Site icon Vistara News

Viral Video | ಅದ್ಯಾಕೆ ಈ ಚಿರತೆ ನೆಲಕ್ಕೆ ಹಾರದೇ ತೆಂಗಿನ ಮರದ ಮೇಲೆ ಇಷ್ಟು ವೇಗವಾಗಿ ಓಡಿತು?!

Leopard

ಚಿರತೆಗಳು ಮರ ಹತ್ತಬಲ್ಲವು. ರೆಂಬೆ-ಕೊಂಬೆಗಳಿರುವ ಅತ್ಯಂತ ಎತ್ತರದ ಮರವನ್ನೂ ಚಿರತೆಗಳು ಸರಸರನೆ ಸೆಕೆಂಡ್​​ಲ್ಲಿ ಹತ್ತುವುದನ್ನು ನೋಡಿದ್ದೇವೆ. ಮಂಗಗಳು, ಗೂಬೆಗಳಂಥ ಮರದ ಮೇಲೆ ಇರುವ ಪ್ರಾಣಿಗಳನ್ನು ಬೇಟೆಯಾಡಲಷ್ಟೇ ಅಲ್ಲ, ಸುಮ್ಮನೆ ಆಟಕ್ಕಾಗಿಯೂ ಇವುಗಳು ಮರ ಏರುತ್ತವೆ. ಅದೇನೇ ಇರಲಿ, ಈಗ ಎರಡು ಚಿರತೆಗಳು ತೆಂಗಿನ ಮರವನ್ನು ಹತ್ತಿರುವ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದ ನಾಶಿಕ್​​ನಲ್ಲಿರುವ ಸಿನ್ನಾರ್ ತಾಲೂಕಿನ ಸಾಂಗ್ವಿ ಎಂಬ ಹಳ್ಳಿಯ ಹೊಲವೊಂದರಲ್ಲಿ ಚಿತ್ರೀಕರಿಸಲಾದ ವಿಡಿಯೋ ಇದಾಗಿದ್ದು ‘ಮೊದಲು ಒಂದು ಚಿರತೆ ತೆಂಗಿನ ಮರದಿಂದ ಕೆಳಗೆ ಇಳಿಯುತ್ತದೆ. ನಿಧಾನವಾಗಿ, ತಾನು ಬೀಳದಂತೆ ಎಚ್ಚರ ವಹಿಸುತ್ತ ಕೆಳಕ್ಕೆ ಬರುತ್ತಿರುತ್ತದೆ. ಹೀಗೆ ಬಹುತೇಕವಾಗಿ ಮರದ ಬುಡದವರೆಗೆ ಬಂದು, ಇನ್ನೇನು ನೆಲಕ್ಕೆ ಜಿಗಿಯಬೇಕು ಅಷ್ಟರಲ್ಲಿ ಮತ್ತೆ ಸರಸರನೇ ಮರದ ಮೇಲ್ಭಾಗಕ್ಕೆ ಓಡಿ ಹೋಗುತ್ತದೆ. ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಆ ಚಿರತೆ ಮತ್ತೆ ಮರದ ತುದಿ ತಲುಪಿರುತ್ತದೆ. ಹೀಗೆ ಮರದ ಬುಡದವರೆಗೆ ಬಂದು ನೆಲಕ್ಕೆ ಹಾರದೆ ಅದು ಮತ್ಯಾಕೆ ಮೇಲೇರಿತು ಅಂದರೆ, ಅಲ್ಲಿ ಇನ್ನೊಂದು ಚಿರತೆ ಇದರ ಬೆನ್ನಟ್ಟಿದೆ. ಒಟ್ಟು ಎರಡು ಚಿರತೆಗಳು ಮರದ ತುದಿಗೆ ಹೋಗಿ ದಾಂಧಲೆ ಸೃಷ್ಟಿಸಿವೆ. ಅಲ್ಲಿ ನಡೆದ ಕಾದಾಟದಲ್ಲಿ ಮರದಿಂದ ಗರಿಗಳೂ ಉದುರಿಬಿದ್ದಿವೆ. ನಂತರ ಅವುಗಳಲ್ಲಿ ಒಂದು ಚಿರತೆ ಕೆಳಗೆ ಇಳಿಯುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಚಿರತೆಗಳು ಆಟವಾಡುತ್ತಿದ್ದವು ಎಂಬುದು ಗೊತ್ತಾಗುತ್ತದೆ.’

ಇದೇ ವಿಡಿಯೋವನ್ನು ಇನ್ನೊಬ್ಬ ಐಎಫ್​ಎಸ್​ ಅಧಿಕಾರಿ ಪರ್ವೀನ್​ ಕಾಸ್ವಾನ್​ ಕೂಡ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಮಹಾರಾಷ್ಟ್ರದಿಂದ ಒಬ್ಬರು ವಾಟ್ಸ್​ಆ್ಯಪ್​​ನಲ್ಲಿ ಕಳಿಸಿದ್ದಾರೆ. ಅಂದರೆ ಚಿರತೆಗಳು ಭಾರತದಲ್ಲಿ ಎಲ್ಲೆಡೆ ಇವೆ ಎಂದಾಯಿತು ಎಂದು ಅವರು ಕ್ಯಾಪ್ಷನ್ ಬರೆದಿದ್ದಾರೆ. ಚಿರತೆಗಳು ಮರ ಹತ್ತುವ ರೀತಿ ನೋಡಿ ನೆಟ್ಟಿಗರು ಸಿಕ್ಕಾಪಟೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಈ ಚಿರತೆಗಳ ಕಾಲಿನಲ್ಲಿ ಅದೆಂಥಾ ಶಕ್ತಿ ಇರಬಹುದು’ ಎಂದು ಒಬ್ಬರು ಹೇಳಿದ್ದರೆ, ‘ನಿಜಕ್ಕೂ ಈ ಚಿರತೆಗಳು ಮರ ಹತ್ತುವಲ್ಲಿ ವಿಶ್ವ ದಾಖಲೆ ನಿರ್ಮಿಸಿದವು’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Belagavi : ಚಿರತೆ ಬಂತು ಚಿರತೆ.. ಗ್ರಾಮಸ್ಥರು ಜಾಗರಣೆ 

Exit mobile version