ಸ್ನೇಹಿತರು ಫನ್ಗಾಗಿ ಮಾಡಿಕೊಂಡ ಒಂದ ಚಾಲೆಂಜ್ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸ್ನೇಹಿತರ ಗುಂಪಿನ 25 ವರ್ಷದ ಯುವಕನೊಬ್ಬ ಮೃತಪಟ್ಟಿದ್ದು, ಆತನ ಅಪ್ಪ, ಉಳಿದ ಹುಡುಗರ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ. ಬಿಹಾರದ ಗೋಪಾಲ್ಗಂಜ್ನ ಬಿಪಿನ್ ಕುಮಾರ್ ಪಾಸ್ವಾನ್ ಮೃತ ಯುವಕನಾಗಿದ್ದು, ಈತ ಲೆಕ್ಕತಪ್ಪಿ ಮೊಮೊಸ್ ತಿಂದು (Momos Eating) ಸ್ಥಳದಲ್ಲೇ ಅಸುನೀಗಿದ್ದಾನೆ. ಸ್ನೇಹಿತರೆಲ್ಲ ಸೇರಿ ಮಾಡಿಕೊಂಡಿದ್ದ ಚಾಲೆಂಜ್ ಇದಕ್ಕೆ ಕಾರಣ.
ಬಿಪಿನ್ ಕುಮಾರ್ ಪಾಸ್ವಾನ್ ಮೊಬೈಲ್ ದುರಸ್ತಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದವನು. ಗುರುವಾರ ಎಂದಿನಂತೆ ತನ್ನ ಅಂಗಡಿಗೆ ಹೋದ. ಸಂಜೆ ಹೊತ್ತಿಗೆ ಅವನ ಒಂದಷ್ಟು ಗೆಳೆಯರು ಸಿಕ್ಕರು. ಎಲ್ಲ ಸೇರಿ ಹೊರಗಡೆ ಸುತ್ತಾಡಲು ಹೊರಟರು. ಬಳಿಕ ಮೊಮೊಸ್ (ಫಾಸ್ಟ್ಫುಡ್) ತಿನ್ನಬೇಕು ಎಂದು ನಿರ್ಧರಿಸಿದರು. ಸುಮ್ಮನೆ ತಿನ್ನುವ ಬದಲು ಒಂದು ಚಾಲೆಂಜ್ ಮಾಡೋಣ. ನಮ್ಮ ಗುಂಪಿನಲ್ಲಿ ಯಾರು ಹೆಚ್ಚು ಮೊಮೊಸ್ ತಿನ್ನುತ್ತಾರೆ ನೋಡೋಣ ಎಂದು ಮಾತನಾಡಿಕೊಂಡು, ಎಲ್ಲರೂ ಒಪ್ಪಿ ತಿನ್ನಲು ಶುರು ಮಾಡಿದರು. ಬಿಪಿನ್ ಎಲ್ಲರಿಗಿಂತಲೂ ಮುಂದಿದ್ದ. ಹೀಗೆ ಬಾಯ್ತುಂಬ ಮೊಮೊಸ್ ತುಂಬಿಕೊಂಡು ಒಂದೇ ಸಮನೆ ತಿನ್ನುತ್ತಿದ್ದ. ಒಮ್ಮೆಲೇ ಕುಸಿದು ಬಿದ್ದು ಸತ್ತೇಹೋಗಿದ್ದಾನೆ. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ, ಶವವನ್ನು ಪೋಸ್ಟ್ ಮಾರ್ಟಮ್ಗೆ ಕಳಿಸಿದ್ದಾರೆ.
ಇದನ್ನೂ ಓದಿ: Momos craze | ನೀವು ಮೋಮೋಸ್ ಪ್ರಿಯರೇ? ಹಾಗಾದರೆ ತಿನ್ನುವ ಮೊದಲು ಇದನ್ನೋದಿ!
ಅಪ್ಪನಿಂದ ಆರೋಪ
ಘಟನೆ ನಡೆಯುತ್ತಿದ್ದಂತೆ ಬಿಪಿನ್ ಕುಮಾರ್ ಪಾಸ್ವಾನ್ ಅಪ್ಪ ಗಂಭೀರ ಆರೋಪ ಮಾಡಿದ್ದಾರೆ. ಬಿಪಿನ್ ಸುಮ್ಮನೆ ಸತ್ತಿಲ್ಲ. ಅವನ ಸ್ನೇಹಿತರು ಮೊಮೊಸ್ ತಿನ್ನುವ ನೆಪದಲ್ಲಿ ಕರೆದುಕೊಂಡು ಹೋಗಿ ವಿಷ ಹಾಕಿದ್ದಾರೆ. ಅವನ ಸಾವಿನ ಹಿಂದೆ ಸ್ನೇಹಿತರ ಸಂಚು ಇದೆ. ತನಿಖೆ ಮಾಡಿ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸದ್ಯ ಬಿಪಿನ್ ಸಾವಿನ ಕಾರಣವನ್ನು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.