ನವದೆಹಲಿ: ಶಿಶುಗಳು ತಾಯಿಯ ಗರ್ಭದಲ್ಲಿ 9 ತಿಂಗಳ ಕಾಲ ಸದೃಢವಾಗಿ ಬೆಳೆದು ನಂತರ ಭೂಮಿಗೆ ಬರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹಾಗಾಗುತ್ತಿಲ್ಲ. 9 ತಿಂಗಳಿಗೂ ಮೊದಲೇ ಸಾಕಷ್ಟು ಸಂಖ್ಯೆಯ ಶಿಶುಗಳು ತಾಯಿ ಗರ್ಭದಿಂದ ಹೊರ ಬರುತ್ತಿವೆ. ಪೂರ್ತಿ ವಿಶ್ವದಲ್ಲಿ ಪ್ರತಿ ಎರಡು ಸೆಕೆಂಡಿಗೆ ಒಂದು ಮಗು ಅವಧಿಗೂ ಮೊದಲೇ ಹೆರಿಗೆಯಾಗುತ್ತಿದೆ. ಅದರಲ್ಲೂ ಈ ರೀತಿ ಅವಧಿಗೂ ಮೊದಲೇ, ಪ್ರಸವಪೂರ್ವ ಹೆರಿಗೆಯಾಗುವುದರಲ್ಲಿ ನಮ್ಮ ಭಾರತ ದೇಶ ಟಾಪ್ 5ರಲ್ಲಿ (Viral News) ಸ್ಥಾನ ಗಿಟ್ಟಿಸಿಕೊಂಡಿದೆ.
ಹೌದು. ಈ ಕುರಿತಾಗಿ ವಿಶ್ವಸಂಸ್ಥೆಯ ವಿಭಾಗವೊಂದು ಸಮೀಕ್ಷೆ ನಡೆಸಿದ್ದು, ಅದರ ವರದಿಯಲ್ಲಿ ಮಂಗಳವಾರ ಪ್ರಕಟಿಸಿದೆ. 2020ರ ದಾಖಲೆಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದ್ದು, ಅದರಲ್ಲಿ ಹೇಳಿರುವ ಪ್ರಕಾರ ಆ ವರ್ಷದಲ್ಲಿ ಅವಧಿಗೂ ಮೊದಲು ಜನನ(37 ವಾರಗಳಿಗೂ ಮೊದಲು) ಪ್ರಕರಣಗಳು ಅತಿ ಹೆಚ್ಚಾಗಿ ದಾಖಲಾಗಿರುವುದು ಭಾರತ, ಪಾಕಿಸ್ತಾನ, ನೈಜೀರಿಯಾ, ಚೀನಾ ಮತ್ತು ಇಥಿಯೋಪಿಯಾ ದೇಶಗಳಲ್ಲಿ. ಒಟ್ಟಾರೆ ಪ್ರಕರಣಗಳ ಶೇ.45 ಪಾಲನ್ನು ಈ ಐದು ರಾಷ್ಟ್ರಗಳೇ ಪಡೆದುಕೊಂಡಿವೆ.
ಇದನ್ನೂ ಓದಿ: Viral Story: ಕೆಟ್ಟ ವಾಸನೆಯ ಸ್ಪ್ರೇಯಿಂದ ಬೇಸ್ತು ಬೀಳಿಸಲು ಹೊರಟ ವಿದ್ಯಾರ್ಥಿಗಳು: ಮಕ್ಕಳು ಆಸ್ಪತ್ರೆ ಪಾಲು!
2020 ಒಂದೇ ವರ್ಷದಲ್ಲಿ ಒಟ್ಟು 13.4 ಮಿಲಿಯನ್ (1.34 ಕೋಟಿ) ಶಿಶುಗಳು ಅವಧಿಗೆ ಮೊದಲೇ ಜನಿಸಿವೆ. ಅದರಲ್ಲಿ 10 ಲಕ್ಷಕ್ಕೂ ಅಧಿಕ ಶಿಶುಗಳು ಹುಟ್ಟಿದ ಕೆಲ ಸಮಯ ಅಥವಾ ದಿನಗಳಲ್ಲಿ ಸಾವನ್ನಪ್ಪಿವೆ. ಅಂದರೆ ಅವಧಿಗೂ ಮೊದಲೇ ಹುಟ್ಟಿದ 10 ಶಿಶುಗಳಲ್ಲಿ ಒಂದು ಶಿಶು ಸಾವನ್ನಪ್ಪಿದ ಅರ್ಥ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆ ವರ್ಷದಲ್ಲಿ ಅವಧಿಗೂ ಮೊದಲೇ ಜನನದ ಪ್ರಕರಣಗಳಲ್ಲಿ ಶೇ. 16.2 ಪಾಲು ಬಾಂಗ್ಲಾದೇಶದ್ದಿದೆ. ಇನ್ನು ಪಾಕಿಸ್ತಾನವು ಶೇ.14.4 ಪಾಲು, ಮಲಾವಿಯು ಶೇ.14.5 ಪಾಲು ಮತ್ತು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಲಾ ಶೇ. 13 ಪಾಲನ್ನು ಹಂಚಿಕೊಂಡಿವೆ. ಭಾರತದಲ್ಲಿ ಒಟ್ಟು 30.16 ಲಕ್ಷ ಶಿಶುಗಳು, ಪಾಕಿಸ್ತಾನದಲ್ಲಿ 9.14 ಲಕ್ಷ ಶಿಶುಗಳು, ನೈಜೀರಿಯಾದಲ್ಲಿ 7.74 ಲಕ್ಷ ಶಿಶುಗಳು, ಚೀನಾದಲ್ಲಿ 7.52 ಲಕ್ಷ ಶಿಶುಗಳು ಅವಧಿಗೂ ಮೊದಲೇ ಜನಿಸಿವೆ ಎಂದು ವರದಿಯಾಗಿದೆ.
ಈ ಬಗ್ಗೆ ರಾಷ್ಟ್ರೀಯ ನಿಯೋನಾಟಾಲಜಿ ಫೋರಮ್‌ನ ಪ್ರಧಾನ ಕಾರ್ಯದರ್ಶಿಗಳಾಗಿರುವ ಡಾ.ಸುರೇಂದರ್ ಸಿಂಗ್ ಬಿಶ್ತ್ ಪ್ರತಿಕ್ರಿಯಿಸಿದ್ದು, “ಗ್ರಾಮೀಣ ಪ್ರದೇಶಗಳಲ್ಲಿ, ಆರೋಗ್ಯ ರಕ್ಷಣೆಯ ಕೊರತೆಯ ಬಗ್ಗೆ ಸಾಮಾನ್ಯ ದೂರು ಇದೆ. ಈಗಾಗಲೇ ನವಜಾತ ಶಿಶು ಆರೈಕೆ ಘಟಕಗಳು, ಸುಧಾರಿತ ಕಾರ್ಮಿಕ ಕೊಠಡಿಗಳು ಮತ್ತು ಉನ್ನತ ಮಟ್ಟದ ಹೆರಿಗೆ ಕೇಂದ್ರಗಳು ಇವೆ. ಹಾಗೆಯೇ ಅನೇಕ ಉಪಕ್ರಮಗಳು ಪ್ರಸವಪೂರ್ವ ಶಿಶುಗಳನ್ನು ಉಳಿಸಲು ಸಹಾಯ ಮಾಡಿದೆ. ಆದರೆ ಅವು ಇನ್ನೂ ವಿಸ್ತಾರವಾಗಿಲ್ಲ” ಎಂದು ತಿಳಿಸಿದ್ದಾರೆ.