ಸಾರಾಯಿ ನಶೆ ಮಿತಿಮೀರಿದರೆ ಮನುಷ್ಯ, ಮನುಷ್ಯನಂತೆ ವರ್ತಿಸುವುದಿಲ್ಲ. ತಾನ್ಯಾರು, ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದನ್ನೂ ಮರೆಸುತ್ತದಂತೆ ಮದ್ಯದ ಅತಿಯಾದ ಅಮಲು. ದೆಹಲಿಯ ಈ ವ್ಯಕ್ತಿಗೂ ಹಾಗೇ ಆಗಿದೆ. ಅತಿಯಾಗಿ ಮದ್ಯ ಸೇವನೆ (Drunk Delhi Man) ಮಾಡಿದ ಬಳಿಕ ಇವನು ತನ್ನನ್ನು ತಾನೇ ಮರೆತಿದ್ದಾನೆ. ತನ್ನ ದುಬಾರಿ ಕಾರು, ಲ್ಯಾಪ್ಟಾಪ್, ದೊಡ್ಡ ಮೊತ್ತದ ಹಣ, ಮೊಬೈಲ್ಗಳನ್ನೆಲ್ಲ ಅಪರಿಚಿತನೊಬ್ಬನಿಗೆ ಕೊಟ್ಟು, ಕೈ ಬರಿದು ಮಾಡಿಕೊಂಡು ಮೆಟ್ರೋ ರೈಲಿನಲ್ಲಿ ಮನೆ ಸೇರಿಕೊಂಡಿದ್ದಾನೆ..ನಶೆ ಇಳಿದ ಮೇಲೆ, ಎಲ್ಲವೂ ನೆನಪಾಗಿ ತಾನೇ ಹೋಗಿ ಪೊಲೀಸರಿಗೆ ದೂರು ಕೊಟ್ಟಿದ್ದಾನೆ.
ಈತನ ಹೆಸರು ಅಮಿತ್ ಪ್ರಕಾಶ್. ದೆಹಲಿಯ ಗ್ರೇಟರ್ ಕೈಲಾಶ್-11 ನಿವಾಸಿ. ಇತ್ತೀಚೆಗೆ ಒಂದು ದಿನ ಕಂಠಪೂರ್ತಿ ಕುಡಿದಿದ್ದ. ಅಷ್ಟು ಮದ್ಯಪಾನ ಮಾಡಿದ ಮೇಲೂ ಮತ್ತೆ ವೈನ್ ಶಾಪ್ಗೆ ಹೋಗಿದ್ದ. ಅದಾಗಲೇ ಅಮಲಿನಲ್ಲಿ ಇದ್ದ ಅವನು ವೈನ್ ಶಾಪ್ನಲ್ಲಿ 2000 ರೂಪಾಯಿ ಬಿಲ್ ಕೊಡುವ ಬದಲು, 20 ಸಾವಿರ ರೂಪಾಯಿ ನೀಡಿದ್ದ. ಅಂಗಡಿ ಮಾಲೀಕ 18 ಸಾವಿರ ರೂಪಾಯಿ ಚೇಂಜ್ ನೀಡಿದ್ದ.
ತೂರಾಡುತ್ತಲೇ, ಕೈಯಲ್ಲಿ ವೈನ್ ಬಾಟಲಿ ಹಿಡಿದು ಕಾರಿಗೆ ಬಂದ ಅಮಿತ್ ಪ್ರಕಾಶ್, ಕಾರಿನಲ್ಲಿ ಕುಳಿತು ಮತ್ತೆ ಮದ್ಯಪಾನ ಮಾಡಲು ಶುರು ಮಾಡಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಅಪರಿಚಿತನೊಬ್ಬ ಅಮಿತ್ ಪ್ರಕಾಶ್ ಬಳಿ, ‘ನಾನೂ ನಿಮ್ಮೊಂದಿಗೆ ಮದ್ಯ ಸೇವಿಸಬಹುದಾ’ ಎಂದು ಪ್ರಶ್ನಿಸಿದ. ಒಕೆ ಅಂದ ಅಮಿತ್..ಇಬ್ಬರೂ ಕಾರಿನಲ್ಲಿ ಕುಡಿಯತೊಡಗಿದರು. ಅಮಿತ್ ಪ್ರಕಾಶ್ ನಿಧಾನಕ್ಕೆ ಕಾರು ಡ್ರೈವ್ ಮಾಡ ತೊಡಗಿದ. ಹೀಗೆ ಇಬ್ಬರೂ ಕೈಯಲ್ಲಿ ಬಾಟಲಿ ಹಿಡಿದು, ಹೆಂಡ ಕುಡಿಯುತ್ತಲೇ ಸುಭಾಷ್ ಚೌಕ್ ಬಳಿ ಬಂದರು. ಆ ವೃತ್ತದಲ್ಲಿ ಕಾರು ನಿಲ್ಲಿಸಿದ ಅಮಿತ್ ಪ್ರಕಾಶ್, ಒಮ್ಮೆಲೇ ಕಾರಿನಿಂದ ಇಳಿದು, ಅದರಲ್ಲಿದ್ದ ಮೊಬೈಲ್, ಲ್ಯಾಪ್ಟಾಪ್, ಜತೆಗೆ ಹಣವನ್ನೂ ಅಪರಿಚಿತನಿಗೆ ಕೊಟ್ಟು, ಬೈ ಎಂದು ಹೊರಟೇಬಿಟ್ಟ. ಹೀಗೆ ನಡೆದುಕೊಂಡು ಹೋಗಿ ಮೆಟ್ರೋ ಸ್ಟೇಶನ್ ತಲುಪಿ, ರೈಲು ಹತ್ತಿ ಮನೆ ಸೇರಿಕೊಂಡಿದ್ದಾನೆ.
ಇದನ್ನೂ ಓದಿ: Viral Video : ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಮದ್ಯಪಾನ, ಪುಷ್ಅಪ್ ಸ್ಟಂಟ್!
ಮರುದಿನ ಬೆಳಗ್ಗೆ ಎದ್ದಾಗ ಅವನಿಗೆ ತಾನು ಮಾಡಿಕೊಂಡ ಎಡವಟ್ಟು ನೆನಪಾಗಿದೆ. ಸೀದಾ ಹೋಗಿ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಕುಡಿದ ಅಮಲಿನಲ್ಲಿ, ಅದು ತನ್ನ ಕಾರು ಎಂದೇ ಮರೆತುಬಿಟ್ಟಿದ್ದೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾನೆ. ಅಮಿತ್ ಹೇಳಿದ ಸ್ಥಳವನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಿದ್ದಾರೆ. ಇನ್ನು ಕುಡಿದು ಕಾರ್ ಡ್ರೈವ್ ಮಾಡಿದ ಅಮಿತ್ ಪ್ರಕಾಶ್ಗೂ ದಂಡ ಬೀಳುವ ಸಾಧ್ಯತೆ ದಟ್ಟವಾಗಿದೆ.
ನಾವು ನಿತ್ಯ ಜೀವನದಲ್ಲಿ ಇಂಥ ದೃಶ್ಯವನ್ನು ನೋಡುತ್ತಿರುತ್ತೇವೆ. ಕಂಠಪೂರ್ತಿ ಕುಡಿದು ಚರಂಡಿಯಲ್ಲೋ, ಫೂಟ್ಪಾತ್ ಮೇಲೋ ಮಲಗಿರುವವರನ್ನು, ಸಿಕ್ಕಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುವವರನ್ನು, ಕುಡಿದ ಮತ್ತಲ್ಲಿ ಕ್ರೈಂಗೆ ಕಾರಣರಾಗುವವರನ್ನು, ಗೊಳೋ ಎಂದು ಅಳುವವರು, ಲೋಕವನ್ನೇ ಮರೆಯುವವರು, ಬಾಯಿಗೆ ಬಂದಂತೆ ಬೈಯುವವರು..ಹೀಗೆ ತರಹೇವಾರಿ ಕುಡುಕರು ಇರುತ್ತಾರೆ. ಆದರೆ ಈ ಅಮಿತ್ ಪ್ರಕಾಶ್ ಮತ್ತಷ್ಟು ವಿಭಿನ್ನವಾಗಿ ವರ್ತಿಸಿ, ಸುದ್ದಿಯಾಗಿದ್ದಾನೆ.