ನವ ದೆಹಲಿ: ನೋ ಪಾರ್ಕಿಂಗ್ ಸ್ಥಳ, ಮಧ್ಯ ರಸ್ತೆಗಳಲ್ಲಿ ಅಥವಾ ಇನ್ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ, ಅವುಗಳನ್ನು ಪೊಲೀಸರು ಟೋಯಿಂಗ್ ಮಾಡಿ, ಠಾಣೆಗೆ ಒಯ್ಯುವುದು ದೇಶಾದ್ಯಂತ ಜಾರಿಯಲ್ಲಿರುವ ವ್ಯವಸ್ಥೆ. ಅಡ್ಡಾದಿಡ್ಡಿ, ಎಲ್ಲೆಂದರಲ್ಲಿ ನಿಲ್ಲುವ ವಾಹನಗಳನ್ನು ಎತ್ತಿ, ಎಳೆದುಕೊಂಡು ಹೋಗಲೆಂದೇ ವಾಹನಗಳೂ ಇರುತ್ತವೆ. ಹೀಗೆ ಟೋಯಿಂಗ್ ಮಾಡುವ ಹಲವು ವಿಡಿಯೋಗಳನ್ನು, ದೃಶ್ಯಗಳನ್ನು ನೀವೆಲ್ಲ ನೋಡಿರುತ್ತೀರಿ. ಆದರೆ, ಈಗ ಸೋಷಿಯಲ್ ಮೀಡಿಯಾದಲ್ಲಿ ಟೋಯಿಂಗ್ ಪ್ರಕ್ರಿಯೆಯ ವಿಡಿಯೋವೊಂದು ಭರ್ಜರಿ ವೈರಲ್ ಆಗುತ್ತಿದ್ದು, ತುಂಬ ವಿಭಿನ್ನವಾಗಿದೆ.
‘ದ್ವಿಚಕ್ರ ವಾಹನ ಸವಾರನೊಬ್ಬ ತನ್ನ ಬೈಕ್ನ್ನು ಅದೆಲ್ಲಿ ನಿಲ್ಲಿಸಿದ್ದ ಗೊತ್ತಿಲ್ಲ, ಆದರೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಸ್ಥಳಕ್ಕೆ ಟೋಯಿಂಗ್ ವಾಹನ ಬಂದು ನಿಂತಿದೆ. ಆದರೆ ಒಂದು ವ್ಯತ್ಯಾಸವೆಂದರೆ ಟೋಯಿಂಗ್ ವಾಹನದ ಚಾಲಕ ಬರೀ ಬೈಕ್ನ್ನು ಎತ್ತದೆ, ಸವಾರ ಬೈಕ್ ಮೇಲೆ ಕುಳಿತಿದ್ದಂತೆ ಅವನನ್ನೂ ಸೇರಿಸಿಯೇ ಎತ್ತಿ ಗಾಳಿಯಲ್ಲಿ ತೇಲಾಡಿಸಿದ್ದಾರೆ. ಆ ಬೈಕ್ ಸವಾರ ತನ್ನನ್ನು ಕೆಳಗೆ ಇಳಿಸಿ ಎಂದು ಕೇಳುತ್ತಿದ್ದಾನೆ. ಬೈಕ್ ಚಾಲಕ ಪೊಲೀಸರೊಂದಿಗೆ ಏನಾದರೂ ತಗಾದೆ ತೆಗೆದಿದ್ದಕ್ಕೆ ಹೀಗೆ ಮಾಡಿದರಾ? -ಯಾವ ಸಂದರ್ಭದಲ್ಲಿ ಹೀಗೆ ಚಾಲಕನ ಸಮೇತ ಬೈಕ್ ಎತ್ತಿದರು ಎಂಬುದು ಗೊತ್ತಾಗಲಿಲ್ಲ’. ಆದರೆ ಇದೊಂದು ಫನ್ನಿ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ.
Humnagpurkar ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ವಿಡಿಯೋ ಶೇರ್ ಆಗಿದೆ. ಜುಲೈ ತಿಂಗಳಲ್ಲೇ ಪೋಸ್ಟ್ ಆದ ವಿಡಿಯೋ ಇದು. ಈಗ ಮತ್ತೆ ವೈರಲ್ ಆಗುತ್ತಿದೆ. ಆ ಸವಾರ ತನ್ನ ಬೈಕ್ ಬಗ್ಗೆ ತೋರಿಸಿರುವ ಪ್ರೀತಿ, ಬದ್ಧತೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಟೋಯಿಂಗ್ ಮಾಡಲು ಬಂದವರಿಗೆ ಬೈಕ್ ತೆಗೆದುಕೊಂಡು ಹೋಗಲು ಬಿಡಬಾರದು ಎಂಬ ಕಾರಣಕ್ಕೆ ಅದರ ಮೇಲೆ ಹತ್ತಿ ಪ್ರತಿಭಟಿಸುತ್ತಿದ್ದಾರೆ ಎಂದೇ ಅನೇಕರು ಹೇಳಿದ್ದಾರೆ. ಅಂದಹಾಗೇ, ಈ ಘಟನೆ ನಡೆದಿದ್ದು ನಾಗ್ಪುರದ ಸಾದರ್ ಬಜಾರ್ ಎಂಬಲ್ಲಿ ಎನ್ನಲಾಗಿದ್ದು, ಒಂದಷ್ಟು ಜನ ಬಲವಾಗಿ ಖಂಡಿಸಿದ್ದಾರೆ. ಟೋಯಿಂಗ್ ಸಿಬ್ಬಂದಿಯ ಅತಿರೇಕದ ವರ್ತನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭ ಎಂದ ನೂತನ ಆಯುಕ್ತ ಪ್ರತಾಪ್ ರೆಡ್ಡಿ