Site icon Vistara News

Viral Video | ರೇಷನ್​ ಕಾರ್ಡ್​ನಲ್ಲಿ ದತ್ತಾ ಬದಲು ಕುತ್ತಾ ಎಂದಾಯ್ತು ಹೆಸರು; ಅಧಿಕಾರಿ ಎದುರು ಬೌಬೌ ಎಂದು ಕೂಗಿದ ವ್ಯಕ್ತಿ !

Man mimics dog infront of Officer after his name misprint as kutta In ration card

‘ಸರ್ಕಾರಿ ಅಧಿಕಾರಿ ಒಬ್ಬರು ಕಾರಿನಲ್ಲಿ ಕುಳಿತಿದ್ದಾರೆ, ಆ ಕಾರು ಹೊರಡಲು ಸಿದ್ಧವಾಗಿದೆ. ಆದರೆ ಅಲ್ಲೊಬ್ಬ ವ್ಯಕ್ತಿ ಕಾರಿನ ಕಿಟಕಿಯ ಬಳಿ ಮುಖವಿಟ್ಟು, ಆ ಅಧಿಕಾರಿ ಎದುರು ನಾಯಿಯಂತೆ ವರ್ತಿಸುತ್ತಿದ್ದಾನೆ. ಅವನೇನೂ ಮಾತನಾಡುತ್ತಿಲ್ಲ, ಬದಲಿಗೆ ನಾಯಿಯಂತೆ ಬೌಬೌ ಎಂದು ಕೂಗುತ್ತ, ದಾಖಲೆಗಳನ್ನು ಅಧಿಕಾರಿ ಎದುರು ಹಿಡಿಯುತ್ತಿದ್ದಾನೆ. ಕಾರು ನಿಧಾನಕ್ಕೆ ಚಲಿಸಿದರೂ ಅವನು ಬಿಡುತ್ತಿಲ್ಲ. ಹಾಗೇ, ಅವನ ಹಿಂದೆ ಹಲವರು ಇದ್ದಾರೆ.’

ನಾವಿಲ್ಲಿ ಕೆಳಗೆ ಕೊಟ್ಟಿರುವ ವಿಡಿಯೊ ನೋಡಿದರೆ, ನಿಮಗೆ ಈ ಸನ್ನಿವೇಶವುಳ್ಳ ದೃಶ್ಯ ಕಾಣಿಸುತ್ತದೆ ಮತ್ತು ಆ ವಿಡಿಯೊ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅಂದಹಾಗೇ, ಇದು ಪಶ್ಚಿಮ ಬಂಗಾಳದ ಬಂಕುರಾದಲ್ಲಿ ನಡೆದ ಘಟನೆ. ಹೀಗೆ ನಾಯಿಯಂತೆ ಬೊಗಳುತ್ತ, ವರ್ತನೆ ಮಾಡುತ್ತಿರುವ ವ್ಯಕ್ತಿ ಹೆಸರು ದತ್ತಾ. ಆದರೆ ರೇಷನ್​ ಕಾರ್ಡ್​​ನಲ್ಲಿ ಅದು ತಪ್ಪಾಗಿ ‘ಕುತ್ತಾ’ ಎಂದು ಪ್ರಿಂಟ್​ ಆಗಿದೆ. ಕುತ್ತಾ ಎಂದರೆ ನಾಯಿ ಎಂದಲ್ಲವೇ? ಹೀಗೆ ಹೆಸರನ್ನು ಬದಲಿಸುವ ಜತೆ, ನಾಯಿ ಎಂಬ ಅರ್ಥ ಕೊಟ್ಟಿದ್ದಕ್ಕೆ ಅಸಮಾಧಾನಗೊಂಡ ದತ್ತಾ, ತಮ್ಮ ಏರಿಯಾಕ್ಕೆ ಬಂದ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಎದುರು ಹೀಗೆ ನಾಯಿಯಂತೆ ಕೂಗಿ, ವರ್ತನೆ ಮಾಡುವ ಮೂಲಕ ಅವರ ತಪ್ಪು ತೋರಿಸಿದ್ದಾನೆ.

ಇನ್ನು ದತ್ತಾ ಏಕಾಏಕಿ ಅಧಿಕಾರಿ ಎದುರು ಹೀಗೆ ವರ್ತಿಸಿಲ್ಲ. ರೇಷನ್ ಕಾರ್ಡ್​​ನಲ್ಲಿ ನನ್ನ ಹೆಸರು ತಪ್ಪಾಗಿದೆ. ದತ್ತಾ ಬದಲು ಕುತ್ತಾ ಎಂದಾಗಿದೆ. ಅದನ್ನು ದಯವಿಟ್ಟು ಸರಿಪಡಿಸಿಕೊಡಿ ಎಂದು ಸ್ಥಳೀಯ ಅಧಿಕಾರಿಗಳು, ಆಡಳಿತ ಸಿಬ್ಬಂದಿ ಬಳಿ ಪರಿಪರಿಯಾಗಿ ಕೇಳಿಕೊಂಡಿದ್ದಾನೆ. ಆದರೆ ಅವರು ದತ್ತಾ ಮನವಿಯನ್ನು ಪುರಸ್ಕರಿಸಲಿಲ್ಲ. ಎಷ್ಟೇ ಹೇಳಿದರೂ ಹೆಸರು ಸರಿ ಮಾಡಿರಲಿಲ್ಲ. ಹೀಗಾಗಿ ತಾಳ್ಮೆ ಕಳೆದುಕೊಂಡಿದ್ದ ದತ್ತಾ, ತಮ್ಮ ಏರಿಯಾದಲ್ಲಿರುವ ಪಂಚಾಯಿತಿಗೆ ಬಂದಿದ್ದ ಬಿಡಿಒ ಎದುರು ಹೀಗೆ ವರ್ತಿಸಿದ್ದಾಗಿ ವರದಿಯಾಗಿದೆ.

ಅಂದಹಾಗೇ ಇವರ ಪೂರ್ತಿ ಹೆಸರು ಶ್ರೀಕಾಂತಿ ದತ್ತಾ ಎಂದಾಗಿದ್ದು, ತಾನು ಹೀಗೆ ವರ್ತಿಸಿದ್ದು ಯಾಕೆ ಎಂಬುದನ್ನು ಅವರೇ ತಿಳಿಸಿದ್ದಾರೆ. ‘ರೇಷನ್​ ಕಾರ್ಡ್​​ನಲ್ಲಿ ಹೆಸರು ಸರಿಪಡಿಸಿಕೊಡುವಂತೆ ನಾನು ಮೂರರಿಂದ ನಾಲ್ಕು ಬಾರಿ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದೆ. ಒಮ್ಮೆ ಸರಿಪಡಿಸಿದ್ದರೂ ಅದನ್ನು ಮತ್ತೆ ಕುತ್ತಾ ಎಂದೇ ಮಾಡಿದ್ದರು. ಹೀಗಾಗಿ ನನಗೆ ತುಂಬ ನೋವಾಗಿತ್ತು. ಶನಿವಾರ ಮತ್ತೆ ಸ್ಥಳೀಯ ಆಡಳಿತಕ್ಕೆ ತೆರಳಿದ್ದೆ. ಆಗ ಅಲ್ಲಿ ಗೆ ಜಂಟಿ ಬಿಡಿಒ ಆಗಮಿಸಿದ್ದರು. ಅವರ ಬಳಿ ನನ್ನ ಸಮಸ್ಯೆ ಹೇಳಲು ಪ್ರಯತ್ನ ಪಟ್ಟೆ. ಆದರೆ ಸ್ಪಂದಿಸಲಿಲ್ಲ. ಅದಕ್ಕೆ ನಾಯಿಯಂತೆ ಬೊಗಳಿ, ವರ್ತಿಸಲು ಶುರು ಮಾಡಿದೆ. ಆದರೂ ನನ್ನೆಡೆಗೆ ನೋಡಲಿಲ್ಲ. ಆದರೆ ಕೊನೆಯಲ್ಲಿ ಕ್ಯಾಮರಾಗಳೆಲ್ಲ ಅವರ ಕಡೆ ಇರುವುದರಿಂದ ನನ್ನ ರೇಷನ್ ಕಾರ್ಡ್​ ನೋಡಿ, ಅದನ್ನು ಅಲ್ಲಿಯೇ ಇದ್ದ ಸ್ಥಳೀಯ ಆಡಳಿತ ಸಿಬ್ಬಂದಿಗೆ ಕೊಟ್ಟು ಸರಿಪಡಿಸುವಂತೆ ಹೇಳಿದ್ದಾರೆ’ ಎಂದು ದತ್ತಾ ಹೇಳಿಕೊಂಡಿದ್ದಾರೆ. ಶ್ರಕಾಂತಿ ದತ್ತಾ ಮಾಡಿದ ಕೆಲಸವನ್ನು ಅನೇಕರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Viral video | ಚಿಕಾಗೋನಲ್ಲಿ ಭಾರತೀಯನ ಮದುವೆಗೆ ಸೀರೆಯುಟ್ಟು ಬಿಂದಿಯಿಟ್ಟು ಬಂದ ಗೆಳೆಯರು!

Exit mobile version