ಹುಲಿ-ಚಿರತೆ-ಸಿಂಹಗಳು ಜಿಂಕೆ, ಮೊಲ ಇತ್ಯಾದಿ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಅದು ಪ್ರಕೃತಿ ನಿಯಮ. ಈಗ ತಂತ್ರಜ್ಞಾನ ಮುಂದುವರಿದ ಮೇಲಂತೂ ಪ್ರಾಣಿಗಳ ಬೇಟೆ-ಕಾಳಗದ ವಿಡಿಯೋ, ಫೋಟೋಗಳೂ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ನೋಡಲು ಸಿಗುವಂತಾಗಿದೆ. ಅಂಥದ್ದೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ತುಂಬ ವೈರಲ್ ಆಗುತ್ತಿದೆ.
ಇದು ಚಿರತೆಯ ಬೇಟೆ. ಚಿರತೆ ಬೇಟೆಯಾಡಿದ್ದು ಯಾವುದೋ ಸಣ್ಣ, ಸಸ್ಯಹಾರಿ ಪ್ರಾಣಿಯನ್ನಲ್ಲ. ತನ್ನಂತೇ ಮಾಂಸಭಕ್ಷಕನಾಗಿರುವ ಮೊಸಳೆಯೊಂದನ್ನ. ‘ಅದೊಂದು ನದಿ. ಮೊಸಳೆ ಈಜುತ್ತ ಹೋಗುತ್ತಿರುತ್ತದೆ. ಆ ನದಿಯ ದಡದ ಮೇಲೆ ಇರುವ ಪೊದೆಗಳ ನಡುವೆ ಕುಳಿತು ಚಿರತೆಯೊಂದು ಹೊಂಚು ಹಾಕುತ್ತಿರುತ್ತದೆ. ಆ ಮೊಸಳೆಯೇ ಅದರ ಗುರಿ. ಕ್ಷಣಕಾಲ ಕಾದ ಚಿರತೆ, ಮೊಸಳೆಯಿದ್ದಲ್ಲಿಗೇ ನೇರವಾಗಿ ಛಂಗನೆ ಜಿಗಿಯುತ್ತದೆ. ಅದು ಹಾರಿದ ರಭಸಕ್ಕೆ ನೀರು ಮೇಲಕ್ಕೆ ಛಿಮ್ಮುವ ದೃಶ್ಯ ಮನಮೋಹಕ. ಸರಿಯಾಗಿ ಮೊಸಳೆಯ ಮೇಲೆ ಬಿದ್ದ ಚಿರತೆ ಅದನ್ನು ಉಲ್ಟಾ ಮಾಡಿ, ಕುತ್ತಿಗೆಗೇ ತನ್ನ ಬಾಯಿ ಹಾಕಿ, ಕಚ್ಚಿ ಹಿಡಿದು ದಡಕ್ಕೆ ತರುತ್ತದೆ. ಮತ್ತದೇ ಪೊದೆಯೊಳಗೆ ನುಸುಳಿ ಹೋಗುತ್ತದೆ’-ಇವಿಷ್ಟು ವಿಡಿಯೋದಲ್ಲಿ ಕಾಣುವ ದೃಶ್ಯ. ಆದರೆ ಈ ವಿಡಿಯೋ ನೋಡುತ್ತ ನೋಡುತ್ತ ನಮ್ಮ ಮೈ ನವಿರೇಳುತ್ತದೆ. ಇದೊಂಥರ ಭೀಕರ-ಮನಮೋಹಕ ದೃಶ್ಯವೆಂದರೂ ತಪ್ಪಾಗಲಾರದು.
Figen ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿರುವ 42 ಸೆಕೆಂಡ್ಗಳ ಈ ವಿಡಿಯೋ ನೋಡಿದ ನೆಟ್ಟಿಗರು ಚಿರತೆ ಸಾಹಸ, ಬೇಟೆಯಾಡುವ ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಇಂಥ ಕಾರಣಕ್ಕೇ ನಮಗೆ ಚಿರತೆ ಅತ್ಯಂತ ಇಷ್ಟವಾಗುವ ಪ್ರಾಣಿ ಎಂದು ಅನೇಕರು ಹೇಳಿಕೊಂಡಿದ್ದಾರೆ. ‘ಚಿರತೆ/ಹುಲಿಗಳು ಹೀಗೆ ಮೊಸಳೆಯನ್ನೆಲ್ಲ ಬೇಟೆಯಾಡುತ್ತವೆ ಎಂಬುದನ್ನು ಕೇಳಿಯೂ ಇರಲಿಲ್ಲ, ನೋಡಿಯೂ ಇರಲಿಲ್ಲ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video | ಕೊಳಕ್ಕೆ ಬಿದ್ದ ಮರಿಯಾನೆ ರಕ್ಷಿಸಿದ ಆನೆಗಳು; ಬೇಲಿಯಾಚೆಗಿದ್ದ ಆನೆಗೆ ಇನ್ನಿಲ್ಲದ ತಳಮಳ !