ಏನೇ ಮಾಡಬೇಕಿದ್ದರೂ ಮನಸ್ಸು ಬೇಕು. ಜೊತೆಗೆ ಮಾಡುತ್ತೇನೆಂಬ ಛಲವೂ. ಇವೆರಡು ಇದ್ದರೆ ಎಂತಹ ಕಷ್ಟವನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಈಕೆಯೇ ಸಾಕ್ಷಿ. ಜೀವನ ಅಂದುಕೊಂಡಂತೆ ನಡೆಯದಿದ್ದಾಗ, ಕನಸುಗಳೆಲ್ಲ ತೋಪಾಗಿ ಯಾವುದೂ ಕೈ ಹಿಡಿಯದಿದ್ದಾಗ, ಅಯ್ಯೋ ನನ್ನ ಪರಿಸ್ಥಿತಿ ಹೀಗಾಯಿತಲ್ಲ ಎಂದು ಅಧೀರಳಾಗದೆ, ಸ್ವಮರುಕ ಪಡುತ್ತಾ ಕೂರದೆ, ಕಷ್ಟಪಟ್ಟು ನನ್ನ ಪುಟ್ಟ ಮಗುವನ್ನು ಸಾಕುವೆ ಎಂದು ಹೊರಟ ಛಲಗಾರ್ತಿಯ ಸ್ಪೂರ್ತಿಕಥೆಯಿದು!
ಇದು ೨೭ರ ಹರೆಯದ ಚಂಚಲ್ ಶರ್ಮಾ ಎಂಬ ಯುವತಿಯ ಕಥೆ. ಕೇವಲ ಒಂದು ವರ್ಷದ ಮಗುವನ್ನು ಬೇಬಿ ಕ್ಯಾರಿಯರ್ ಮೂಲಕ ತನ್ನ ಸೊಂಟಕ್ಕೆ ಸುತ್ತಿಕೊಂಡು ನೋಯ್ಡಾದ ಈ ಚಂಚಲ್ ಶರ್ಮಾ ಎಂಬಾಕೆ ಕೆಲಸಕ್ಕೆ ಹೊರಟರೆ ಆಮೇಲೆ ಹಿಂತಿರುಗಿ ನೋಡುವುದಿಲ್ಲ. ಹೊಟ್ಟೆಗೆ ಹಿಟ್ಟು ಬೇಕಿದ್ದರೆ, ಸಣ್ಣ ಮಗು ಇದೆ ಎಂದು ಮನೆಯಲ್ಲಿ ಕೂತರೆ ಬದುಕು ನಡೆದೀತೇ ಎಂಬ ಸತ್ಯ ಈಕೆ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾಳೆ. ಯಾರಿಗೂ ಹೊರೆಯಾಗಿ ಬದುಕದೆ, ತನಗೂ ತನ್ನ ಮಗುವಿಗೂ ಹೊಟ್ಟೆ ತುಂಬ ಉಂಡು ನೆಮ್ಮದಿಯ ಆತ್ಮವಿಶ್ವಾಸದ ಸ್ವಾವಲಂಬನೆಯ ಬದುಕು ಸಾಧಿಸಲು ಈಕೆ ಇ-ರಿಕ್ಷಾ ಚಲಾಯಿಸುತ್ತಾಳೆ!
ಈಕೆಯ ದಿನ ಆರಂಭವಾಗುವುದು ಬೆಳಗ್ಗೆ ೬.೩೦ಕ್ಕೆ. ಸೂರ್ಯ ಮೇಲೆ ಬಂದನೆಂದರೆ ಈಕೆಯೂ ತನ್ನ ಮಗುವನ್ನು ಮಡಿಲಿಗೆ ಕಟ್ಟಿಕೊಂಡು ರಿಕ್ಷಾದಲ್ಲಿ ಹೊರಡುತ್ತಾಳೆ. ಮಧ್ಯಾಹ್ನದ ಹೊತ್ತಿಗೆ ಮಗುವನ್ನು ಕರೆದುಕೊಂಡು ಊಟಕ್ಕಾಗಿ ಮನೆಗೆ ಬರುತ್ತಾಳೆ. ಮತ್ತೆ ತನ್ನ ಕೆಲಸಕ್ಕೆ ಹೊರಡುತ್ತಾಳೆ. ನಡುನಡುವೆ ಮಗುವಿಗೆ ಹಸಿವಾದಾಗಲೆಲ್ಲ ಬಾಟಲಿಯಲ್ಲಿದ್ದ ಹಾಲು ಕುಡಿಸುತ್ತಾಳೆ.
ಹಲವು ಮಹಿಳೆಯರಂತೆ ಈಕೆಗೂ ಮಗುವನ್ನು ನೋಡಿಕೊಳ್ಳಲು ಡೇಕೇರ್‌ನಲ್ಲಿ ಬಿಡುವಷ್ಟು ಆರ್ಥಿಕ ಪರಿಸ್ಥಿತಿ ಇಲ್ಲದಿರುವುದರಿಂದ ಆಕೆ ತಾನೇ ಮಗುವನ್ನೂ ಜೊತೆಗೇ ಕರೆದುಕೊಂಡು ಚಲಾಯಿಸುವ ಕೆಲಸ ಮಾಡುತ್ತಾಳೆ. ನೋಯ್ಡಾ ಸೆಕ್ಟರ್ ೬೨ರ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಬಯೋಲಾಜಿಕಲ್ಸ್‌ನಿಂದ ಸೆಕ್ಟರ್ ೫೯ ಲೇಬರ್ ಚೌಕ್‌ವರೆಗಿನ ೬.೫ ಕಿಮೀ ವ್ಯಾಪ್ತಿಯಲ್ಲಿ ಈಕೆ ಪ್ರತಿದಿನ ವಾಹನ ಚಲಾಯಿಸುತ್ತಾಳೆ.
ಈ ರಸ್ತೆಯಲ್ಲಿ ಸಿಗುವ ಏಕೈಕ ಮಹಿಳಾ ಚಾಲಕರೆಂದರೆ ಚಂಚಲ್ ಮಾತ್ರವೇ ಆಗಿರುವುದರಿಂದ ಸಹಜವಾಗಿಯೇ ಎಲ್ಲರ ಗಮನವನ್ನೂ ಚಂಚಲ್ ಸೆಳೆಯುತ್ತಾಳೆ. ಜೊತೆಗೆ ಮಗುವನ್ನೂ ಸೊಂಟಕ್ಕೆ ಬಿಗಿದು ಡ್ರೈವ್ ಮಾಡುವುದರಿಂದ, ಯಾರೇ ಪ್ರಯಾಣಿಕರು ಬಂದರೂ ಆಕೆಯನ್ನೊಮ್ಮೆ ಮಾತಾಡಿಸಿ ಸ್ವಾವಲಂಬೀ ಜೀವನದೆಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರಂತೆ. ಜೊತೆಗೆ ಮಹಿಳಾ ಪ್ರಯಾಣಿಕರು ಹೆಚ್ಚಾಗಿ ಆಕೆಯ ರಿಕ್ಷಾವನ್ನೇ ಬಯಸುತ್ತಾರಂತೆ.
ಇದನ್ನೂ ಓದಿ | ನನ್ನ ಡೆತ್ ಸರ್ಟಿಫಿಕೇಟ್ ಕಳೆದು ಹೋಗಿದೆ, ಸಿಕ್ಕವರು ಕೊಟ್ಟುಬಿಡಿ; ವೈರಲ್ ಆಯಿತು ವಿಚಿತ್ರ ಜಾಹೀರಾತು
ಚಂಚಲ್ ತನ್ನ ಗಂಡನಿಂದ ಬೇರ್ಪಟ್ಟಿದ್ದು, ತನ್ನ ತಾಯಿಯೊಂದಿಗೆ ಒಂದೇ ಕೋಣೆಯ ಮನೆಯೊಂದರಲ್ಲಿ ವಾಸವಾಗಿದ್ದಾಳೆ. ಆಕೆಯ ತಾಯಿ ಗಾಡಿಯಲ್ಲಿ ಈರುಳ್ಳಿ ಮಾರಾಟ ಮಾಡುತ್ತಾರೆ. ಸಹೋದರನೊಬ್ಬ ಇದ್ದರೂ ಆತ ಮನೆಗೆ ಬರುವುದು ಬಹಳ ಕಡಿಮೆ. ಹಾಗಾಗಿ ತನ್ನ ಮಗ ಅಂಕುಶ್‌ನನ್ನು ಅಲ್ಲಿ ಬಿಟ್ಟು ಬರುವಂತಿಲ್ಲ ಎನ್ನುತ್ತಾರೆ ಆಕೆ.
ದಿನಕ್ಕೆ ೬೦೦-೭೦೦ ರೂಪಾಯಿಗಳನ್ನು ಆಕೆ ಸಂಪಾದಿಸುತ್ತಿದ್ದು, ಇದರಲ್ಲಿ ೩೦೦ ರೂಪಾಯಿಗಳನ್ನು ಬ್ಯಾಟರಿ ಚಾಲಿತ ಈ ರಿಕ್ಷಾದ ಸಾಲಕ್ಕಾಗಿ ಪಾವತಿಸಬೇಕಾಗುತ್ತದೆ. ಉಳಿದದ್ದಷ್ಟೆ ದಿನಬಳಕೆಗೆ ಸಿಗುತ್ತದೆ. ಈಕೆಗೆ ಮೂವರು ಸಹೋದರಿಯರೂ ಇದ್ದು ಅವರೆಲ್ಲ ಮದುವೆಯಾಗಿ ಬೇರೆಡೆ ವಾಸಿಸುತ್ತಿದ್ದಾರೆ. ಕೆಲವೊಮ್ಮೆ ಅವರ ಮನೆಯಲ್ಲಿ ಮಗುವನ್ನು ಬಿಟ್ಟು ಬರುವ ಚಂಚಲ್, ಇದು ಯಾವಾಗಲೂ ಸಾಧ್ಯವಾಗುವುದಿಲ್ಲ, ತಿಂಗಳಲ್ಲಿ ಎರಡು ಮೂರು ದಿನಗಳಷ್ಟೆ ಹೀಗೆ ಮಾಡುತ್ತೇನೆ. ಉಳಿದ ದಿನಗಳಲ್ಲಿ ಮಗನನ್ನು ನನ್ನ ಜೊತೆಗೇ ಇರಿಸಿಕೊಳ್ಳುತ್ತೇನೆ ಎನ್ನುತ್ತಾರೆ.
ಎಲ್ಲ ತಾಯಂದಿರಂತೆ, ತನ್ನ ಮಗನನ್ನು ಚೆನ್ನಾಗಿ ಓದಿಸಿ ವಿದ್ಯಾವಂತನನ್ನಾಗಿ ಮಾಡುವ ಕನಸನ್ನು ಚಂಚಲ್ ಹೊಂದಿದ್ದು, ತನ್ನಂತೆ ಮಗ ಕಷ್ಟಪಡಬಾರದು. ಆತನಾದರೂ ಸುಖ ಜೀವನ ಕಾಣುವಂತಾದರೆ ಸಾಕು ಎನ್ನುತ್ತಾರೆ.
ಇದನ್ನೂ ಓದಿ | Ira khan | ನೂಪುರ್ ಶಿಖರೆ ಜತೆ ಎಂಗೇಜ್ ಆದ ಆಮಿರ್ ಖಾನ್ ಪುತ್ರಿ ಇರಾ ಖಾನ್: ವಿಡಿಯೊ ವೈರಲ್!