ಬೆಂಗಳೂರು: ಇಂಟರ್ ನೆಟ್‌ನಲ್ಲಿ ಕಾಣ ಸಿಗುವ ಕೆಲವೊಂದು ವೈರಲ್ ವಿಡಿಯೊಗಳನ್ನು ನೋಡುವಾಗ ಮೈ ಜುಂ ಎನುತ್ತದೆ. ಕೆಲವರು ಅಪಾಯಕಾರಿ ಸಾಹಸ ಪ್ರದರ್ಶಿಸಿ ಗಮನ ಸೆಳೆಯುತ್ತಾರೆ. ಹೆಡೆ ಎತ್ತಿದ ನಾಗರ ಹಾವಿಗೆ ಮುತ್ತಿಕ್ಕುವುದು, ಕಣ್ಣಿಗೆ ಬಟ್ಟೆ ಕಟ್ಟಿ ವಾಹನ ಓಡಿಸುವುದು, ಹ್ಯಾಂಡಲ್ ಹಿಡಿಯದೆ ಬೈಕ್‌ನಲ್ಲಿ ಸಂಚರಿಸುವುದು ಮುಂತಾದ ಸಾಹಸ ಪ್ರದರ್ಶನ ರೋಮಾಂಚನಕಾರಿಯಾಗಿರುತ್ತದೆ. ಈ ವಿಡಿಯೊ ಕೂಡ ಅದೇ ಸಾಲಿಗೆ ಸೇರುತ್ತದೆ. ವ್ಯಕ್ತಿಯೊಬ್ಬ ಮೊಸಳೆಯ ಬಾಯಿ ಒಳಗೆ ಕೈ ಹಾಕುವ ಸಾಹಸ ಮಾಡಿದ್ದಾರೆ. ಹಳೆಯ ವಿಡಿಯೊ ಇದಾಗಿದ್ದು, ಮತ್ತೆ ವೈರಲ್ ಆಗಿದೆ.
ಇಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ 73 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಬಾಯಿ ತೆರೆದು ನಿಂತಿರುವ ಮೊಸಳೆಯ ದವಡೆಯನ್ನು ಗದ್ದದ ಮೂಲಕ ಆತುಕೊಂಡು ನಿಂತಿರುವ ಯುವಕನನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಎಲ್ಲರೂ ಉಸಿರು ಬಿಗಿ ಹಿಡಿದು ನೋಡುತ್ತಿದ್ದಂತೆ ಆ ಯುವಕ ತನ್ನ ಕೈಯನ್ನು ಮೊಸಳೆಯ ಬಾಯೊಳಗೆ ತರುತ್ತಾನೆ. ಕೂಡಲೆ ಮೊಸಳೆ ಬಾಯಿ ಮುಚ್ಚುತ್ತದೆ. ಆದರೆ ಅಷ್ಟರಲ್ಲೇ ಆ ಯುವಕ ಮಿಂಚಿನ ವೇಗದಲ್ಲಿ ಕೈಯನ್ನು ಆಚೆ ತಂದಿರುತ್ತಾನೆ. ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗುತ್ತಾನೆ. ಸದ್ಯ ಈ ವಿಡಿಯೊ ನೋಡಿದ ಬಹುತೇಕರು ಎದೆ ಮೇಲೆ ಕೈಯಿಟ್ಟು ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವರಂತೂ ನೋಡಲಾರದೆ ಒಂದು ಕ್ಷಣ ಕಣ್ಣು ಮುಚ್ಚಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ಈ ವಿಡಿಯೊ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಯುವಕನ ಧೈರ್ಯಕ್ಕೆ ಶರಣು ಎಂದಿದ್ದಾರೆ. ʼʼಈ ವಿಡಿಯೊ ನೋಡುತ್ತಿದ್ದಂತೆ ನನ್ನ ಕೈಯಿಂದ ಮೊಬೈಲ್ ಫೋನ್ ಕೆಳಗೆ ಬಿತ್ತುʼʼ ಎಂದು ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ʼʼಜಸ್ಟ್ ಮಿಸ್ʼʼ ಎಂದು ಇನ್ನೊಬ್ಬರು ಉದ್ಘಾರ ತೆಗೆದಿದ್ದಾರೆ. ಕೆಲವರು ಇದನ್ನು ʼʼಧೈರ್ಯದ ಪರೀಕ್ಷೆʼʼ ಎಂದು ಕರೆದಿದ್ದಾರೆ. ʼʼಬೆಂಕಿಯೊಂದಿಗೆ ಸರಸವಾಡಬೇಡಿʼʼ ಎಂದು ಮತ್ತೊಬ್ಬರು ಮನವಿ ಮಾಡಿದ್ದಾರೆ. ʼʼಇದು ಸೆಕೆಂಡ್‌ನ ಪ್ರಾಧಾನ್ಯತೆಯನ್ನು ತಿಳಿಸುತ್ತದೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಕೆಲವರು ʼʼಅಪಾಯʼʼ ಎಂದಿದ್ದಾರೆ. ಇನ್ನು ಕೆಲವರು ಈ ವಿಡಿಯೊವನ್ನು ಸ್ಲೋ ಮೋಷನ್‌ನಲ್ಲಿ ನೋಡಲು ಇಚ್ಛಿಸಿದ್ದಾರೆ. ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿದ್ದು, ʼʼಮೊಸಳೆ ಮನಸ್ಸಿನಲ್ಲೇ ನಗುತ್ತಾ, ಮುಂದಿನ ಸಲ ಈ ಚಾನ್ಸ್ ಮಿಸ್ ಮಾಡಿಕೊಳ್ಳುವುದಿಲ್ಲ ಎಂದುಕೊಳ್ಳುತ್ತಿದೆʼʼ ಎಂದಿದ್ದಾರೆ. ʼʼಮತ್ತೊಮ್ಮೆ ಈ ರೀತಿ ಪ್ರಯತ್ನಿಸಬೇಡ ಎಂದು ಮೊಸಳೆ ಹೇಳುವಂತಿದೆʼʼ ಎಂದು ಮಗದೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಅನೇಕರ ಗಮನ ಸೆಳೆದಿದೆ.
ಇದನ್ನೂ ಓದಿ: Viral video: ಕೆಳಗೆ ಬಿದ್ದ ಮಗುವಿನ ಶೂ ಹೆಕ್ಕಿ ಕೊಟ್ಟ ಆನೆ; ಬುದ್ಧಿವಂತ ಪ್ರಾಣಿ ಎಂದ್ರು ನೆಟ್ಟಿಗರು
ಅಪಾಯಕಾರಿ ಪ್ರಾಣಿ
ಸಾಮಾನ್ಯವಾಗಿ ಮೊಸಳೆಯನ್ನು ಅಪಾಯಕಾರಿ ಪ್ರಾಣಿ ಎಂದೆ ಪರಿಗಣಿಸಲಾಗುತ್ತದೆ. ಆಫ್ರಿಕಾ, ಏಷ್ಯಾ, ಅಮೇರಿಕಾ ಮತ್ತು ಆಸ್ಟ್ರೇಲಿಯಾದ ಉಷ್ಣವಲಯದಾದ್ಯಂತ ಇವು ಕಂಡು ಬರುತ್ತವೆ. ಪ್ರತಿ ವರ್ಷ ಸಾವಿರಾರು ಮಂದಿ ಮೊಸಳೆಗೆ ಆಹಾರವಾಗುತ್ತಾರೆ. ಮೊಸಳೆಗಳಲ್ಲಿ ವಿವಿಧ ಪ್ರಬೇಧಗಳಿವೆ. ಇವುಗಳಲ್ಲಿ ಉಪ್ಪನ್ನು ಫಿಲ್ಟರ್ ಮಾಡಲು ವಿಶೇಷ ಗ್ರಂಥಿಗಳಿದ್ದು, ಈ ಕಾರಣದಿಂದಾಗಿ ಉಪ್ಪುನೀರನ್ನು ಸಹಿಸಿಕೊಳ್ಳಬಲ್ಲವು.