ಜೀವನವಿಡೀ ಹೋರಾಡುತ್ತಲೇ ಇರಬೇಕು. ಹಸಿವು ನೀಗಿಸಿಕೊಳ್ಳಲು, ಕಷ್ಟಗಳನ್ನು ಎದುರಿಸಲು..ಬಲಿಷ್ಠರು ಮಾಡುವ ಆಕ್ರಮಣಗಳನ್ನು ತಡೆದುಕೊಳ್ಳಲು…ಇದು ಮನುಷ್ಯರಿಗಷ್ಟೇ ಅನ್ವಯವಲ್ಲ. ಪ್ರಕೃತಿಯ ಪ್ರತಿ ಜೀವಿಯ ಬದುಕೂ ಹೀಗೇ ನಡೆಯುತ್ತಿರುತ್ತದೆ. ಪ್ರಾಣಿ ಜಗತ್ತು ಇನ್ನಷ್ಟು ವಿಸ್ಮಯ. ಅಲ್ಲಿ ಬಲಿಷ್ಠ ಪ್ರಾಣಿ ತಮಗಿಂತ ಚಿಕ್ಕಪ್ರಾಣಿಗಳನ್ನು ತಿಂದು ತಾನು ಉಳಿಯಲು ನೋಡುತ್ತದೆ. ಆ ಚಿಕ್ಕಪುಟ್ಟ ಪ್ರಾಣಿಗಳು ದೊಡ್ಡ ಪ್ರಾಣಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸದಾ ಪ್ರಯತ್ನಪಡುತ್ತಲೇ ಇರುತ್ತವೆ. ಅದ್ಯಾವುದೋ ಮೃಗದ ಬಾಯಿಗೆ ಬಿದ್ದು, ಹೊಟ್ಟೆ ಸೇರುವವರೆಗೂ ಜೀವ ಉಳಿಸಿಕೊಳ್ಳಲು ಮಿಸುಕಾಡುತ್ತಲೇ ಇರುವ ದೃಶ್ಯಗಳನ್ನೆಲ್ಲ ನಾವೂ ನೋಡಿದ್ದೇವೆ.
ಈಗ ಹಾವೊಂದು ಹಲ್ಲಿ ಮರಿಯನ್ನು ಬೇಟೆಯಾಡಿದ ಮತ್ತು ಅದನ್ನು ಕಾಪಾಡಲು ತಾಯಿ ಹಲ್ಲಿ ಪ್ರಯತ್ನಿಸಿದ ವಿಡಿಯೊ ವೈರಲ್ ಆಗುತ್ತಿದೆ. ಸರೀಸೃಪವಾದ ಹಾವು, ಮತ್ತೊಂದು ಪ್ರಬೇಧದ ಸರೀಸೃಪ ಹಲ್ಲಿ ಮರಿಯನ್ನು ತಿನ್ನಲೆಂದು ಹಿಡಿದುಕೊಂಡಿದೆ. ಅದನ್ನು ಗಟ್ಟಿಯಾಗಿ ಸುತ್ತಿಕೊಂಡಿದೆ. ಅಲ್ಲೇ ಗೋಡೆ ಮೇಲಿದ್ದ ದೊಡ್ಡದಾದ ಹಲ್ಲಿ ಆ ಹಾವಿನ ಹಿಡಿತದಿಂದ ತನ್ನ ಮರಿಯನ್ನು ಬಿಡಿಸಿಕೊಳ್ಳಲು ಪ್ರಯತ್ನ ಮಾಡುವುದನ್ನು ನೋಡಬಹುದು. ಅದು ಹಾವಿನ ತಲೆಗೆ ಕಚ್ಚುತ್ತದೆ. ಕುಕ್ಕುತ್ತದೆ. ಆದರೆ ಅದರ ಪ್ರಯತ್ನ ವಿಫಲವಾಗುತ್ತದೆ. ಮರಿಯನ್ನು ಹಾವು ಬಿಡುವುದಿಲ್ಲ.
ಈ ವಿಡಿಯೊ ನೋಡಿದರೆ ನಮಗೂ ಮನಸಿಗೆ ಕಸಿವಿಸಿ ಆಗುತ್ತದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ವಿಡಿಯೊ ಮಾಡುವ ಬದಲು ಹೋಗಿ ಆ ಹಲ್ಲಿ ಮರಿಯನ್ನು ಹಾವಿನಿಂದ ಬಿಡಿಸಬಹುದಿತ್ತಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ನಿಸರ್ಗ ಸಹಜತೆ ಇದು. ಹಾವಿನ ಹೊಟ್ಟೆ ತುಂಬಬೇಕಲ್ಲ!.’ ಎಂದಿದ್ದಾರೆ.