ಉತ್ತರ ಪ್ರದೇಶದ ಘಾಜಿಯಾಬಾದ್ ನ್ಯಾಯಾಲಯದ ಆವರಣಕ್ಕೆ ಚಿರತೆಯೊಂದು ನುಗ್ಗಿ ಅವಾಂತರ (Leopard enters to Ghaziabad Court) ಸೃಷ್ಟಿಸಿತ್ತು. ಘಾಜಿಯಾಬಾದ್ ಕೋರ್ಟ್ನ ಮೊದಲ ಅಂತಸ್ತಿಗೆ ಈ ಚಿರತೆ ಬಂದಿದೆ. ಅದನ್ನು ನೋಡಿ ಅಲ್ಲಿದ್ದ ವಕೀಲರು, ಇತರ ಸಿಬ್ಬಂದಿ ಎಲ್ಲರೂ ಗಾಬರಿಯಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಚಿರತೆ ಮೂವರ ಮೇಲೆ ದಾಳಿ ಮಾಡಿ ಗಾಯಗೊಳಿದೆ. ಮತ್ತೆ ಓಡುವಾಗ ಬಿದ್ದು ಸುಮಾರು 13-14 ಮಂದಿ ಗಾಯಗೊಂಡಿದ್ದಾರೆ.
ಚಿರತೆ ಬಂದಿದ್ದೆಲ್ಲಿಂದ ಗೊತ್ತಿಲ್ಲ. ಹೀಗೆ ಮೊದಲ ಫ್ಲೋರ್ಗೆ ಬಂದ ಕಾಡುಪ್ರಾಣಿಯನ್ನು ನೋಡಿ ಜನರು ಆತಂಕದಿಂದ ಓಡಲು ಶುರು ಮಾಡಿದರು. ವಕೀಲರು ಕೋಣೆಯೊಂದಕ್ಕೆ ನುಗ್ಗಿ, ಬಾಗಿಲು ಹಾಕಿಕೊಂಡಿದ್ದಾರೆ. ಹೀಗೆ ಜನರು ಓಡುವುದನ್ನು ನೋಡಿದ ಚಿರತೆ ಮತ್ತಷ್ಟು ಆಕ್ರಮಣಕಾರಿಯಾಗಿ ಮುನ್ನುಗ್ಗಿದೆ. ಕೋರ್ಟ್ ಮುಂಭಾಗ ಆವರಣದಲ್ಲಿ ಚಪ್ಪಲಿ ರಿಪೇರಿ ಮಾಡುತ್ತಿದ್ದವನನ್ನು ಮತ್ತು ಪೊಲೀಸ್ ಅಧಿಕಾರಿಯೊಬ್ಬರನ್ನು ಮತ್ತು ದೊಡ್ಡ ಕೋಲು ತೆಗೆದುಕೊಂಡು ಹೋಗಿ ಹೊಡೆಯಲು ಮುಂದಾದ ಲಾಯರ್ ಒಬ್ಬರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ. ಹಾಗಂತ ಈ ಮೂವರಲ್ಲಿ ಯಾರಿಗೂ ಗಂಭೀರ ಗಾಯವಾಗಿಲ್ಲ. ಕೋರ್ಟ್ ಬಳಿಯೇ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು ವಾಸವಾಗಿದ್ದು, ಇದನ್ನೊಂದು ಐಷಾರಾಮಿ ಪ್ರದೇಶವೆಂದು ಪರಿಗಣಿಸಲಾಗಿದೆ. ಇಲ್ಲಿ ಚಿರತೆ ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಸಿದೆ.