ಏನೇ ಇರಲಿ, ಎಷ್ಟೇ ಪ್ರೀತಿ ಇರಲಿ, ಯಾರನ್ನೇ ಆಗಲಿ, ಅಪ್ಪಿಕೊಳ್ಳುವ ಮೊದಲು ಒಮ್ಮೆ ಯೋಚಿಸಿ!
ಹೀಗೆ ಇಲ್ಲಿ ಹೇಳಲು ಕಾರಣವೂ ಇದೆ. ಚೀನಾದ ಮಹಿಳೆಯೊಬ್ಬಳು, ತನ್ನ ಸಹೋದ್ಯೋಗಿಯೊಬ್ಬ ಅಪ್ಪಿಕೊಂಡ ಎಂದು ಆತನ ಮೇಲೆ ಕೇಸು ದಾಖಲಿಸಿದ್ದೂ ಅಲ್ಲದೆ, ಆತ ಅಪ್ಪಿಕೊಂಡ ಪರಿಣಾಮವಾಗಿ ತನ್ನ ಪಕ್ಕೆಲುಬು ಮುರಿದಿದೆ ಎಂದಿದ್ದಾಳೆ.
ಚೀನಾದ ಯೂಯಂಗ್ ನಗರದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಕೆಲಸ ಮಾಡುತ್ತಿದ್ದ ಸಂದರ್ಭ ಆಕೆಯ ಜೊತೆಗೆ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಈಕೆಯೆಡೆಗೆ ಬಂದು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಆತನ ಅಪ್ಪುಗೆ ಎಷ್ಟು ಬಲವಾಗಿತ್ತೆಂದರೆ, ಆಕೆ ನೋವಿನಿಂದ ಕಿರುಚಿಕೊಂಡಿದ್ದಾಳೆ. ಕೂಡಲೇ ಎದೆಗೂಡಿನ ಆಸುಪಾಸಿನಲ್ಲಿ ವಿಪರೀತ ನೋವಾಗಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ಹೋದ ಮೇಲೂ ನೋವು ಮುಂದುವರಿದಿತ್ತು ಎನ್ನಲಾಗಿದೆ. ಆದರೆ, ಮನೆಗೆ ಮರಳಿದ ಮೇಲೆ ಆಕೆ ತನಗೆ ಗೊತ್ತಿದ್ದ ಹಾಗೆ ಬಿಸಿ ಎಣ್ಣೆಯಲ್ಲಿ ಮಸಾಜ್ ಮಾಡಿಕೊಂಡು ನೋವನ್ನು ಕಡಿಮೆ ಮಾಡಲು ಪ್ರಯತ್ನ ಪಟ್ಟಿದ್ದಾಳೆ. ವೈದ್ಯರಲ್ಲಿಗೆ ಹೋಗುವ ಅಗತ್ಯ ಇರಲಿಕ್ಕಿಲ್ಲ ಎಂದು ಯೋಚಿಸಿ, ಇನ್ನೆರಡು ದಿನಗಳಲ್ಲಿ ಸರಿ ಹೋಗಬಹುದು ಎಂದುಕೊಂಡು ಮಸಾಜ್‌ನ ನಂತರ ಬೇಗನೆ ಮಲಗಿಬಿಟ್ಟಿದ್ದಾಳೆ.
ಆದರೆ ಸಮಸ್ಯೆ ಅಲ್ಲಿಗೇ ನಿಂತಿಲ್ಲ. ಐದು ದಿನಗಳ ನಂತರವೂ ನೋವಿನಲ್ಲಿ ಯಾವುದೇ ಬಗೆಯ ಇಳಿಕೆ ಕಂಡುಬರದೆ ಇದ್ದುದು ಆಕೆಗೆ ಗಾಬರಿ ಹುಟ್ಟಿಸಿದೆ. ಅಲ್ಲದೆ, ನೋವು ಹೆಚ್ಚಾಗುತ್ತಲೇ ಇದ್ದುದರಿಂದ, ವೈದ್ಯರನ್ನು ಭೇಟಿಯಾಗಬೇಕೆಂದು ಆಸ್ಪತ್ರೆಗೆ ತೆರಳಿ ಎಕ್ಸರೇ ಮಾಡಿಸಿಕೊಂಡಿದ್ದಾಳೆ. ಎಕ್ಸರೇ ವರದಿಯಲ್ಲಿ, ಆಕೆಯ ಪಕ್ಕೆಲುಬಿನ ಮೂರು ಮೂಳೆಗಳು ಮುರಿದಿವೆ ಎಂಬುದು ಗೊತ್ತಾಗಿ ಆಕೆಗೆ ಶಾಕ್ ಆಗಿದ್ದಾಳೆ. ವೈದ್ಯರು ಆಕೆಗೆ ಕೆಲವು ಕಾಲ ವಿಶ್ರಾಂತಿಯ ಅಗತ್ಯವನ್ನು ಹೇಳಿದ್ದಲ್ಲದೆ, ಆಕೆ ಕೆಲಸಕ್ಕೆ ವೇತನವಿಲ್ಲದ ರಜೆಯನ್ನೂ ಹಾಕಬೇಕಾಗಿ ಬಂದಿದೆ.
ವಿಶ್ರಾಂತಿ ಪಡೆದು ಕೆಲ ಕಾಲದ ನಂತರ ತನ್ನನ್ನು ಅಪ್ಪಿಕೊಂಡ ಸಹೋದ್ಯೋಗಿಯನ್ನು ಭೇಟಿಯಾದ ಈಕೆ, ನಿನ್ನ ಅಪ್ಪುಗೆಯಿಂದ ನಾನು ಸಾಕಷ್ಟು ನಷ್ಟ ಅನುಭವಿಸಿದೆ. ನೋವನ್ನೂ ಅನುಭವಿಸಿದೆ. ಇದರಿಂದ ನನಗೆ ಹಣದ ತೊಂದರೆಯೂ ಆಯಿತು. ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟು ಖರ್ಚೂ ಆಯಿತು. ಹಾಗಾಗಿ ನನಗಾದ ಹಣಕಾಸಿನ ನಷ್ಟವನ್ನು ನೀನೇ ಭರಿಸಬೇಕು ಎಂದು ಆತನಿಗೆ ಹೇಳಿದ್ದಾಳೆ. ಆದರೆ, ತಾನು ಪ್ರೀತಿಯಿಂದ ಅಪ್ಪಿಕೊಂಡ ಮಾತ್ರಕ್ಕೆ ಇಷ್ಟೆಲ್ಲ ಆಗುವುದು ಸಾಧ್ಯವೇ ಇಲ್ಲವೆಂದು ಆಕೆಯೊಂದಿಗೆ ವಾದ ಮಾಡಿದ ಆತ, ನಷ್ಟವನ್ನು ಭರಿಸಲಾಗುವುದಿಲ್ಲ ಎಂದಿದ್ದಾನೆ.ಅಷ್ಟಕ್ಕೂ, ತನ್ನ ಅಪ್ಪುಗೆಯಿಂದಲೇ ಪಕ್ಕೆಲುಬು ಮುರಿದಿದೆ ಎಂದು ಹೇಳಲು ಆಧಾರವಾದರೂ ಏನಿದೆ ಎಂದು ವಿತಂಡ ವಾದ ಮಾಡಿದ್ದಾನೆ. ಇದರಿಂದದ ಕುಪಿತಗೊಂಡ ಆಕೆ, ಆತನ ವಿರುದ್ಧ ಯುಂಕ್ಸಿ ಕೋರ್ಟಿನಲ್ಲಿ ಕೇಸು ದಾಖಲಿಸಿದ್ದಾಳೆ!
ತನಗಾದ ಆರ್ಥಿಕ ನಷ್ಟವನ್ನು ತನ್ನನ್ನು ಅಪ್ಪಿಕೊಂಡ ಸಹೋದ್ಯೋಗಿಯೇ ಭರಿಸಬೇಕು ಎಂಬ ಆಕೆಯ ವಾದ ಇದೀಗ ಕೋರ್ಟಿನಲ್ಲೂ ಗೆದ್ದಿದ್ದು, ನ್ಯಾಯಾಧಿಶರು, ಆಕೆಯ ಸಹೋದ್ಯೋಗಿಗೆ ೧.೧೬ ಲಕ್ಷ ರೂಪಾಯಿಗಳ ದಂಡ ವಿಧಿಸಿದ್ದಾರೆ.
ನ್ಯಾಯಾಲಯವು, ಆಕೆ ಪಕ್ಕೆಲುಬು ಮುರಿದುಕೊಂಡ ಆ ಐದು ದಿನಗಳ ಸಮಯದಲ್ಲಿ ಆಕೆ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಿದ ದಾಖಲೆಗಳಿಲ್ಲದಿರುವುದರಿಂದ, ಆಕೆಯ ಆರೋಪದಂತೆ, ಆತನ ಅಪ್ಪುಗೆಯಿಂದಲೇ ಪಕ್ಕೆಲುಬಿನ ಮೂಳೆ ಮುರಿದಿದೆ. ಇದರಿಂದ ಆಕೆ ನೋವು ಅನುಭವಿಸಿದ್ದೂ ಅಲ್ಲದೆ, ಸಾಕಷ್ಟು ಆರ್ಥಿಕ ನಷ್ಟವನ್ನೂ ಕಾಣುವಂತಾಗಿತ್ತು. ಹಾಗಾಗಿ, ಆತ ಆಕೆಗಾದ ಅಷ್ಟೂ ಆರ್ಥಿಕ ನಷ್ಟವನ್ನು ಸರಿದೂಗಿಸಬೇಕು ಎಂದು ಆತನಿಗೆ ೧.೧೬ ಲಕ್ಷ ರೂಪಾಯಿಗಳ ದಂಡ ವಿಧಿಸಿ ಆದೇಶ ಹೊರಡಿಸಿದೆ ಎಂಬಲ್ಲಿಗೆ ಈ ಅಪ್ಪುಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಗಿದೆ!