ಹಾವು ಕಂಡರೆ ಮಾರು ದೂರ ಓಡುವವರಿದ್ದಾರೆ. ಹಾವಿನ ವಿಡಿಯೊಗಳನ್ನು ಕಂಡರೂ ಹೆದರಿ ಕಣ್ಣು ಮುಚ್ಚಿಕೊಳ್ಳುವವರೂ ಇದ್ದಾರೆ. ಆದರೆ ಇಲ್ಲೊಂದು ಮಗು ಮಾತ್ರ ಹಾವನ್ನು ಹಗ್ಗದಂತೆ ಎಳೆದುಕೊಂಡು ಮನೆಯೊಳಗೇ ಹೋಗಿ ಪೂರ್ತಿ ಕುಟುಂಬದ ಸದಸ್ಯರನ್ನು ಗಾಬರಿಗೊಳಿಸಿರುವ ಘಟನೆ ನಡೆದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ (Viral Video)ಆಗಿದೆ.
ಎರಡರಿಂದ ಮೂರು ವರ್ಷದ್ದಾಗಿರಬಹುದಾರ ಮಗುವೊಂದು ಮಾರುದ್ದ ಇರುವ ಹಾವಿನ ಬಾಲವನ್ನು ಹಿಡಿದುಕೊಂಡಿದೆ. ಅಲ್ಲಿಗೆ ಸುಮ್ಮನಾಗದ ಆ ಮಗು ಹಾವನ್ನು ಎಳೆದುಕೊಂಡು ಮನೆಯೊಳಗೆ ಹೋಗುತ್ತದೆ. ಮನೆಯಲ್ಲಿ ಕುಟುಂಬಸ್ಥರೆಲ್ಲರು ಕುಳಿತಿದ್ದ ಕೋಣೆಯೊಳಗೇ ಆ ಹಾವನ್ನು ಎಳೆದುಕೊಂಡು ಹೋಗುತ್ತದೆ. ಹಾವನ್ನು ನೋಡುತ್ತಿದ್ದಂತೆಯೇ ಅಲ್ಲಿ ನೆಲದ ಮೇಲೆ ಕುಳಿತಿದ್ದ ಮಹಿಳೆಯರೆಲ್ಲರೂ ಭಯದಿಂದ ಎದ್ದು ದೂರ ಸರಿದು ನಿಲ್ಲುತ್ತಾರೆ. ಅವರ ಜತೆಗೆ ಪುಟ್ಟ ಪುಟ್ಟ ಮಕ್ಕಳೂ ಇದ್ದು, ಅವುಗಳೆಲ್ಲವೂ ಭಯದಿಂದ ಚೀರಲಾರಂಭಿಸುತ್ತವೆ.
ಇದನ್ನೂ ಓದಿ: Video Viral : ರಾಯಚೂರು YTPS ಬಳಿ ಕಂಡ ಅನಕೊಂಡ ಮಾದರಿಯ ಹೆಬ್ಬಾವು!
ಅಷ್ಟರಲ್ಲಿ ಹಾವನ್ನು ಹಿಡಿದ ಮಗುವಿನ ಹಿಂದಿನಿಂದ ಇನ್ನೊಬ್ಬ ವ್ಯಕ್ತಿ ಬಂದು ಆ ಮಗುವನ್ನು ಆ ಕೋಣೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಗೆ ವಿಡಿಯೊ ಅಂತ್ಯವಾಗುತ್ತದೆ. ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಜುಲೈ 1ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 1.8 ಕೋಟಿಗೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಏಳು ಲಕ್ಷಕ್ಕೂ ಅಧಿಕ ಮಂದಿ ವಿಡಿಯೊವನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ.
ಈ ವಿಡಿಯೊ ಭಾರೀ ವೈರಲ್ ಆಗಿದ್ದು, ಕಮೆಂಟ್‌ಗಳಲ್ಲಿ ಹಲವಾರು ರೀತಿಯ ಚರ್ಚೆಗಳು ಕೂಡ ನಡೆಯುತ್ತಿವೆ. “ಆ ಮಗುವನ್ನು ಕರೆದುಕೊಂಡು ಹೋದ ವ್ಯಕ್ತಿಗೂ ಹಾವೆಂದರೆ ಭಯವಿಲ್ಲ ಎನಿಸುತ್ತದೆ. ಒಳ್ಳೆ ಸಾಕು ಪ್ರಾಣಿಯೇನೋ ಎನ್ನುವಂತೆ ನಡೆದುಕೊಂಡಿದ್ದಾರೆ”, “ಹಾವು: ಬ್ರೋ ನಾನು ಒಬ್ಬಂಟಿಯಾಗಿಬಿಟ್ಟಿದ್ದೇನೆ. ಮಗು: ಅಯ್ಯೋ ಅದಕ್ಕೇನು ಚಿಂತೆ, ಬಾ ನನ್ನ ಕುಟುಂಬವನ್ನು ಮೀಟ್ ಮಾಡಿಸ್ತೇನೆ”, ” ಮಕ್ಕಳ ಹಕ್ಕು ರಕ್ಷಣೆ ಆಯೋಗವು ಈ ಮಗುವಿನ ಪೋಷಕರ ಮತ್ತು ಈ ವಿಡಿಯೊವನ್ನು ಚಿತ್ರೀಕರಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.