ದೆವ್ವ-ಭೂತ-ಪಿಶಾಚಿಗಳೆಲ್ಲ ನಿಜವಾಗಿಯೂ ಇದ್ದಾವೋ-ಇಲ್ಲವೋ ಗೊತ್ತಿಲ್ಲ. ಅವೆಲ್ಲ ತರ್ಕಕ್ಕೆ ನಿಲುಕದ ವಿಚಾರಗಳು. ಆದರೆ ಇಂಟರ್ನೆಟ್ನಲ್ಲಿ ಆಗಾಗ ಈ ದೆವ್ವ-ಭೂತ-ಆತ್ಮದ ವಿಡಿಯೊಗಳೆಲ್ಲ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಈಗ ಅರ್ಜೆಂಟಿನಾ ಆಸ್ಪತ್ರೆಯೊಂದರಲ್ಲಿ, ಸಿಸಿಟಿವಿ ಫೂಟೇಜ್ನಲ್ಲಿ ಸೆರೆಯಾದ ಭಯಾನಕ ದೃಶ್ಯದ ವಿಡಿಯೊವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ‘ಅಲ್ಲಿ ಆ ವ್ಯಕ್ತಿ ಅದೇನು ಮಾಡಿದ? ಯಾರಿದ್ದಾರೆ?’ ಎಂಬ ಪ್ರಶ್ನೆ ಮೂಡುತ್ತದೆ.
ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಿಸ್ನ ಆಸ್ಪತ್ರೆ ಅದು. ಆಸ್ಪತ್ರೆಯ ಒಳಗೆ ಸಿಬ್ಬಂದಿಯೊಬ್ಬ ಕುಳಿತಿದ್ದಾರೆ. ಅದು ರಾತ್ರಿ ಸಮಯವಾಗಿದ್ದರಿಂದ ಅಲ್ಲಿ ರಿಸಪ್ಷನ್ನಲ್ಲಿ ಅವರೊಬ್ಬರೇ ಇದ್ದರು. ಆಸ್ಪತ್ರೆಯ ಗಾಜಿನ ಬಾಗಿಲು ತೆರೆದುಕೊಳ್ಳುತ್ತದೆ. ನೀವು ನೋಡಿ, ಅಲ್ಲಿಂದ ಯಾರೂ ಒಳಗೆ ಬರುವುದಿಲ್ಲ. ಆದರೆ ಈ ವ್ಯಕ್ತಿ ಎದ್ದು ಹೋಗಿ, ಟೇಪ್ನ ತಡೆಯನ್ನು ತೆಗೆಯುತ್ತಾನೆ, ನಂತರ ಅದ್ಯಾರ ಬಳಿಯೋ ಮಾತನಾಡುತ್ತಾನೆ. ಡಾಕ್ಟರ್ ಕೋಣೆಯ ಕಡೆಗೆ ಕೈ ತೋರಿಸಿ ‘ಹೀಗೆ ಹೋಗಿ’ ಎಂಬಂಥ ಸಂಜ್ಞೆ ಮಾಡುತ್ತಾನೆ. ಬಳಿಕ ಅಲ್ಲಿಯೇ ಇದ್ದ ವ್ಹೀಲ್ ಚೇರ್ ಕೂಡ ತೆಗೆದುಕೊಡುತ್ತಾನೆ. ವಿಡಿಯೊ ನೋಡಿದರೆ ಅಲ್ಲಿ ಯಾರೂ ಇರುವುದಿಲ್ಲ. ಆದರೆ ಅವನ ಹಾವ-ಭಾವಗಳೆಲ್ಲ ಯಾರ ಬಳಿಯೋ ಮಾತನಾಡಿದಂತೆಯೇ ಇರುತ್ತವೆ’
ಈ ಸಿಸಿಟಿವಿ ಫೂಟೇಜ್ ದೃಶ್ಯ ವೈರಲ್ ಆದ ಬೆನ್ನಲ್ಲೇ ಕೆಲವು ಸ್ಥಳೀಯ ಮಾಧ್ಯಮಗಳು ಆಸ್ಪತ್ರೆಗೆ ಹೋಗಿ ಪ್ರಶ್ನೆ ಮಾಡಿವೆ. ಆ ಹೊತ್ತಲ್ಲಿ ಅಲ್ಲಿದ್ದ ಸಿಬ್ಬಂದಿ ಯಾರ ಹೆಸರನ್ನು ಬರೆದಿದ್ದಾನೆ ಎಂದೂ ಪರಿಶೀಲನೆ ಮಾಡಿದ್ದಾರೆ. ಆತ ಬರೆದಿದ್ದು ಒಬ್ಬ ಮಹಿಳೆಯ ಹೆಸರು ಮತ್ತು ಆಕೆ ಮುನ್ನಾದಿನ ಅದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು ಎಂದು ಹೇಳಲಾಗಿದೆ. ಆ ಮಹಿಳೆ ಮೃತಪಟ್ಟ ವಿಚಾರವನ್ನು ಅದೇ ಆಸ್ಪತ್ರೆಯೂ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.
ಇನ್ನು ಆಸ್ಪತ್ರೆಯ ಮಾಧ್ಯಮ ವ್ಯವಹಾರಗಳ ನಿರ್ದೇಶಕ ಗಿಲ್ಲೆರ್ಮೊ ಕಪುಯಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ ‘ಆಸ್ಪತ್ರೆಯ ಮುಖ್ಯದ್ವಾರಕ್ಕೆ ಸಮಸ್ಯೆ ಇದೆ. ಅದು ಪದೇಪದೆ ಅದರಷ್ಟಕ್ಕೇ ಅದು ತೆರೆದುಕೊಳ್ಳುತ್ತದೆ, ಹಾಗೆ ತೆರೆದುಕೊಂಡಾಗ ಅಲ್ಲಿಯೇ ಇದ್ದ ಸಿಬ್ಬಂದಿ ತಮಾಷೆಗಾಗಿ ಎದ್ದು ಹೋಗಿ ಏನೋ ಮಾಡಿರಬೇಕು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದು ಬೇಡ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video | ಉಚಿತ ಹೆಲ್ಮೆಟ್‌ಗಾಗಿ ಮುಗಿಬಿದ್ದ ಜನ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್