನೆ ನಡೆದಿದ್ದು, 24 ವರ್ಷದ ಜುನೈದ್ ಮಿರ್ಜಾ ಅವರನ್ನು ಸಿಂಧು ಭವನ್ ರಸ್ತೆಯಲ್ಲಿ ಪೊಲೀಸ್ ಅಧಿಕಾರಿಗಳು ಫಲಕ ಹಿಡಿದು ಮೆರವಣಿಗೆ ನಡೆಸಿದ್ದರು. ಫಲಕದಲ್ಲಿ “ಗಾಡಿ ಮೇರೆ ಬಾಪ್ ಕಿ ಹೈ, ಪರ್ ರೋಡ್ ನಹೀ” ಎಂಬ ಸಂದೇಶವಿತ್ತು, (ಕಾರು ನನ್ನ ತಂದೆಗೆ ಸೇರಿದೆ, ಆದರೆ ರಸ್ತೆ ಅಲ್ಲ).

ಡಿಸಿಪಿ ಭಗೀರಥಸಿನ್ಹಾ ಜಡೇಜಾ, ಸರ್ಖೇಜ್ ಪೊಲೀಸ್ ಇನ್​ಸ್ಟೆಕ್ಟರ್​ ವಿ.ಜೆ.ಚಾವ್ಡಾ, ಪಿಎಸ್ಐ ಡಿ.ಪಿ.ಸೋಲಂಕಿ, ಸ್ಯಾಟಲೈಟ್ ಪಿಎಸ್ಐ ದಿನೇಶ್ ಸಿಂಗ್ ರಾಥೋಡ್ ಮತ್ತು ಕಾನ್​ಸ್ಟೇಬಲ್​ ಇರ್ಫಾನ್ ಶೇಖ್ ಅವರು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸುವ ಮೂಲಕ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಮಿರ್ಜಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಿರ್ಜಾ ಅವರ ವಕೀಲ ಸಿದ್ಧಾರ್ಥ್ ಖೇಷ್ಕಣಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಮಿರ್ಜಾ ಅವರ ಅರ್ಜಿಯಲ್ಲಿ ಹೆಸರಿಸಲಾದ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆಯಡಿ ಏಕೆ ಕ್ರಮ ಕೈಗೊಳ್ಳಬಾರದು ಎಂದು ವಿಭಾಗೀಯ ಪೀಠವು ಡಿಸಿಪಿ ಹೊರತುಪಡಿಸಿ ನೋಟಿಸ್​ ಕಳುಹಿಸಿದೆ.

ಎರಡು ವರ್ಷ ಹಿಂದಿನ ಘಟನೆ

ಸ್ಟಂಟ್​ ಮಾಡಿದ್​ದು 2021 ರಲ್ಲಿ. ಘಟನೆಯ ವೀಡಿಯೊ ಆ ವರ್ಷದದ್ದಾಗಿದೆ. ಇದೀಗ ಅದು ಪೊಲೀಸರಿಗೆ ಸಿಕ್ಕಿದೆ. ಪೊಲೀಸ್ ತಂಡವು ಮಿರ್ಜಾ ಅವರನ್ನು ಎಸ್ಬಿ ರಸ್ತೆಯಲ್ಲಿ ಮೆರವಣಿಗೆ ಮಾಡಿತ್ತು. ಅಲ್ಲಿ ಅವರು ಮತ್ತು ಅವರ ಸ್ನೇಹಿತರು ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಸ್ಟಂಟ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಈ ಸ್ಟಂಟ್​​ಗಳ ವೀಡಿಯೊ ವೈರಲ್ ಆಗಿದ್ದು, ಯುವಕರ ಗುಂಪು ಸಾರ್ವಜನಿಕ ರಸ್ತೆಗಳಲ್ಲಿ ಅಜಾಗರೂಕ ಚಾಲನೆಯಲ್ಲಿ ತೊಡಗಿರುವುದನ್ನು ಬಹಿರಂಗಗೊಂಡಿತ್ತು.

ಇದನ್ನೂ ಓದಿ : Viral Video : ಕಾರಿನ ಮೇಲೆ ಸ್ಟಂಟ್‌ ಮಾಡಿದವನಿಗೆ ಬಿತ್ತು ಭಾರೀ ದಂಡ!

2021 ರಲ್ಲಿ ರೆಕಾರ್ಡ್ ಮಾಡಿದ ವೀಡಿಯೊವನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಪಟ್ಟಿ ಸಲ್ಲಿಸಿದಾಗ ಮಿರ್ಜಾ ಸಾಕ್ಷಿಯಾಗಿದ್ದರು. ಆದಾಗ್ಯೂ, ಮಿರ್ಜಾ ಅವರ ವಕೀಲರ ಪ್ರಕಾರ, ಬಂದೂಕು ಪರವಾನಗಿಗಾಗಿ ಡಿಸಿಪಿ ಕಚೇರಿಗೆ 10 ಲಕ್ಷ ರೂ.ಗಳ ಲಂಚವನ್ನು ನೀಡಲು ಅವರು ಮತ್ತು ಅವರ ತಂದೆ ನಿರಾಕರಿಸಿದ್ದರಿಂದ ಪೊಲೀಸರು ಅವರನ್ನು ಬಲಿಪಶು ಮಾಡಿದ್ದಾರೆ. ಅವರು ಲಂಚ ನೀಡಲು ನಿರಾಕರಿಸಿದಾಗ, ಮಿರ್ಜಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮಾನವ ಹಕ್ಕುಗಳ ಆಯೋಗದಿಂದ ಕ್ರಮ

ಸಿಂಧು ಭವನ್ ರಸ್ತೆಯಲ್ಲಿ (ಎಸ್ಬಿಆರ್) ನಗರ ಸಂಚಾರ ಪೊಲೀಸರು ಸಾರ್ವಜನಿಕವಾಗಿ ಅವಮಾನಿಸಿದ ಈ ಪ್ರಕರಣದಲ್ಲಿ ಗುಜರಾತ್ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್ಎಚ್ಆರ್ಸಿ) ಕ್ರಮಗಳನ್ನು ಪ್ರಾರಂಭಿಸಿದೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಎಸ್ಎಚ್ಆರ್ಸಿ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೂಚನೆ ನೀಡಿದೆ. ಇನ್​ಸ್ಟೆಕ್ಟರ್​ ಜನರಲ್ ಆಫ್ ಪೊಲೀಸ್ ಅಥವಾ ಹೆಚ್ಚುವರಿ ಪೊಲೀಸ್ ಆಯುಕ್ತರ ಶ್ರೇಣಿಯ ಅಧಿಕಾರಿಯನ್ನು 20 ದಿನಗಳಲ್ಲಿ ವರದಿ ಸಲ್ಲಿಸುವಂತೆ ನಿಯೋಜಿಸಿದೆ. ಮಿರ್ಜಾ ಅವರ ವಕೀಲ ಖೇಸ್ಕಣಿ ಅವರು ತಿಳಿಸಿರುವಂತೆ ಕಾಯ್ದೆಯ ಸೆಕ್ಷನ್ 12 ರ ಅಡಿಯಲ್ಲಿ ಪರಿಶೀಲನೆಯ ನಂತರ ಮಾನವ ಹಕ್ಕುಗಳ ಕಾಯ್ದೆ 1993 ರ ಸೆಕ್ಷನ್ 18 ರ ಅಡಿಯಲ್ಲಿ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾನವಹಕ್ಕು ಆಯೋಗ ಹೇಳಿದೆ.

Exit mobile version