ಭಾರತೀಯ ಅರಣ್ಯ ಸೇವಾಧಿಕಾರಿ ಸುಸಾಂತಾ ನಂದಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅರಣ್ಯದ ಅಚ್ಚರಿಗಳನ್ನು ಹಂಚಿಕೊಂಡು, ನಮ್ಮ ಹುಬ್ಬೇರುವಂತೆ ಮಾಡುತ್ತಾರೆ. ಯಾವುದೋ ಪ್ರಾಣಿ, ಪಕ್ಷಿಗಳ ದಿನಚರಿ, ವಿಶೇಷತೆಯನ್ನು ಪರಿಚಯ ಮಾಡಿಸುತ್ತಾರೆ. ಈಗವರು ಚಿರತೆಯೊಂದು ಮೈಮುರಿಯುವ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅಚ್ಚರಿಯೇನು? ಎನ್ನಬೇಡಿ. ಈ ಚಿರತೆ ಮೈಮುರಿಯುವ ಪರಿ ಥೇಟ್ ಸೂರ್ಯನಮಸ್ಕಾರದ ಆಸನವನ್ನೇ ಹೋಲುತ್ತಿದೆ ನೋಡಿ..!
ಯೋಗಾಸನ ಮಾಡುವವರಿಗೆ ಈ ಸೂರ್ಯ ನಮಸ್ಕಾರ ಎಂದರೇನು? ಅದನ್ನು ಹೇಗೆ ಮಾಡುತ್ತಾರೆ ಎಂಬುದು ಗೊತ್ತೇ ಇದೆ? ಯೋಗಾಸನದ ಅತ್ಯಂತ ಪ್ರಮುಖ ಆಸನಗಳಲ್ಲಿ ಒಂದು ಇದು ಮತ್ತು ಅನೇಕರು ಇದನ್ನು ಪ್ರತಿದಿನ ಚಾಚೂತಪ್ಪದೆ ಮಾಡುತ್ತಾರೆ. ಇದೀಗ ಚಿರತೆಯೂ ಕೂಡ ಸೂರ್ಯನಮಸ್ಕಾರ ಮಾಡಿದ ರೀತಿಯಲ್ಲೇ ತನ್ನ ಮೈಮುರಿದಿದೆ. ಸಾಮಾನ್ಯವಾಗಿ ಪ್ರಾಣಿಗಳು ದೀರ್ಘ ನಿದ್ದೆಯಿಂದ ಎದ್ದತಕ್ಷಣ ಫ್ರೆಶ್ ಆಗಲು ತಮ್ಮ ಕಾಲು, ಮೈಯನ್ನು ಸಡಿಲ ಮಾಡಿಕೊಳ್ಳುತ್ತವೆ. ಮನುಷ್ಯರು ಮೈಮುರಿದಂತೆ ಅವೂ ಮಾಡುತ್ತವೆ. ಹಾಗೇ, ಈ ಚಿರತೆ ನಿದ್ದೆಯಿಂದ ಎದ್ದು ಮೊದಲು ಮುಂದಿನ ಎಡಗಾಲನ್ನು ಚಾಚಿ, ಬಳಿಕ ಸರಿಯಾಗಿ ಎದ್ದು ನಿಂತು ಬೆನ್ನನ್ನು ಎತ್ತಿರಿಸಿ ಬಾಗಿಸಿದೆ. ಬಳಿಕ ಮುಂದಿನ ಎರಡೂ ಕಾಲನ್ನು ಮುಂದಕ್ಕೆ ಚಾಚಿತು. ಅದಾದ ಮೇಲೆ ಹಿಂದಿನ ಕಾಲುಗಳನ್ನೂ ಎಳೆದಂತೆ ಮಾಡಿ, ಸರಿಯಾಗಿ ನಿಂತುಕೊಂಡಿದೆ. ಈ ಚಿರತೆ ಹೀಗೆಲ್ಲ ಮಾಡಿದ್ದನ್ನು ನೋಡಿದರೆ, ಅದು ಸೂರ್ಯ ನಮಸ್ಕಾರ ಮಾಡುತ್ತಿರುವಂತೆಯೇ ತೋರುತ್ತದೆ. ವಿಡಿಯೊ ಶೇರ್ ಮಾಡಿಕೊಂಡ ಸುಸಾಂತಾ ನಂದಾ ಅವರು ‘ಚಿರತೆಯ ಸೂರ್ಯ ನಮಸ್ಕಾರ’ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಇದನ್ನೂ ಓದಿ: Viral Video : ತಾಯಿಯನ್ನು ತಬ್ಬಿ ಹಿಡಿದ ನವಜಾತ ಶಿಶು; ಮುದ್ದಾಗಿದೆ ನೋಡಿ ಈ ವಿಡಿಯೊ
ವಿಡಿಯೊವನ್ನು ಐಎಫ್ಎಸ್ ನಿರ್ದೇಶಕ ಸಾಕೇತ್ ಬಾಡೋಲಾ ಅವರು ಮೊದಲು ವಿಡಿಯೊ ಶೇರ್ ಮಾಡಿಕೊಂಡಿದ್ದರು. ಅದನ್ನು ಸುಸಾಂತಾ ನಂದಾ ರೀಶೇರ್ ಮಾಡಿಕೊಂಡಿದ್ದಾರೆ. ನೆಟ್ಟಿಗರು ಅನೇಕರು ವಿಡಿಯೊ ಮೆಚ್ಚಿಕೊಂಡಿದ್ದಾರೆ. ಅಂದಹಾಗೇ, ವಿಡಿಯೊವನ್ನು ರಷ್ಯಾದ ಫಾರ್ ಈಸ್ಟ್ನಲ್ಲಿರುವ ಲೆಪರ್ಡ್ ನ್ಯಾಶನಲ್ ಪಾರ್ಕ್ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಹಲವು ಕಮೆಂಟ್ ಮಾಡಿದ್ದಾರೆ. ಇದು ಫಿಟ್ನೆಸ್ ಫ್ರೀಕ್ ಚಿರತೆ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು ‘ಪ್ರಾಣಿಗಳಿಗೆ ಇದೆಲ್ಲ ಪ್ರಕೃತಿ ಸಹಜವಾಗಿಯೇ ಬಂದಿರುತ್ತದೆ’ ಎಂದು ಹೇಳಿದ್ದಾರೆ.