ಹೈದರಾಬಾದ್: ಐಎಎಸ್, ಐಪಿಎಸ್ ಅಧಿಕಾರಿಗಳ ಮದುವೆ ಎಂದರೆ ಸಾಮಾನ್ಯವಾಗಿ ಅಲ್ಲಿ ಅದ್ಧೂರಿತನವಿರುತ್ತದೆ. ದೊಡ್ಡ ದೊಡ್ಡ ಗಣ್ಯರು ಕೂಡ ಅಂತಹ ಮದುವೆಗಳಲ್ಲಿ ಭಾಗವಹಿಸಿ, ನವ ವಧು ವರರಿಗೆ ಹಾರೈಸುತ್ತಾರೆ. ಆದರೆ ಆಂಧ್ರಪ್ರದೇಶದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಟ್ರೈನಿ ಐಪಿಎಸ್ ಅಧಿಕಾರಿಯೊಂದಿಗೆ ಅತ್ಯಂತ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು (Viral News) ಮಾಡುತ್ತಿದೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಜಂಟಿ ಜಿಲ್ಲಾಧಿಕಾರಿ ಆಗಿರುವ ಅಪರಾಜಿತಾ ಸಿಂಗ್ ಅವರು ಟ್ರೈನಿ ಐಪಿಎಸ್ ಅಧಿಕಾರಿಯಾದ ದೇವೇಂದ್ರ ಕುಮಾರ್ ಅವರೊಂದಿಗೆ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಲೆಕ್ಟರ್ ಕಚೇರಿಯಲ್ಲೇ ಈ ಜೋಡಿ ಹಾರ ಬದಲಾಯಿಸಿಕೊಂಡಿದ್ದು, ಆ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಇದನ್ನೂ ಓದಿ: Viral Video : ತನ್ನ ಪ್ರಯಾಣಿಕರಿಗೆಂದು ವಿಶೇಷ ಆಟಗಳನ್ನು ಪರಿಚಯಿಸಿದ ಉಬರ್ ಡ್ರೈವರ್!
ಕಾನೂನು ಪ್ರಕಾರ ಮದುವೆ ನೋಂದಣಿ ಮಾಡಿಕೊಂಡ ಜೋಡಿಯು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಸ್ಪರ ಹೂವಿನ ಹಾರವನ್ನು ಬದಲಾವಣೆ ಮಾಡಿಕೊಂಡಿದೆ. ಕೃಷ್ಣಾ ಜಿಲ್ಲೆಯ ಜಿಲ್ಲಾಧಿಕಾರಿ ಪಿ. ರಾಜಾಬಾಬು ಕೂಡ ಈ ಮದುವೆಗೆ ಸಾಕ್ಷಿಯಾಗಿದ್ದಾರೆ. ಹಾರ ಬದಲಾವಣೆ ಮಾಡಿಕೊಂಡ ನಂತರ ಇಬ್ಬರೂ ಸಂತಸ ವ್ಯಕ್ತಪಡಿಸಿದ್ದಾರೆ. ನವ ಜೋಡಿಗೆ ರಾಜಾಬಾಬು ಅವರು ಶುಭ ಹಾರೈಸಿದ್ದಾರೆ.
ದೇವೇಂದ್ರ ಕುಮಾರ್ ಅವರು ಮೂಲತಃ ರಾಜಸ್ಥಾನದವರಾಗಿದ್ದು, ಪ್ರಸ್ತುತ ಹೈದರಾಬಾದ್ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ತರಬೇತಿ ಪಡೆಯುತ್ತಿದ್ದಾರೆ. ಹಾಗೆಯೇ ಐಎಎಸ್ ಅಧಿಕಾರಿ ಅಪರಾಜಿತಾ ಪ್ರಸ್ತುತ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಜಂಟಿ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: Viral Video: ಟ್ರಾಫಿಕ್ ಸಿಗ್ನಲ್ ವೇಳೆ ಬ್ಯಾಗ್‌ಗೆ ಕೈಹಾಕಿ ತಿಂಡಿ ತಿಂದ ಡೆಲಿವರಿ ಬಾಯ್; ಆರ್ಡರ್ ಮಾಡಿದವನ ಬಗ್ಗೆ ಮರುಕ
ಈ ಹಿಂದೆ ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ಆಂಧ್ರಪ್ರದೇಶ ಕೇಡರ್‌ನ ಇಬ್ಬರು ಐಎಎಸ್ ಅಧಿಕಾರಿಗಳು ವಿವಾಹವಾಗಿದ್ದರು. ವರ್ಷಾರಂಭದಲ್ಲಿ ತಿರುಪತಿಯಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ವಿಜಿನಗರಂ ಜಿಲ್ಲಾಧಿಕಾರಿ ನಾಗಲಕ್ಷ್ಮಿ ಸೆಲ್ವರಾಜನ್ ಅವರು ಶ್ರೀಕಾಕುಳಂ ಜಂಟಿ ಜಿಲ್ಲಾಧಿಕಾರಿ ನವೀನ್ ಕುಮಾರ್ ಅವರು ಹಸೆಮಣೆ ಏರಿದ್ದರು. ಬಂಧುಗಳು, ಸ್ನೇಹಿತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಿತ್ತು. ನಾಗಲಕ್ಷ್ಮಿ 2012ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ನವೀನ್ ಕುಮಾರ್ 2019ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ.