Site icon Vistara News

Instagram Influencer : ಹೆದ್ದಾರಿಯಲ್ಲಿ ರೀಲ್ಸ್‌ ಮಾಡಿದರು, 17,000 ರೂ. ದಂಡ ತೆತ್ತರು

ಲಕ್ನೋ: ಇದು ಸೋಶಿಯಲ್‌ ಮೀಡಿಯಾ ಯುಗ. ಈಗಿನ ಯುವಜನತೆಯಂತೂ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲೇ ಹೆಚ್ಚಾಗಿ ಕಾಲ ಕಳೆಯುತ್ತಾರೆ. ಅದರಲ್ಲೇ ಪ್ರಸಿದ್ಧರಾಗಿ ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌ (Instagram Influencer) ಎಂದೆನಿಸಿಕೊಳ್ಳುತ್ತಾರೆ. ಈ ರೀತಿ ಇನ್‌ಫ್ಲೂಯೆನ್ಸರ್‌ಗಳು ಸಮಾಜದ ಎದುರು ವಿಡಿಯೊಗಳನ್ನು ಮಾಡಿ ಹರಿಬಿಡುತ್ತಿರುತ್ತಾರೆ. ಉತ್ತರ ಪ್ರದೇಶದ ಇನ್‌ಫ್ಲೂಯೆನ್ಸರ್‌ ಒಬ್ಬರು ಇದೇ ರೀತಿ ಮಾಡಿ ಇದೀಗ 17,000 ರೂ. ದಂಡ ಕಟ್ಟುವ ಪರಿಸ್ಥಿತಿಯಲ್ಲಿದ್ದಾರೆ.

ಇದನ್ನೂ ಓದಿ: Rishabh Pant | ಪಂತ್‌ ಜತೆಯೇ ಇದ್ದಾರಾ ಊರ್ವಶಿ? ಕುತೂಹಲ ಹುಟ್ಟಿಸಿದ ಇನ್‌ಸ್ಟಾಗ್ರಾಂ ಸ್ಟೋರಿ!

ಉತ್ತರ ಪ್ರದೇಶದ ಗಾಜಿಯಾಬಾದ್‌ನವರಾಗಿರುವ ವೈಶಾಲಿ ಚೌಧರಿಗೆ ಇನ್‌ಸ್ಟಾಗ್ರಾಂನಲ್ಲಿ 6.52 ಲಕ್ಷದಷ್ಟು ಹಿಂಬಾಲಕರಿದ್ದಾರೆ. ರೀಲ್ಸ್‌ಗಳ ಮೂಲಕವೇ ಪ್ರಸಿದ್ಧರಾಗಿರುವ ಈ ಯುವತಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಹೆದ್ದಾರಿ ಮೇಲೆ ನಿಂತಿರುವ ಕಾರಿನ ಮುಂದೆ ನಡೆಯುವುದು, ಫೋಸ್‌ ಕೊಡುವ ವಿಡಿಯೊ ಅದಾಗಿದೆ.


ಈ ರೀತಿ ಹೆದ್ದಾರಿ ಮೇಲೆ ವಿಡಿಯೊ ಮಾಡಿದ್ದರ ಬಗ್ಗೆ ಅನೇಕರು ಪ್ರಶ್ನೆ ಕೇಳಿದ್ದಾರೆ. ಉತ್ತರ ಪ್ರದೇಶದ ಪೊಲೀಸರೂ ಕೂಡ ವಿಡಿಯೊ ಗಮನಿಸಿದ್ದು, ಯುವತಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಶಹೀಬಾಬಾದ್‌ನಲ್ಲಿರುವ ಹೆದ್ದಾರಿಯಲ್ಲಿ ಈ ರೀತಿಯ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ಹೆದ್ದಾರಿಯಲ್ಲಿ ಜನರಿಗೆ ತೊಂದರೆಯಾಗುವಂತೆ ವಾಹನ ನಿಲ್ಲಿಸಿ, ವಿಡಿಯೊ ಮಾಡಿರುವ ಹಿನ್ನೆಲೆ ಶಹೀಬಾಬಾದ್‌ನ ಪೊಲೀಸರು ಯುವತಿಗೆ 17,000 ರೂ. ದಂಡ ವಿಧಿಸಿದ್ದಾರೆ. ಈ ವಿಚಾರವನ್ನು ಪೊಲೀಸ್‌ ಇಲಾಖೆಯು ಟ್ವಿಟರ್‌ನಲ್ಲಿ ತಿಳಿಸಿದೆ.

Exit mobile version