Site icon Vistara News

Traffic Jam: ಟ್ರಾಫಿಕ್‌ ಜಾಮ್‌ನಲ್ಲೇ ಫುಡ್‌ ಡೆಲಿವರಿ ಮಾಡಿದ ಡೊಮಿನೋಸ್‌ ಸಿಬ್ಬಂದಿಗೆ ಸಿಕ್ತು ಶಬ್ಬಾಶ್‌ಗಿರಿ

viral video

viral video

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್‌ ಜಾಮ್‌ (Bengaluru Traffic Jam) ಬಹಳ ಪ್ರಸಿದ್ಧ. ಬೆಂಗಳೂರು ಟ್ರಾಫಿಕ್‌ ಜಾಮ್‌ಗೆ ಸಂಬಂಧಿಸಿ ಚಿತ್ರ ವಿಚಿತ್ರ ಕಥೆಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚೆಗೆ ಟ್ರಾಫಿಕ್‌ ಮಧ್ಯೆ ಸಿಲುಕಿಕೊಂಡ ಮಹಿಳೆಯೊಬ್ಬರು ತರಕಾರಿ ಕತ್ತರಿಸುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಇದೀಗ ಆನ್‌ಲೈನ್‌ ಫುಡ್‌ ಡೆಲಿವರಿ (Food delivery)ಮಾಡುವಾತ ಟ್ರಾಫಿಕ್‌ನಲ್ಲೇ ಆರ್ಡರ್‌ ಮಾಡಿದ ವ್ಯಕ್ತಿಗೆ ಆಹಾರ ವಿತರಿಸಿ ಸುದ್ದಿಯಾಗಿದ್ದಾನೆ. ಸದ್ಯ ಈ ಕುರಿತ ವಿಡಿಯೊ ವೈರಲ್‌ ಆಗಿದೆ.

ರಿಶಿವತ್ಸ್‌ ಈ ವಿಡಿಯೊವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿದ್ದ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಿಶಿವತ್ಸ್‌ ಡೊಮಿನೋಸ್‌ನಿಂದ ಆಹಾರ ಆರ್ಡರ್‌ ಮಾಡಿದ್ದರು. ಅವರ ಲೈವ್‌ ಲೊಕೇಷನ್‌ ಟ್ರ್ಯಾಕ್‌ ಮಾಡಿದ ಫುಡ್‌ ಡೆಲಿವರಿ ಏಜೆಂಟ್‌ ಕಾರಿನ ಬಳಿಗೇ ಬಂದು ಡೆಲಿವರಿ ಮಾಡಿದ್ದಾನೆ.

ಕೇವಲ 30 ಸೆಕೆಂಡ್‌ನ ವಿಡಿಯೊ ಇದಾಗಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಿಶಿವತ್ಸ್‌ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ ಡೊಮಿನೋಸ್‌ನ ಏಜೆಂಟ್‌ಗಳಿಬ್ಬರು ಸ್ಕೂಟರ್‌ನಲ್ಲಿ ಆಗಮಿಸಿದ್ದರು. ಬಳಿಕ ಅವರು ತಮ್ಮ ವಾಹನವನ್ನು ರಸ್ತೆ ಬದಿ ನಿಲ್ಲಿ ಕಾರಿನ ಬಳಿಗೆ ಬಂದು ಆರ್ಡರ್‌ ನೀಡಿದರು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

“ಡೊಮಿನೋಸ್‌ನಿಂದ ಆರ್ಡರ್ ಮಾಡಿದ್ದೆವು. ಅವರು ನಮ್ಮ ಲೈವ್ ಲೊಕೇಷನ್ ಅನ್ನು ಟ್ರ್ಯಾಕ್ ಮಾಡಿ ಟ್ರಾಫಿಕ್ ಜಾಮ್‌ ನಲ್ಲೇ ನಮಗೆ ಆಹಾರ ತಲುಪಿಸಿದರುʼʼ ಎಂದು ರಿಶಿವತ್ಸ್‌ ಬರೆದುಕೊಂಡಿದ್ದಾರೆ.

ನೆಟ್ಟಿಗರು ಏನಂತಾರೆ?

ವಿಡಿಯೊ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅನೇಕರು ಡೆಲಿವರಿ ಏಜೆಂಟ್‌ಗಳ ಬದ್ದತೆಯನ್ನು ಮೆಚ್ಚಿಕೊಂಡಿದ್ದಾರೆ. ʼʼಅವರನ್ನು ಗುರುತಿಸಿ ಅವರಿಗೆ ಬಹುಮಾನ ನೀಡಬೇಕು. ಅವರು ಉತ್ತಮ ಟಿಪ್ಸ್‌ ಪಡೆಯಲು ಅರ್ಹರುʼʼ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, ʼʼಈ ಒಬ್ಬರು ಏಜೆಂಟ್‌ಗಳಿಗೆ ವಿಶೇಷ ಬೋನಸ್‌ ಸಿಗಬೇಕು. ಅವರು ಇಲ್ಲದಿದ್ದರೆ ದಾಖಲೆಯ ಅವಧಿಯ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡವರು ಹಸಿವಿನಿಂದಲೇ ಕಾಯಬೇಕಿತ್ತುʼʼ ಎಂದಿದ್ದಾರೆ. ʼʼವಾವ್‌ ಡೊಮಿನೋಸ್‌. ಆದರೆ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಪರಿಸ್ಥಿತಿಯನ್ನು ನಿಭಾಯಿಸಲು ಸೋತು ಹೋಗಿದೆ. ಒಂದೇ ಸಮಯದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಸಂಗತಿಯನ್ನು ನೋಡಿದಂತಾಯಿತುʼʼ ಎಂದಿದ್ದಾರೆ ಮಗದೊಬ್ಬರು. ʼʼಅಸಾಧರಣ ಸೇವೆ. ಈ ಹುಡುಗರಿಗೆ ಸೂಕ್ತ ಗೌರವ ಸಿಗಲೇಬೇಕುʼʼ ಎನ್ನುವ ಆಗ್ರಹ ಮತ್ತೊಬ್ಬ ನೆಟ್ಟಿಗರದ್ದು. ಬೆಂಗಳೂರು ಟ್ರಾಫಿಕ್‌ನಿಂದ ಬೇಸತ್ತ ಕೆಲವರಂತೂ ʼʼಸಾಮಾನ್ಯ ಸಂಚಾರ ದಟ್ಟಣೆʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Viral Video: ಬ್ರೇಕ್​ ಪಡೆದ ಆಸೀಸ್​ ಆಟಗಾರರ ಮುಂದೆ ಬ್ರೇಕ್​ ಡ್ಯಾನ್ಸ್​ ಮಾಡಿದ ವಿರಾಟ್​ ಕೊಹ್ಲಿ

ದೀರ್ಘ ಸಮಯದ ಟ್ರಾಫಿಕ್‌ ಜಾಮ್‌

ಸೆಪ್ಟಂಬರ್‌ 27ರಂದು ಬೆಂಗಳೂರು ದೀರ್ಘ ಅವಧಿಯ ಟ್ರಾಫಿಕ್‌ ಜಾಮ್‌ಗೆ ಸಾಕ್ಷಿಯಾಯಿತು. ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಬಾಕಿಯಾದವು. ಅದರಲ್ಲೂ ಔಟರ್‌ ರಿಂಗ್‌ ರೋಡ್‌ (ORR) ಪ್ರದೇಶದಲ್ಲಂತೂ ಹಿಂದೆದೂ ಕಂಡಿರದ ವಾಹನ ದಟ್ಟಣೆ ಉಂಟಾಗಿತ್ತು. ಕೆಲವರು ಸುಮಾರು 5 ಗಂಟೆಗಳ ಕಾಲ ರಸ್ತೆಯಲ್ಲೇ ಬಾಕಿಯಾಗಬೇಕಾಯಿತು ಎಂದು ದೂರಿದ್ದಾರೆ. ಕನ್ನಡ ಪರ ಸಂಘಟನೆಗಳು ಮತ್ತು ರೈತ ಸಂಘಗಳು ಬೆಂಗಳೂರು ಬಂದ್ ಗೆ ಕರೆ ನೀಡಿದ ಮರುದಿನವೇ ಸಂಚಾರ ದಟ್ಟಣೆ ಉಂಟಾಗಿತ್ತು

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version