ನೊಯ್ಡಾದ ಬೊಟಾನಿಕಲ್ ಗಾರ್ಡನ್ ಮೆಟ್ರೋ ಸ್ಟೇಶನ್ ಬಳಿ ಇರುವ ಒಂದು ‘ಬರ್ಗರ್ ಕಿಂಗ್’ ಅಂಗಡಿಗೆ ಹೋದ ಪುಟ್ಟ ಹುಡುಗಿಯೊಬ್ಬಳು ಒಂದು ಬರ್ಗರ್ ಕೊಡುವಂತೆ ಅಂಗಡಿಯವರ ಬಳಿ ಕೇಳಿದರು. ಅಂಗಿ ಮತ್ತು ಪುಟ್ಟ ಚಡ್ಡಿ ಹಾಕಿದ್ದ ಆಕೆಯ ಕಾಲಿನಲ್ಲಿ ಚಪ್ಪಲಿ ಇರಲಿಲ್ಲ. ಎಡಗೈಯಲ್ಲಿ ಇರುವ 10 ರೂಪಾಯಿ ಬಿಟ್ಟರೆ, ಅವಳಲ್ಲಿ ಬೇರೆ ಹಣ ಇರಲಿಲ್ಲ. ಆ 10 ರೂಪಾಯಿಗೇ ಬರ್ಗರ್ ಕೊಡುವಂತೆ ಕೇಳಿದ್ದಳು. ಆದರೆ ಆ ಅಂಗಡಿಯಲ್ಲಿ ಒಂದು ಬರ್ಗರ್ ಬೆಲೆ 90 ರೂಪಾಯಿ. ಪುಟ್ಟ ಬಾಲಕಿಯ ಬಳಿ ಬರ್ಗರ್ ಖರೀದಿಗೆ ಇನ್ನೂ 80 ರೂಪಾಯಿ ಕಡಿಮೆ ಬೀಳುತ್ತಿತ್ತು.
ಅಂಗಡಿಯವರು ಏನು ಮಾಡಿರಬಹುದು?..ಹೋಗಲಿ ಚಿಕ್ಕ ಮಗು ಎಂದು 10 ರೂ.ಗೇ ಬರ್ಗರ್ ಕೊಟ್ಟಿರಬಹುದಾ ಅಥವಾ ಇಷ್ಟು ಹಣಕ್ಕೆ ಬರ್ಗರ್ ಕೊಡಲು ಸಾಧ್ಯವಿಲ್ಲ ಹೋಗು ಎಂದು ಹುಡುಗಿಯನ್ನು ವಾಪಸ್ ಕಳಿಸಿರಬಹುದಾ?
ಇಲ್ಲ ಎರಡೂ ಕೆಲಸವನ್ನೂ ಅಂಗಡಿಯಾತ ಮಾಡಲಿಲ್ಲ. ಅಲ್ಲಿದ್ದವನು ಹುಡುಗಿಯ ಕೈಯಿಂದ 10 ರೂಪಾಯಿ ತೆಗೆದುಕೊಂಡು, ಉಳಿದ 80 ರೂ.ಗಳನ್ನು ತನ್ನ ಜೇಬಿನಿಂದ ತೆಗೆದು ಸೇರಿಸಿ, ಒಟ್ಟು 90 ರೂ.ನ್ನು ಅಂಗಡಿಯ ಕ್ಯಾಶಿಯರ್ ಬಳಿಯ ಡ್ರಾಯರ್ಗೆ ಹಾಕಿ, ಹುಡುಗಿಗೆ ಒಂದು ರುಚಿಯಾದ ಬರ್ಗರ್ ಕೊಟ್ಟು ಕಳಿಸಿದ್ದಾನೆ. ಈ ವಿಚಾರವನ್ನು ಆದಿತ್ಯ ಕುಮಾರ್ ಎಂಬುವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬರಿಗಾಲಿನಲ್ಲಿ ನಿಂತು, 10 ರೂಪಾಯಿ ಕೊಟ್ಟು ಬರ್ಗರ್ ಕೇಳಿದ ಹುಡುಗಿಯ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ.
ವೈಯಕ್ತಿಕವಾಗಿ ಹಣ ಹಾಕಿ ಬಾಲಕಿಯ ಆಸೆ ನೆರವೇರಿಸಿದ ಬರ್ಗರ್ ಕಿಂಗ್ ಔಟ್ಲೆಟ್ನ ಯುವಕನ ಹೆಸರು ಧೀರಜ್ ಕುಮಾರ್. ಆತ ಮಾಡಿದ ಕೆಲಸ ತಿಳಿದ ನಂತರ ಅವರನ್ನು ಬರ್ಗರ್ ಕಿಂಗ್ ಇಂಡಿಯಾದಿಂದ ಸನ್ಮಾನಿಸಲಾಗಿದೆ. ಟ್ವೀಟ್ ಮಾಡಿರುವ ಬರ್ಗರ್ ಕಿಂಗ್ ಇಂಡಿಯಾ ‘ಅಕ್ಟೋಬರ್ 16ರಂದು ವಿಶ್ವ ಆಹಾರ ದಿನ ಇತ್ತು. ಅದೇ ಸಮಯದಲ್ಲಿಯೇ ನಮ್ಮ ಸಿಬ್ಬಂದಿ ಧೀರಜ್ ಕುಮಾರ್ ತೋರಿದ ವರ್ತನೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಆ ಹುಡುಗಿ ನಮ್ಮ ಅಂಗಡಿಗೆ ಬಂದ ಒಬ್ಬಳು ವಿಶೇಷ ಅತಿಥಿ. ಆಕೆಯ ಬಳಿ ಇದ್ದಿದ್ದು ಕೇವಲ 10 ರೂಪಾಯಿ. ಆದರೆ ಧೀರಜ್ ತಮ್ಮ ಹಣದಿಂದಲೇ ಆಕೆಗೆ ಬರ್ಗರ್ ಸಿಗುವಂತೆ ಮಾಡಿ, ನಿರಾಸೆ ಆಗುವುದನ್ನು ತಪ್ಪಿಸಿದರು. ಅವರ ಈ ಕಾರ್ಯ ಬರ್ಗರ್ ಕಿಂಗ್ನ ಉತ್ತರ ವಿಭಾಗದ ಮುಖ್ಯಸ್ಥ ದೀಪಕ್ ಯಾದವ್ ಅವರಿಗೂ ಖುಷಿ ಕೊಟ್ಟಿದೆ. ಅವರೇ ಖುದ್ದಾಗಿ ಬಂದು ಧೀರಜ್ರನ್ನು ಸನ್ಮಾನಿಸಿದ್ದಾರೆ’ ಎಂದು ಬರ್ಗರ್ ಕಿಂಗ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: Viral video | ಅಮ್ಮ ಚಾಕೋಲೇಟ್ ಕದ್ದಿದ್ದಾಳೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಮೂರು ವರ್ಷದ ಪುಟಾಣಿ!