ಕೆನಡಾದ ಗ್ಲೋಬಲ್ ನ್ಯೂಸ್ ಚಾನೆಲ್ನ ನಿರೂಪಕಿಯೊಬ್ಬರು ಲೈವ್ನಲ್ಲಿ ಸುದ್ದಿ ಓದುತ್ತಿದ್ದಾಗ ಪೀಕಲಾಟಕ್ಕೆ ಸಿಲುಕಿದ್ದಾರೆ. ಆನ್ ಏರ್ನಲ್ಲಿ ತಾವು ಸುದ್ದಿ ನಿರೂಪಣೆ ಮಾಡುತ್ತಿದ್ದಾಗ ಏನಾಯಿತು? ತಾನ್ಯಾಕೆ ಒಂದು ಕ್ಷಣ ಮುಖದ ಭಾವವನ್ನು ಬದಲಿಸಿದೆ? ತನ್ನ ಗಂಟಲು ಕಟ್ಟಿ, ಧ್ವನಿ ಏಕೆ ಬದಲಾಯಿತು ಎಂಬುದನ್ನು ಈಕೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಕ್ಷಣದ ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದಾರೆ.
ಸುದ್ದಿ ನಿರೂಪಕಿಯ ಹೆಸರು ಫರಾ ನಾಸರ್ ಎಂದಾಗಿದ್ದು, ಟೊರಂಟೊ ಮೂಲದ ಪತ್ರಕರ್ತೆ. ಗ್ಲೋಬಲ್ ನ್ಯೂಸ್ನಲ್ಲಿ ಕೆಲಸ ಮಾಡುತ್ತಿರುವ ಇವರು ಎಂದಿನಂತೆ ಸುದ್ದಿ ಓದುತ್ತಿದ್ದರು. ಪಾಕಿಸ್ತಾನದ ಭೀಕರ ಪ್ರವಾಹ, ಅಲ್ಲಿ ಉಂಟಾದ ಹಾನಿಯ ಬಗ್ಗೆ ವಿವರಿಸುತ್ತಿದ್ದರು. ಆಗ ಒಂದು ಕ್ಷಣ ಅವರು ತುಂಬ ಕಷ್ಟದಿಂದ ಉಗುಳು ನುಂಗುತ್ತಾರೆ. ಕಣ್ಮುಚ್ಚುತ್ತಾರೆ. ಅವರ ಧ್ವನಿಯಲ್ಲೂ ಬದಲಾವಣೆಯಾಗುತ್ತದೆ. ಯಾಕಾಗಿ ಹಾಗೆ ಮಾಡಿದ್ದಾರೆ ಎಂದರೆ, ಆ ಹೊತ್ತಲ್ಲಿ ಅವರು ಒಂದು ‘ನೊಣ’ವನ್ನು ನುಂಗಿದ್ದಾರಂತೆ…!
ಯಾರಾದರೂ ತುಂಬ ದೊಡ್ಡದಾಗಿ ಬಾಯಿ ತೆರೆದು ಆಕಳಿಸುತ್ತಿದ್ದಾಗ, ಅವರ ಬಳಿಕ ಸಾಕು ಬಾಯಿಮುಚ್ಚು ನೊಣ ಹೊಟ್ಟೆಯೊಳಗೆ ಹೋದೀತು ಎಂದು ಕಾಲೆಳೆಯುವುದೂ ಇದೆ. ಆ ನೊಣ ಒಳ ಹೋಗಬಹುದು ಎಂಬ ಮಾತು ಈ ನಿರೂಪಕಿ ವಿಚಾರದಲ್ಲಿ ಸತ್ಯವಾಗಿದೆ. ಆಕೆ ಬಾಯಿ ತೆರೆದು ಒಂದೇ ಸಮ ಮಾತನಾಡುತ್ತಿದ್ದಾಗ ಅಲ್ಲೇ ಹಾರಾಡುತ್ತಿದ್ದ ನೊಣವೊಂದು ಅವರ ಬಾಯೊಳಗೆ ಹೋಗಿ ಗಂಟಲು ಸೇರಿದೆ. ಇನ್ನೇನು ಮಾಡಲು ಸಾಧ್ಯ? ತಾನು ಆನ್ ಏರ್ನಲ್ಲಿ ಇದ್ದೇನೆ. ಸುದ್ದಿ ಲೈವ್ ಹೋಗುತ್ತದೆ ಎಂದು ಅರಿತಿದ್ದ ಫರಾ ನಾಸರ್ ನೊಣವನ್ನು ಹಾಗೇ ನುಂಗಿಬಿಟ್ಟಿದ್ದಾರೆ. ಅದೇ ಕಾರಣಕ್ಕೆ ಆಕೆಯ ಮುಖದ ಭಾವ ಬದಲಾಗಿ, ಗಂಟಲು ಕಟ್ಟಿದೆ.
ಈ ಬಗ್ಗೆ ಟ್ವೀಟ್ ಮಾಡಿ, ವಿಡಿಯೋ ಶೇರ್ ಮಾಡಿಕೊಂಡ ಫರಾ, ‘ಜಗತ್ತಿನಲ್ಲಿ ಈ ಕಾಲದಲ್ಲಿ ನಗು ಎಂಬುದು ಬಹಳ ಮುಖ್ಯ. ಎಲ್ಲರೂ ನೋಡಿ ನಗಲೆಂದೇ ಈ ವಿಡಿಯೋ ಶೇರ್ ಮಾಡುತ್ತಿದ್ದೇನೆ. ನಾನಿವತ್ತು ಗಾಳಿಯಲ್ಲಿ ಹಾರುತ್ತಿದ್ದ ಒಂದು ನೊಣವನ್ನು ನುಂಗಿದೆ’ ಎಂದು ಬರೆದುಕೊಂಡಿದ್ದಾರೆ. ವಿಡಿಯೋವನ್ನು ಭರ್ಜರಿ ಜನರು ಮೆಚ್ಚಿಕೊಂಡಿದ್ದಾರೆ. 99 ಸಾವಿರಕ್ಕೂ ಅಧಿಕ ವೀವ್ಸ್ ಬಂದಿದ್ದು, 1600ಕ್ಕೂ ಹೆಚ್ಚು ಜನ ಲೈಕ್ಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: Viral Video | ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕಿಗೆ ಪತಿಯಿಂದಲೇ ಥಳಿತ