ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ, ಬಾಸ್ಗಳೊಂದಿಗೆ ಕಿರಿಕ್ ಸಾಮಾನ್ಯ. ಅದರಲ್ಲೂ ಬಾಸ್ಗಳು/ಮ್ಯಾನೇಜರ್ ಜತೆ ಕೆಲಸ, ರಜಾ ವಿಷಯದಲ್ಲಿ ಜಟಾಪಟಿ ನಡೆಯುತ್ತಲೇ ಇರುತ್ತದೆ. ಈಗ ಇಲ್ಲೊಬ್ಬ ಉದ್ಯೋಗಿ ಹೀಗೆ ರಜಾ ವಿಷಯದಲ್ಲಿ ತನ್ನ ಬಾಸ್ನ ಮನೋಭಾವ ಇಷ್ಟವಾಗದೆ ಕೆಲಸವನ್ನೇ ಬಿಟ್ಟಿದ್ದಾರೆ. ಹಾಗೇ, ತಮ್ಮ ಮತ್ತು ಮ್ಯಾನೇಜರ್ ನಡುವೆ ನಡೆದ ವಾಟ್ಸ್ಆ್ಯಪ್ ಸಂಭಾಷಣೆಯ ಸ್ಕ್ರೀನ್ಶಾಟ್ನ್ನು ಕೂಡ ರೆಡ್ಡಿಟ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ‘ಮದುವೆ ಆಗದೆ ಇರುವವರಿಗೆ ವೈಯಕ್ತಿಕ ಬದುಕೇ ಇಲ್ಲವಾ?’ ಎಂದು ಪ್ರಶ್ನೆ ಮಾಡಿದ್ದಾರೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.
ಆ ಉದ್ಯೋಗಿ ಹೆಸರು ಗೊತ್ತಾಗಲಿಲ್ಲ. ಇವರು ಹೇಗೂ ಮರುದಿನ ರಜಾ (ವೀಕ್ ಆಫ್) ಎಂದು ಮನೆಗೆ ಬಂದ ಕೆಲವೇ ಹೊತ್ತಲ್ಲಿ ಅವರ ಮ್ಯಾನೇಜರ್ನಿಂದ ಮೆಸೇಜ್ ಬಂದಿದೆ. ‘ನಾಳೆ ಮುಂಜಾನೆ 7ಗಂಟೆ ಶಿಫ್ಟ್ಗೆ ಯಾರೂ ಇಲ್ಲ. ಹೀಗಾಗಿ 6.15ಕ್ಕೆ ನೀವು ಬನ್ನಿ’ ಎಂಬುದು ಆ ಸಂದೇಶವಾಗಿತ್ತು. ಉದ್ಯೋಗಿ ಆ ಮೆಸೇಜ್ ಓದಿ ಸುಮ್ಮನೆ ಇದ್ದರು. ಆದರೆ ಮ್ಯಾನೇಜರ್ ಬಿಡಲಿಲ್ಲ. ‘ನೀವು ಮೆಸೇಜ್ ಓದಿದ್ದೀರಿ. ನಾಳೆ 6.15ಕ್ಕೆ ಬರುತ್ತೀರಿ ಎಂದು ಭಾವಿಸಿದ್ದೇನೆ’ ಎಂದು ಮತ್ತೊಂದು ಮೆಸೇಜ್ ಮಾಡುತ್ತಾರೆ. ಆಗ ಆ ಉದ್ಯೋಗಿ ಉತ್ತರಿಸಿ ‘ಇಲ್ಲ, ನಾಳೆ ಕೆಲವು ಪ್ಲ್ಯಾನ್ಗಳನ್ನು ಮಾಡಿಕೊಂಡಿದ್ದೇನೆ. ನೀವು ಬ್ರೈನ್ (ಅದೇ ಟೀಮ್ನ ಇನ್ನೊಬ್ಬ ಉದ್ಯೋಗಿ) ಬಳಿ ಬರಲು ಹೇಳಿ ಎಂದಿದ್ದಾರೆ’. ಆದರೆ ಬಾಸ್ ಅದಕ್ಕೆ ವಿಚಿತ್ರ ಉತ್ತರ ಕೊಟ್ಟಿದ್ದಾರೆ. ‘ಅದು ಸಾಧ್ಯವಿಲ್ಲ. ಬ್ರೈನ್ಗೆ ಮದುವೆಯಾಗಿ, ಒಂದು ಮಗುವಿದೆ. ಅವನಿಗೆ ಹೀಗೆ ನಾನು ಏಕಾಏಕಿ ಶಿಫ್ಟ್ ಬದಲು ಮಾಡಲು ಸಾಧ್ಯವಿಲ್ಲ. ನಾಳೆ ಮುಂಜಾನೆ ಬನ್ನಿ ಎಂದು ಈ ರಾತ್ರಿ ಹೇಳಲಾರೆ. ನೀವಾದರೆ ಸಿಂಗಲ್. ಇನ್ನೂ ಮದುವೆಯಾಗಿಲ್ಲ. ನಿಮಗೆ ನಾಳೆ ಮುಂಜಾನೆ ಶಿಫ್ಟ್ಗೆ ಬರದೆ ಏನಾಗಿದೆ?‘ ಎಂದು ಮೆಸೇಜ್ ಮಾಡಿದ್ದಾರೆ. ಮ್ಯಾನೇಜರ್ನ ಈ ಸಂದೇಶ ಆ ಉದ್ಯೋಗಿಯ ಮನಸಿಗೆ ಬೇಸರ ಮೂಡಿಸಿದೆ. ನಮಗೆ ವೈಯಕ್ತಿಕ ಬದುಕೇ ಇಲ್ಲವಾ?’ ಎಂದು ಅವರು ಪ್ರಶ್ನಿಸಿದ್ದಾರೆ.
ಹಾಗಂತ ಇಲ್ಲಿಗೇ ಅವರಿಬ್ಬರ ಚಾಟ್ ಮುಗಿಯುವುದಿಲ್ಲ ‘ಏನೇ ಪ್ಲ್ಯಾನ್ಗಳಿದ್ದರೂ ನೀವು ಅದನ್ನೆಲ್ಲ ಬದಿಗೊತ್ತಿ ಆಫೀಸಿಗೆ ಬರಲೇಬೇಕು ಎಂದು ಮ್ಯಾನೇಜರ್ ಸ್ವಲ್ಪ ಖಡಕ್ ಆಗಿಯೇ ಸಂದೇಶ ಕಳಿಸುತ್ತಾರೆ. ‘ಬೆಳಗಿನ ಶಿಫ್ಟ್ ಕವರ್ ಮಾಡಿದರೆ ಸಾಕು, ಮಧ್ಯಾಹ್ನ ನೀವು ಹೋಗಬಹುದು. ನಿಮ್ಮ ಕೆಲಸವನ್ನು ಆಗಲೇ ಇಟ್ಟುಕೊಳ್ಳಿ ಎಂದೂ ಹೇಳುತ್ತಾರೆ. ಆದರೆ ಉದ್ಯೋಗಿ ಕೊನೆಗೂ ಆಫೀಸಿಗೆ ಹೋಗಲು ಒಪ್ಪಲೇ ಇಲ್ಲ. ಮ್ಯಾನೇಜರ್ ಹೆದರಿಸಿ-ಬೆದರಿಸಿದರೂ ಬಗ್ಗದೆ, ಕೊನೆಗೆ ಇನ್ನುಮುಂದೆ ನಿಮ್ಮ ಕಂಪನಿಯಲ್ಲಿ ಕೆಲಸವನ್ನೇ ಮಾಡುವುದಿಲ್ಲ ಎಂದು ಅವರು ಹೇಳಿ, ರಾಜೀನಾಮೆ ಪತ್ರವನ್ನು ಮೇಲ್ ಮಾಡಿದ್ದಾರೆ. ಹಾಗೇ, ಕಂಪನಿಯ ಮ್ಯಾನೇಜರ್ ಜತೆಗಿನ ಚಾಟ್ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ‘ಇದೊಂದು ಹಾಸ್ಯಾಸ್ಪದ’ ಎಂದಿದ್ದಾರೆ.