ನವದೆಹಲಿ: ಎಲ್ಲಾದರೂ ಹೊರ ಊರಿಗೆ ಹೋದಾಗ ಹೋಟೆಲ್‌ಗಳಲ್ಲಿ ಉಳಿದುಕೊಂಡರೆ ಅದಕ್ಕೆ ಇಂತಿಷ್ಟು ಎಂದು ಹಣ ತೆರಬೇಕಾಗುತ್ತದೆ. ಅದರಲ್ಲೂ ಸ್ಟಾರ್ ಹೋಟೆಲ್‌ಗಳಿಗೆ ಹೋದರಂತೂ ದಿನಕ್ಕೆ ಸಾವಿರದ ಲೆಕ್ಕಾಚಾರದಲ್ಲೇ ಹಣ ಕೊಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ಭೂಪ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಬರೋಬ್ಬರಿ ಎರಡು ವರ್ಷಗಳ ಕಾಲವಿದ್ದು, ಒಂದೇ ಒಂದು ರೂಪಾಯಿಯನ್ನೂ ಕೊಡದೆ ಚೆಕ್ ಔಟ್ ಮಾಡಿಕೊಂಡು ಹೋಗಿದ್ದಾನೆ. ಈ ಸುದ್ದಿ ಎಲ್ಲೆಡೆ ವೈರಲ್ (Viral News) ಆಗುತ್ತಿದೆ.
ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ರೋಸೆಟ್ ಹೌಸ್ ಹೋಟೆಲ್‌ನಲ್ಲಿ ಈ ರೀತಿಯ ಘಟನೆ ನಡೆದಿದೆ. ಈ ಬಗ್ಗೆ ಹೋಟೆಲ್‌ನ ನಿರ್ವಹಣೆ ಮಾಡುತ್ತಿರುವ ಬರ್ಡ್ ಏರ್‌ಪೋರ್ಟ್ಸ್ ಹೋಟೆಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧಿಕಾರಿ ವಿನೋದ್ ಮಲ್ಹೋತ್ರಾ ಅವರು ಪೊಲೀಸರಲ್ಲಿ ದೂರನ್ನೂ ದಾಖಲಿಸಿದ್ದಾರೆ.
ಇದನ್ನೂ ಓದಿ: Viral News : ಕಾಗೆ ಹಾರಿಸುವ ಜಗ್ಗೇಶ್ಗೆ ನಾಗತಿಹಳ್ಳಿ ಮೇಷ್ಟ್ರ ಕಾಗುಣಿತ ಪಾಠ!
ಅಂಕುಶ್ ದತ್ತಾ ಹೆಸರಿನ ವ್ಯಕ್ತಿ 2019ರ ಮೇ 30ರಂದು ಹೋಟೆಲ್‌ಗೆ ಬಂದು ಒಂದು ರೂಮ್ ಬುಕ್ ಮಾಡಿದ್ದಾನೆ. ಮಾರನೇ ದಿನ ಅಂದರೆ 2019ರ ಮೇ 31ರಂದೇ ಆತ ರೂಮಿನಿಂದ ಚೆಕ್‌ಔಟ್ ಮಾಡುವುದಾಗಿ ನಮೂದಿಸಿದ್ದಾನೆ. ಆದರೆ ಆತ ಹೋಟೆಲ್ ಸಿಬ್ಬಂದಿಯ ಕಣ್ತಪ್ಪಿಸಿ 2021ರ ಜನವರಿ 22ರವರೆಗೂ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದ!
ಈ ಹೋಟೆಲ್‌ನ ಯಾವ ರೂಮಿಗೆ ಯಾವ ಬೆಲೆ ತೆರಬೇಕು ಎನ್ನುವುದರಿಂದ ಹಿಡಿದು ಸಂಪೂರ್ಣ ಉಸ್ತುವಾರಿಯನ್ನು ಪ್ರೇಮ್ ಪ್ರಕಾಶ್ ಹೆಸರಿನ ವ್ಯಕ್ತಿ ನೋಡಿಕೊಳ್ಳುತ್ತಿದ್ದಾನೆ. ಆತನೂ ಕೂಡ ಅಂಕುಶ್ ಸಹಾಯಕ್ಕೆ ನಿಂತಿದ್ದು, ಹೋಟೆಲ್‌ನ ಬಿಲ್‌ಗಳಲ್ಲಿ ಸಾಕಷ್ಟು ಮೋಸ ಮಾಡಿ ಅಂಕುಶ್ ಎರಡು ವರ್ಷಗಳ ಕಾಲ ಅಲ್ಲಿಯೇ ಉಳಿದುಕೊಳ್ಳಲು ನೆರವು ಮಾಡಿದ್ದಾನೆ ಎಂದೂ ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: Viral News : ಪೋಲೊ ಜಿಟಿ, ಮಿನಿ ಕೂಪರ್ ರೇಸ್; ಸೇತುವೆಗೆ ಗುದ್ದಿ ಭಸ್ಮವಾದ ಪೋಲೊ!
ಅಂಕುಶ್ ಹೋಟೆಲ್‌ಗೆ ಮೂರು ಬಾರಿ ಚೆಕ್ ನೀಡಿದ್ದಾನೆ. 10 ಲಕ್ಷ ರೂ., 7 ಲಕ್ಷ ರೂ. 20 ಲಕ್ಷ ರೂ.ಗಳ ಚೆಕ್ ಅನ್ನು ಕೊಟ್ಟಿದ್ದಾನೆ. ಆದರೆ ಅವೆಲ್ಲವೂ ಬೌನ್ಸ್ ಆಗಿವೆ. ಹಾಗೆಯೇ ಹೋಟೆಲ್‌ನಲ್ಲಿ ಯಾರಾದರೂ ನಿಗದಿತ ಅವಧಿಗಿಂತ 72 ತಾಸು ಹೆಚ್ಚು ಸಮಯ ಇದ್ದರೆ ಅದನ್ನು ಕಂಪನಿಯ ಸಿಇಒ ಗಮನಕ್ಕೆ ತರಬೇಕು ಎನ್ನುವ ನಿಯಮವಿದೆ. ಆದರೆ ಈ ಯಾವ ವಿಚಾರವನ್ನೂ ಪ್ರೇಮ್ ಪ್ರಕಾಶ್ ಯಾರೊಬ್ಬರಿಗೂ ತಿಳಿಯದಂತೆ ನೋಡಿಕೊಂಡಿದ್ದಾನೆ ಎನ್ನಲಾಗಿದೆ. ಅಂಕುಶ್ ಒಟ್ಟು 603 ದಿನಗಳ ಕಾಲ ಹೋಟೆಲ್‌ನಲ್ಲಿ ತಂಗಿದ್ದು ಆತನ ಒಟ್ಟು ಬಿಲ್ 58 ಲಕ್ಷ ರೂ. ಆಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.