Site icon Vistara News

37ರ ಹರೆಯದ ಈಕೆಯ ಮರೆವಿನ ಕಾಯಿಲೆಯ ಕಾರಣ ನೀರು ಸೋರಿಕೆ!‌

alzheimer

ಇಲ್ಲೊಬ್ಬಾಕೆ ಆರೋಗ್ಯವಂತ ಮಹಿಳೆಗೆ ತನ್ನ ೩೭ರ ಸಣ್ಣ ವಯಸ್ಸಿನಲ್ಲಿಯೇ ಮರೆವಿನ ಕಾಯಿಲೆ ಅಲ್ಜೈಮರ್ ಬಂದಿದೆಯಂತೆ! ಆದರೆ, ಕಾರಣ ತಿಳಿದರೆ ನಿಜವಾಗಿಯೂ ಹೀಗೂ ಉಂಟೇ ಎಂದು ಖಂಡಿತವಾಗಿಯೂ ದಂಗಾಗಿಬಿಡುವುದು ಖಚಿತ. ಈಕೆಯ ಅಲ್ಜೈಮರ್‌ಗೆ ಕಾರಣವಾಗಿದ್ದು, ಈಕೆಯ ಮನೆಯ ಕಾರ್ಪೆಟ್‌ ಅಡಿಯಲ್ಲಿ ನಿರಂತರವಾಗಿ ನೀರು ಸೋರುತ್ತಿದ್ದುದರಿಂದ ಎಂದರೆ ನಂಬಲೇಬೇಕು!

ಹೌದು. ತಿಂಗಳುಗಳ ನಂತರ ಆಕೆಯ ಕಾಯಿಲೆಯ ನಿಜವಾದ ಕಾರಣ ಆಕೆಯೇ ಪತ್ತೆ ಹಚ್ಚಿದ್ದು, ಅದು ತನ್ನದೇ ಮನೆಯ ಫ್ಲೋರ್‌ನ ಕಾರ್ಪೆಟ್‌ ಅಡಿಯಲ್ಲಿ ನಿರಂತರವಾಗಿ ನೀರು ಸೋರುತ್ತಿದ್ದ ಕಾರಣ ಉತ್ಪತ್ತಿಯಾದ ವಿಷಕಾರಿ ಪದಾರ್ಥಗಳಿಂದ ಎಂಬುದು ಗೊತ್ತಾಗಿದೆ. ಮನೆ ಬದಲಾಯಿಸಿದ ಮೇಲೆ ಆಕೆ ಕಾಯಿಲೆಯಿಂದ ಗುಣಮುಖಳಾಗಿದ್ದಾಳೆ ಕೂಡಾ!

ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನ ಆಮೀ ಸ್ಕಿಲ್ಟನ್‌ ಎಂಬಾಕೆಗೆ ಕೇವಲ ೩೭ ವರ್ಷವಾಗಿದ್ದಾಗ ಆಕೆಗೆ ಮರೆವಿನ ಕಾಯಿಲೆ ಬಂತಂತೆ! ಖಾಯಿಲೆ ಎಷ್ಟು ತೀವ್ರವಾಗಿತ್ತೆಂದರೆ, ಆಕೆಗೆ ಒಂದು ದಿನ ತನ್ನ ಹೆಸರೇನೆಂಬುದೂ ನೆನಪಿರಲಿಲ್ಲ. ಎಷ್ಟು ಯೋಚನೆ ಮಾಡಿದರೂ ಹೆಸರು ನೆನಪಾಗುತ್ತಿರಲಿಲ್ಲವಂತೆ. ಒಂದು ದಿನ ಇದ್ದಕ್ಕಿದ್ದಂತೆ ಆಕೆಯ ತೂಕದಲ್ಲೂ ೧೦ ಕೆಜಿ ಏರಿಕೆಯಾಗಿದ್ದು, ಇದು ಆಕೆಯನ್ನು ದಂಗುಬಡಿಸಿತ್ತು. ಯಾಕೆಂದರೆ ತೀರಾ ಸುಸ್ತು, ನಿಶಕ್ತಿ ಇದ್ದರೂ ಇದ್ದಕ್ಕಿದ್ದಂತೆ ತೂಕದಲ್ಲಿ ಗಣನೀಯ ಏರಿಕೆ ಯಾಕೆ ಎಂಬುದೂ ಆಕೆಗೆ ಆಶ್ಚರ್ಯ ತರಿಸಿತ್ತು. ಅಂಗಡಿಗೆ ಪ್ರತಿನಿತ್ಯ ಸಾಮಾನು ತರಲು ಹೋದರೆ, ತನ್ನ ದ್ವಿಚಕ್ರ ವಾಹನ ಎಲ್ಲಿ ಪಾರ್ಕ್‌ ಮಾಡಿದ್ದೇನೆಂದು ನೆನಪಾಗುತ್ತಿರಲಿಲ್ಲವಂತೆ. ಕೆಲವು ತಿಂಗಳುಗಳ ಕಾಲ ಮೆದುಳು ನಿಶ್ಕ್ರಿಯವಾದಂತೆ, ಎಲ್ಲವೂ ಮರೆತು ಹೋಗುತ್ತಿರುವಂತೆ ಆಕೆಗೆ ಅನಿಸತೊಡಗಿತ್ತು. ಎಷ್ಟು ಮರೆವಿತ್ತೆಂದರೆ, ಆಕೆ ಹೇಳುವಂತೆ, ತನ್ನ ಅಂಗಿಯನ್ನು ಹೇಗೆ ಹಾಕಿಕೊಳ್ಳಬೇಕೆಂದೂ ಗೊತ್ತಾಗುತ್ತಿರಲಿಲ್ಲವಂತೆ. ಡ್ರೆಸ್‌ ಕೈಯಲ್ಲಿ ಹಿಡಿದು ಹೇಗೆ, ಎಲ್ಲಿಂದ ಹಾಕಲಿ ಎಂದು ತಿರುಗಿಸಿ ತಿರುಗಿಸಿ ನೋಡುತ್ತಿದ್ದೆ ಎಂದು ಆಕೆ ತನಗಾದ ಕಷ್ಟವನ್ನು ವಿವರಿಸಿದ್ದಾರೆ.

ಆಮಿ ಸ್ವತಃ ಪ್ರಕೃತಿ ಚಿಕಿತ್ಸಕಿ ಹಾಗೂ ಪೋಷಕಾಂಶ ತಜ್ಞೆಯಾಗಿದ್ದು, ತಾನು ಆರೋಗ್ಯವಾಗಿದ್ದರೂ ಇದೇಕೆ ಹೀಗೆ ಅತಿಯಾದ ಮರೆವು ಬಾಧಿಸುತ್ತಿದೆ ಎಂದು ಕಳವಳಕ್ಕೊಳಗಾದಾಗ ಆಕೆ ನರರೋಗ ತಜ್ಞರನ್ನು ಭೇಟಿಯಾಗಿ ತನ್ನ ಸಮಸ್ಯೆಯನ್ನು ವಿವರಿಸಿದ್ದಾಳೆ. ಆಗ ಆಕೆಗೆ ೩೭ರ ಹರೆಯ. ಸಾಮಾನ್ಯವಾಗಿ ಅಲ್ಜೈಮರ್‌ (ಮರೆವಿನ ಕಾಯಿಲೆ) ಸಣ್ಣವಯಸ್ಸಿನಲ್ಲಿ ಬಾಧಿಸುವುದಿಲ್ಲವೆಂಬುದು ಎಲ್ಲರ ನಂಬಿಕೆ. ಆದರೆ, ಈಕೆಗೆ ವೈದ್ಯರು ನೀಡಿದ ವರದಿ ಶಾಕ್‌ ತಂದಿತ್ತು. ಈಕೆ ಟೈಪ್‌ ೩ ಅಲ್ಜೈಮರ್‌ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂಬ ವರದಿ ಅಲ್ಲಿತ್ತು. ಅದರ ಪ್ರಕಾರ ಈಕೆಗಿರುವ ಅಲ್ಜೈಮರ್ ಕಾಯಿಲೆಯ ಹೆಸರು ಇನ್‌ಹೇಲೇಶನಲ್‌ ಅಲ್ಜೈಮರ್!‌

ಈಕೆಯ ಬೇರೆಲ್ಲಾ ಆರೋಗ್ಯ ವರದಿಗಳು ಸರಿಯಾಗಿಯೇ ಇದ್ದವು. ಇದು ಆಕೆಗೆ ಇನ್ನಷ್ಟು ಆಶ್ಚರ್ಯ ತರಿಸಿತ್ತು. ಆರಂಭದಲ್ಲಿ ವೈದ್ಯರು ಈಕೆಗೆ ಇರುವುದು ಖ್ರೋನಿಕ್‌ ಫಟೀಗ್‌ ಸಿಂಡ್ರೋಮ್‌ ಎಂದು ಹೇಳಿದರೂ ಕೊನೆಗೆ ಅದಲ್ಲ ಎಂಬುದು ಗೊತ್ತಾಗಿದೆ. ಆದರೂ ಇದಕ್ಕೆ ಕಾರಣವೇನಿರಬಹುದು ಎಂಬುದನ್ನು ವಿವರಿಸಲು ಬಹಳಷ್ಟು ಸಾರಿ ವೈದ್ಯಲೋಕ ವಿಫಲವಾಗುತ್ತದೆ, ಹಾಗೂ ಈ ಬಗ್ಗೆ ಇನ್ನೂ ಸಾಕಷ್ಟು ಅರಿವಿಲ್ಲ ಎನ್ನುತ್ತಾಳೆ. ಜೊತೆಗೆ ತಾನು ಇದಕ್ಕೆ ಕಾರಣ ಕಂಡುಹಿಡಿದ ರೀತಿಯನ್ನೂ ಆಕೆ ವಿವರಿಸಿದ್ದಾಳೆ!

ಇದನ್ನೂ ಓದಿ: Marriage Invitation | ಫಾರ್ಮಾಸಿಸ್ಟ್- ನರ್ಸ್ ಜೋಡಿಯ ವೆಡ್ಡಿಂಗ್ ಇನ್ವಿಟೇಷನ್‌ ಕಾರ್ಡ್ ವೈರಲ್‌

ತನ್ನ ಗೆಳತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ತನ್ನ ಗಂಡನಿಗೆ ಆದ ಮೌಲ್ಡ್‌ ಜೀನ್‌ ತೊಂದರೆಯ ಬಗೆಗೆ ಮಾಡಿದ ಪೋಸ್ಟ್‌ ಓದಿದ ಆಮಿ, ಹೀಗೂ ಉಂಟೇ ಎಂದು ದಂಗಾಗಿದ್ದಾಳೆ. ಆ ಪೋಸ್ಟ್‌ ಪ್ರಕಾರ, ಆಕೆಯ ಗೆಳತಿಯ ಪತಿಗೆ ಆಗಾಗ ಎದುರಿಸಿದ ಅತೀವ ಆರೋಗ್ಯ ತೊಂದರೆಗೆ ಮೂಲ ಕಾರಣ ಅವರ ಮನೆಯಲ್ಲಿ, ಗಾರ್ಬೆಜ್‌ ಬಿನ್‌ ಅಡಿಯ ಫ್ಲೋರಿನಲ್ಲಿ ಸೋರುತ್ತಿದ್ದ ನೀರಿನಿಂದಲೇ ಎಂಬ ವಿವರ ಅಲ್ಲಿತ್ತು. ತನಗೂ ಇದೇ ಕಾರಣ ಯಾಕಾಗಿರಬಾರದು ಎಂದು ಬೆನ್ನು ಹತ್ತಿದ ಆಮಿ, ಬಿಲ್ಡಿಂಗ್‌ ಬಯಾಲಜಿಸ್ಟ್‌ ಅವರನ್ನು ಕರೆಸಿಕೊಂಡು ತನ್ನ ಮನೆಯ ಫ್ಲೋರ್‌ ಪರೀಕ್ಷೆ ನಡೆಸುತ್ತಾಳೆ. ಆಶ್ಚರ್ಯವೆಂದರೆ ಆಕೆಯ ಮನೆಯ ಫ್ಲೋರ್‌ ಕಾರ್ಪೆಟ್‌ ಅಡಿಯಲ್ಲಿ ಭಾರೀ ನೀರಿನ ಸೋರುವಿಕೆ ಇದೆ ಎಂದು ಗೊತ್ತಾಗಿದ್ದಲ್ಲದೆ, ನಿರಂತರ ಸೋರಿಕೆಯಿಂದಾಗಿ, ಇಡೀ ಕಾರ್ಪೆಟ್‌ನ ಅಡಿಯ ಭಾಗ ಎತ್ತಿಸಿ ನೋಡಿದಾಗ ಅದು ಪಾಚಿಗಟ್ಟಿದ್ದೂ ಕಂಡುಬರುತ್ತದೆ. ವಿಶೇಷವೆಂದರೆ, ಆಮಿ ಹಾಗೂ ಆಕೆಯ ಪತಿ ಕೆಲ ತಿಂಗಳುಗಳ ಹಿಂದಷ್ಟೇ ಆ ಅಪಾರ್ಟ್‌ಮೆಂಟ್‌ಗೆ ಶಿಫ್ಟ್‌ ಆಗಿದ್ದರು.

ನೀರಿನ ಸೋರುವಿಕೆ ಬಗ್ಗೆ ತಮ್ಮ ಅಪಾರ್ಟ್‌ಮೆಂಟಿನ ರಿಯಲ್‌ ಎಸ್ಟೇಟ್‌ ಕಂಪನಿಗೆ ಹೇಳಿದಾಗ, ಅವರು, ಅಲ್ಲಿ ಸೋರುವಿಕೆ ಇದ್ದಿದ್ದು ತಮಗೆ ಮೊದಲೇ ಗೊತ್ತಿತು. ಹಾಗೂ ಈ ಬಗ್ಗೆ ಅಪಾರ್ಟ್‌ಮೆಂಟ್‌ ಒಡೆಯನ ಬಳಿ ಮಾತುಕತೆಗಳೂ ನಡೆದಿತ್ತು ಎಂಬುದಾಗಿ ಉತ್ತರ ಸಿಕ್ಕಿದೆ.

ಆಕೆ ಪತ್ತೆಹಚ್ಚಿದ ಸೋರುವಿಕೆಯ ಜಾಗದಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದಾಗ, ಅದರಲ್ಲಿ, ಆಕೆಯ ಈ ತೊಂದರೆಗೆ ಮೂಲ ಕಾರಣವಾದ ವಿಷಕಾರಿ ಮೌಲ್ಡ್‌ ಜೀನ್‌ ಪತ್ತೆಯಾಗಿದ್ದು. ಆಮಿ, ಕೆಲಕಾಲದ ನಂತರ ಆ ಮನೆಯನ್ನು ಬದಲಾಯಿಸಿದ್ದಾರೆ ಹಾಗೂ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ. ಕೊನೆಗೂ ಆಮಿ ತನ್ನ ಕಾಯಿಲೆಯಿಂದ ಈಗ ಪೂರ್ಣ ಗುಣಮುಖಳಾಗಿದ್ದು, ಈಗ ಆಕೆಗೆ ೪೨ರ ವಯಸ್ಸು.

ಆಮಿ ಇಲ್ಲಿಗೇ ವಿಷಯ ಕೈಬಿಟ್ಟಿಲ್ಲ. ತನಗಾದ ತೊಂದರೆ ಬೇರೆಯವರಿಗೆ ಆಗಬಾರದು ಎಂಬ ಕಾರಣ ಈಕೆ ಅಪರೂಪವಾದ ಈ ಮೌಲ್ಡ್‌ ಟೆಸ್ಟಿಂಗ್‌ನಲ್ಲಿ ತರಬೇತಿ ಪಡೆದಿದ್ದು, ಬೇರೆಯವರಿಗೆ ಈ ಬಗೆಗೆ ಜ್ಞಾನ ಹಂಚುವಲ್ಲಿ ನೆರವಾಗುತ್ತಿದ್ದಾಳಂತೆ!

ಇದನ್ನೂ ಓದಿ: Happy married life | ಸುಖೀ ಸಂಸಾರದ ಸೀಕ್ರೆಟ್‌ ಅಂದ್ರೆ ಪ್ರತ್ಯೇಕ ಬೆಡ್‌ರೂಂ!

Exit mobile version