ಒಬ್ಬರು ಟೀಚರ್ ಮತ್ತು ಪುಟ್ಟ ಬಾಲಕನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಹರಿದಾಡುತ್ತಿದೆ. ‘ಆ ಟೀಚರಮ್ಮನ ಹುಸಿಕೋಪ, ಅದನ್ನು ತಣಿಸಲು ಪಾಪಚ್ಚಿ ಬಾಲಕ ಮಾಡುವ ಹರಸಾಹಸ’ ನೋಡಿದಷ್ಟೂ ನೋಡಬೇಕು ಅನ್ನಿಸೋದು ಸುಳ್ಳಲ್ಲ. ಪುಟ್ಟ ಮಕ್ಕಳ ಯಾವುದೇ ವಿಡಿಯೋನೂ ಖುಷಿ ಕೊಡತ್ತೆ. ಅವರ ಆಟ-ತುಂಟಾಟ-ಡಾನ್ಸ್-ಹಾಡು ಹೀಗೆ ತರಹೇವಾರಿ ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುತ್ತೇವೆ. ಅಂಥ ಒಂದು ಕ್ಯೂಟ್ ವಿಡಿಯೋಗಳಲ್ಲಿ ಒಂದು ಇದು..!
‘ಒಬ್ಬರು ಟೀಚರ್ ಕುರ್ಚಿಯ ಮೇಲೆ ಕುಳಿತಿದ್ದಾರೆ. ಪುಟ್ಟ ಹುಡುಗ ಅವರೆದುರು ನಿಂತಿದ್ದಾನೆ. ‘ನೀನು ಪ್ರತಿ ಸಲ ಇನ್ನು ಮಾಡೋದಿಲ್ಲ, ಮಾಡೋದಿಲ್ಲ ಅಂತೀಯ, ಆದ್ರೆ ಮತ್ತದೇ ತಪ್ಪನ್ನು ಮಾಡ್ತೀಯಾ. ನಾನು ನಿನ್ನ ಬಳಿ ಮಾತಾಡೋದಿಲ್ಲ’ ಎನ್ನುತ್ತ ಆ ಟೀಚರ್ ತನಗೆ ಬಾಲಕನ ವರ್ತನೆಯಿಂದ ನೋವಾದಂತೆ ನಟಿಸುತ್ತಾರೆ. ಅದಕ್ಕೆ ಪುಟಾಣಿ ‘ಇಲ್ಲ ಇನ್ನೆಂದೂ ಮಾಡೋದಿಲ್ಲ ಮ್ಯಾಮ್’ ಎಂದು ಟೀಚರ್ ಬಳಿ ಅಳುವ ಧ್ವನಿಯಲ್ಲಿ ಕ್ಷಮೆ ಕೇಳುತ್ತಾನೆ. ಆದರೆ ಶಿಕ್ಷಕಿಯ ಕೋಪ ತಣ್ಣಗಾಗದೆ ಇದ್ದಾಗ ಆಕೆಯ ಹೆಗಲ ಮೇಲೆ ತನ್ನೆರಡೂ ಕೈಯಿಟ್ಟು, ಕೆನ್ನೆಗೆ ಗಟ್ಟಿಯಾಗಿ ಮುತ್ತಿಕ್ಕುತ್ತಾನೆ. ಒಂದು ನಿಮಿಷಕ್ಕೂ ಹೆಚ್ಚು ಕಾಲ ಟೀಚರ್ ಮತ್ತು ಬಾಲಕನ ನಡುವೆ ಇದೇ ಮಾತುಕತೆ ನಡೆಯುತ್ತದೆ. ಅದರಲ್ಲಿ ಟೀಚರ್ ಕೋಪವೂ ಅಷ್ಟೇ ಸೊಗಸಾಗಿದ್ದರೆ, ಬಾಲಕ ಕ್ಷಮೆ ಕೇಳುವ ಪರಿಯಂತೂ ನೆಟ್ಟಿಗರ ಹೃದಯ ತಟ್ಟಿದೆ. ಶಿಕ್ಷಕಿ ಮತ್ತು ಬಾಲಕನ ನಡುವಿನ ಬಾಂಧವ್ಯ ಬಹುವಾಗಿ ಮೆಚ್ಚಿಕೊಳ್ಳುವಂತಿದೆ. ಕೊನೆಗೂ ಬಾಲಕನ ಮುದ್ದಾಟಕ್ಕೆ ಶಿಕ್ಷಕಿಯೇ ಸೋತಿದ್ದಾರೆ. ಆತನಿಂದ ಪ್ರಾಮಿಸ್ ತೆಗೆದುಕೊಂಡು, ಎರಡೂ ಕೆನ್ನೆಗೆ ಹೆಚ್ಚುವರಿಯಾಗಿ ಮುತ್ತು ಪಡೆದು, ಅವನಿಗೂ ಒಂದು ಕಿಸ್ ಕೊಟ್ಟು, ಟೀಚರ್ ಆತನನ್ನು ಕ್ಷಮಿಸಿದ್ದಾರೆ..
ಹೀಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇವರ ಹೆಸರು ವಿಶಾಖಾ ತ್ರಿಪಾಠಿ ಎಂದಾಗಿದ್ದು, ಉತ್ತರ ಪ್ರದೇಶದ ನೈನಿ ಎಂಬಲ್ಲಿರುವ ಸೇಠ್ ಆನಂದರಾಮ್ ಜೈಪುರಿಯಾ ಶಾಲೆಯ ಶಿಕ್ಷಕಿ. ಆ ಬಾಲಕನ ಹೆಸರು ಅಥರ್ವ. ಶಾಲೆಯಲ್ಲಿ ಮಕ್ಕಳಿಗಾಗಿ ಒಂದಷ್ಟು ವಿಶೇಷ ಪಠ್ಯ ಚಟುವಟಿಕೆ ನಡೆಸುತ್ತಿದ್ದಾಗ ವಿದ್ಯಾರ್ಥಿಗಳು ತುಂಬ ಗಲಾಟೆ ಮಾಡುತ್ತಿದ್ದರಂತೆ. ಅದರಲ್ಲಿ ಈ ಅಥರ್ವ ಹೆಚ್ಚೆನ್ನುವಷ್ಟು ತುಂಟನಾಗಿದ್ದು, ಗಲಾಟೆಯಲ್ಲಿ ಸದಾ ಮುಂದೆ ಇರುತ್ತಾನಂತೆ. ಅಂದು ಕೂಡ ಶಾಲೆಯಲ್ಲಿ ಅಥರ್ವ ತುಂಟಾಟ ಮಾಡುತ್ತಿದ್ದಾಗ ಹೀಗೆ ವಿಶಾಖಾ ಅವನನ್ನು ಹೆದರಿಸಿದ್ದಾರೆ. ಹೊಡೆದು-ಬೈದು ಮಾಡದೆ ‘ನಿನ್ನ ವರ್ತನೆಯಿಂದ ನನಗೆ ನೋವಾಗಿದೆ’ ಎಂದು ಹೇಳುವ ಮೂಲಕ, ತುಂಬ ಭಾವನಾತ್ಮಕವಾಗಿಯೇ ಅವನನ್ನು ಹ್ಯಾಂಡಲ್ ಮಾಡಿದ್ದಾರೆ. ಇದೇ ವೇಳೆ ವಿಶಾಖಾ ಅವರ ಸಹೋದ್ಯೋಗಿ, ಇನ್ನೊಬ್ಬ ಶಿಕ್ಷಕಿ ನಿಶಾ ಎಂಬುವರು ವಿಡಿಯೋ ಮಾಡಿಕೊಂಡಿದ್ದಾರೆ.
‘ನಾವು ಮಕ್ಕಳಿಗೆ ಮಾಡಿಸುವ ವಿಶೇಷ ಚಟುವಟಿಕೆಗಳನ್ನು ವಿಡಿಯೋ ಮಾಡಿಕೊಂಡು ಅವರ ಪಾಲಕರಿಗೆ ಕಳಿಸಬೇಕಾಗುತ್ತದೆ. ಆದರೆ ಅಥರ್ವನೊಟ್ಟಿಗೆ ನಾನು ಹೀಗೆ ಮಾತಾಡುತ್ತಿದ್ದ ವಿಡಿಯೋವನ್ನೂ ನನ್ನ ಸಹೋದ್ಯೋಗಿ ರೆಕಾರ್ಡ್ ಮಾಡಿದ್ದು ಗೊತ್ತಿರಲಿಲ್ಲ. ಆಮೇಲೆ ಅದನ್ನು ನೋಡಿದ ಮೇಲೆ ತುಂಬ ಖುಷಿಯಾಯಿತು. ನನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡೆ. ಆದರೆ ಅದು ಈ ಮಟ್ಟಿಗೆ ವೈರಲ್ ಆಗುತ್ತದೆ ಎಂದುಕೊಂಡಿರಲಿಲ್ಲ’ ಎಂದು ಶಿಕ್ಷಕಿ ವಿಶಾಖಾ ಹೇಳಿದ್ದಾರೆ . ಅದೇನೇ ಆಗಲಿ, ಈ ಶಿಕ್ಷಕಿ ಪುಟ್ಟ ಮಕ್ಕಳಿಗೆ ಶಿಸ್ತು ಕಲಿಸುವ ವಿಧಾನವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ’ಸೋ ಕ್ಯೂಟ್‘ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Viral video | ಜನಗಣಮನವನ್ನು ಹೀಗೂ ಕಲಿಸಬಹುದು ಎಂದು ತೋರಿಸಿಕೊಟ್ಟ ಶಿಕ್ಷಕ ಈಗ ಸ್ಟಾರ್!