ಕುಶಿನಗರ: ಕುಡುಕರು ಮದ್ಯದ ಅಮಲು ಹೆಚ್ಚಾದಾಗ ಮಾಡುವ ಎಡವಿಡಂಗಿ ಕೆಲಸಗಳು, ಅವಘಡಗಳು ಒಂದೆರಡಲ್ಲ. ತಾವೇನು ಮಾಡ್ತಿದ್ದೇವೆ? ಎಲ್ಲಿದ್ದೇವೆ ಎಂಬ ಅರಿವಂತೂ ಅವರಿಗೆ ಇರುವುದಿಲ್ಲ. ಆದರೆ ಅಂಥವರು ಮಾಡುವ ಕೆಲಸಗಳಿಂದ ಬೇರೆಯವರು ಇಕ್ಕಟ್ಟಿಗೆ ಸಿಲುಕುವುದು, ಕಿರಿಕಿರಿ ಅನುಭವಿಸುವುದು, ನಗುವುದು ಇದ್ದೇ ಇರುತ್ತದೆ. ಅದರಂತೆ ಉತ್ತರ ಪ್ರದೇಶದಲ್ಲೊಬ್ಬ ಕುಡುಕ ಯುವಕ ಆಸ್ಪತ್ರೆ ವೈದ್ಯರಿಗೇ ದಿಗಿಲು ಉಂಟು ಮಾಡಿದ್ದಾನೆ.
ಉತ್ತರ ಪ್ರದೇಶದ ಕುಶಿನಗರದ ಸಾಲುದ್ದೀನ್ ಮನ್ಸೂರಿ ಮದ್ಯಪಾನ ಮಾಡಿ, ಸಂಪೂರ್ಣ ಅಮಲು ಹತ್ತಿಸಿಕೊಂಡಿದ್ದ. ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ. ಇದೇ ಸ್ಥಿತಿಯಲ್ಲಿ ಆತ ಒಂದು ದೊಡ್ಡದಾದ, ಮೃತ ಕಾಳಿಂಗ ಸರ್ಪವನ್ನು ತೆಗೆದುಕೊಂಡು ಸ್ಥಳೀಯ ಆಸ್ಪತ್ರೆಯೊಂದರ ತುರ್ತು ವಾರ್ಡ್ಗೆ ಹೋಗಿದ್ದಾನೆ. ಅಷ್ಟುದೊಡ್ಡ ಹಾವನ್ನು ನೋಡಿದ ಅಲ್ಲಿನ ವೈದ್ಯರು, ಸಿಬ್ಬಂದಿ ಅಕ್ಷರಶಃ ಕಂಗಾಲಾಗಿ ಹೋಗಿದ್ದರು. ಅದಕ್ಕೆ ಜೀವ ಇಲ್ಲ ಎಂದು ಗೊತ್ತಾದಾಗಲೇ ಅವರಿಗೆ ತುಸು ನಿರಾಳವಾಗಿದ್ದು. ಆ ಕುಡುಕ ಮಾತ್ರ ‘ಈ ಹಾವು ನನಗೆ ಎರಡು ಕಡೆ ಕಡಿದು, ನಂತರ ಸತ್ತು ಹೋಗಿದೆ’ ಎಂದೇ ಹೇಳುತ್ತಿದ್ದ. ಹಾವು ಕಚ್ಚಿದ ಜಾಗ ನೋಡಿ ಎಂದು ತನ್ನ ಕಾಲು ಪಾದ ಮತ್ತು ಕೈಯನ್ನು ವೈದ್ಯರಿಗೆ ತೋರಿಸುತ್ತಿದ್ದ..!
ಸಾಮಾನ್ಯ ಸರ್ಪ ಎದುರು ಬಂದರೇ ನಮಗೆ ಭಯವಾಗುತ್ತದೆ. ಅಂಥದ್ದರಲ್ಲಿ ಕಾಳಿಂಗ ಸರ್ಪ, ಅದು ಸತ್ತಿದ್ದರೂ ಹೆದರಿಕೆ ಆಗುವುದು ಸರ್ವೇಸಾಮಾನ್ಯ. ಈ ಕುಡುಕ ಸುಮಾರು 3 ಅಡಿ ಉದ್ದದ ಹಾವನ್ನು ತೆಗೆದುಕೊಂಡು ಆಸ್ಪತ್ರೆಗೆ ಹೋಗಿದ್ದ. ‘ನನಗೆ ಕಚ್ಚಿದ ಈ ಹಾವು ನಂಜು (ವಿಷ) ಏರಿ ಸತ್ತಿದೆ’ ಎಂಬುದೇ ಅವನ ವಾದವಾಗಿತ್ತು.
ಬಳಿಕ ಕುಡಿದ ಅಮಲು ಇಳಿದ ಬಳಿಕ ಆತ ಸತ್ಯ ಒಪ್ಪಿಕೊಂಡಿದ್ದಾನೆ. ತಾನು ರೈಲ್ವೆ ಹಳಿ ಗುಂಟ ನಡೆದು ಬರುತ್ತಿದ್ದೆ. ಆಗ ಇದು ನನಗೆ ಕಚ್ಚಿದೆ. ಕುಡಿದಿದ್ದರಿಂದ ನಾನೇನು ಮಾಡುತ್ತಿದ್ದೇನೆ ಗೊತ್ತಿರಲಿಲ್ಲ. ಆಗ ಹಾವನ್ನು ಕೈಯಿಂದ ಎತ್ತಿಕೊಂಡೆ. ಮತ್ತೆ ನನ್ನ ಕೈಯಿಗೆ ಕಚ್ಚಿತು. ಆಗ ಬಡಿದು ಕೊಂದೆ ಎಂದು ಅವನು ಹೇಳಿದ್ದಾನೆ. ಹಾಗೇ, ಕಾಳಿಂಗ ಸರ್ಪದ ಬಳಿ ಕಚ್ಚಿಸಿಕೊಂಡ ಅವನಿಗೆ ಚಿಕಿತ್ಸೆ ನೀಡಲಾಗಿದೆ.