ಲಾಟರಿ ಗೆಲ್ಲುವುದು ಒಂದು ಅದೃಷ್ಟದ ಆಟ. ಲಾಟರಿ ಟಿಕೆಟ್ ಖರೀದಿಸುವವರಿಗೆಲ್ಲ ಹಣ ಒಲಿಯುವುದಿಲ್ಲ. ಅದೃಷ್ಟವಿದ್ದವರು ದುಡಿಮೆಯೇ ಇಲ್ಲದೆ ಕೋಟ್ಯಧಿಪತಿ, ಲಕ್ಷಾಧೀಶ್ವರರಾಗಿಬಿಡುತ್ತಾರೆ. ಹೀಗೆ ಏಕಾಏಕಿ ಹಣ ಬರುವವರು ಅದನ್ನು ಏನು ಮಾಡುವುದು ಎಂಬ ಗೊಂದಲಕ್ಕೂ ಬೀಳುತ್ತಾರೆ. ಕುಳಿತು ವಿವಿಧ ಪ್ಲ್ಯಾನ್ ಮಾಡುತ್ತಾರೆ. ದೇಣಿಗೆ-ದಾನಕ್ಕಾಗಿ ಹಣ ನೀಡುವವರೂ ಇದ್ದಾರೆ.
ಹೀಗೆ ಜರ್ಮನಿಯಲ್ಲಿ ಒಬ್ಬ ಲಾಟರಿಯಲ್ಲಿ 10 ಮಿಲಿಯನ್ ಯುರೋಗಳನ್ನು (82 ಕೋಟಿ ರೂಪಾಯಿ) ಗೆದ್ದು ಈಗ ಅರ್ಜೆಂಟ್ ಆಗಿ ಹೆಂಡತಿ ಬೇಕು ಎನ್ನುತ್ತಿದ್ದಾನೆ.. ! ಲಾಟರಿಯಲ್ಲಿ ದೊಡ್ಡ ಮೊತ್ತದ ಹಣ ಗೆದ್ದ ಕುರ್ಸಾತ್ ಯಿಲ್ಡಿರಿಮ್ ಬಳಿ ಹೋದ ಮಾಧ್ಯಮದವರು, ಹಣವನ್ನು ಏನು ಮಾಡಲು ಇಚ್ಛಿಸುತ್ತೀರಿ? ನಿಮ್ಮ ಮುಂದಿನ ಯೋಜನೆ ಏನು? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಕುರ್ಸಾತ್ ‘ನಾನೀಗ ಸಿಂಗಲ್. ನನಗೆ ಹಣ ಬಂದಿದೆ. ಹಾಗೇ ಅರ್ಜೆಂಟ್ ಆಗಿ ಬಾಳ ಸಂಗಾತಿ ಬೇಕು. ನಾನು ಪ್ರವಾಸಕ್ಕೆ ತೆರಳಬೇಕು. ಪ್ರವಾಸದಲ್ಲಿ ಆಸಕ್ತಿ ಇರುವ, ನನ್ನೊಂದಿಗೆ ಹೊಂದಿಕೊಂಡು ಬಾಳುವವಳನ್ನು ನಾನೀಗ ತುರ್ತಾಗಿ ಮದುವೆಯಾಗಬೇಕು’ ಎಂದು ಹೇಳಿದ್ದಾನೆ.
41 ವರ್ಷದ ಕುರ್ಸಾತ್ ಮದುವೆಯಾಗಲು ಎಷ್ಟು ಕಾತರರಾಗಿದ್ದಾರೆ ಎಂದರೆ, ಹುಡುಗಿ ಬೆಳ್ಳಗಾದರೂ ಇರಲಿ, ಕಪ್ಪಾಗಿಯಾದರೂ ಇರಲಿ ಅದೆಲ್ಲ ನನಗೆ ವಿಷಯವಾಗುವುದಿಲ್ಲ. ಆದರೆ ನನ್ನನ್ನು ಸಂಪೂರ್ಣವಾಗಿ ನಂಬಿ ನನ್ನೊಂದಿಗೆ ಹೊಂದಿಕೊಳ್ಳುವವಳು ಆಗಬೇಕು ಎಂದು ಹೇಳಿದ್ದಾರೆ. ಇನ್ನು ಲಾಟರಿ ಹಣ ಬರುತ್ತಿದ್ದಂತೆ ಈ ವ್ಯಕ್ತಿ ತಮ್ಮ ಕೆಲಸ ಬಿಟ್ಟಿದ್ದಾರೆ. ಈಗಾಗಲೇ ಹೊಸ ಫೆರಾರಿ ಕಾರು ಕೊಂಡು, ಪ್ರವಾಸಕ್ಕೆ ಸಿದ್ಧರಾಗಿ ನಿಂತಿದ್ದಾರೆ. ಹೆಂಡತಿಯೊಬ್ಬಳು ಸಿಕ್ಕ ಕೂಡಲೇ ಅವರು ಹೊರಡುತ್ತಾರೆ.. !
ಇದನ್ನೂ ಓದಿ: Viral News | ಗೋಡಂಬಿ ಉದ್ಯಾನದಲ್ಲಿ ಮದ್ಯ ಕುಡಿದ 24 ಆನೆಗಳು ಮಾಡಿದ್ದೇನು? ಸ್ಥಳೀಯರು ಡ್ರಮ್ ಬಡಿಯಬೇಕಾಯ್ತು !