ಹರ್ಯಾಣದ ಗುರುಗ್ರಾಮದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಾರಿನ ಡಿಕ್ಕಿಯಲ್ಲಿ ಕುಳಿತು, ನೋಟುಗಳನ್ನು ರಸ್ತೆ ಮೇಲೆ ಎಸೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಈಗ ಆ ವ್ಯಕ್ತಿಯನ್ನು ಮತ್ತು ಕಾರು ಡ್ರೈವ್ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಮಾರುತಿ ಸುಜುಕಿ ಬಲೆನೋ ಕಾರಿನ ಟ್ರಂಕ್ನಲ್ಲಿ ಕುಳಿತವ ನೋಟು ಎಸೆಯುತ್ತಿದ್ದರೆ, ಹಿಂಬದಿಯಿಂದ ಬೈಕ್ನಲ್ಲಿ ಬರುತ್ತಿದ್ದ ಇಬ್ಬರು ಅದನ್ನು ವಿಡಿಯೊ ಮಾಡಿದ್ದರು. ಆ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆಲ್ಲ ಮಾಡುವುದರಿಂದ ರಸ್ತೆ ಮೇಲೆ ಪ್ರಯಾಣ ಮಾಡುವ ಇತರರ ಗಮನ ಹಾಳಾಗುತ್ತದೆ. ಭೀಕರ ಅಪಘಾತಗಳಿಗೂ ಕಾರಣವಾಗಬಹುದು ಎಂದು ಆರೋಪಿಸಿದ್ದರು. ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಸುಮೊಟೊ ಕೇಸ್ ದಾಖಲಿಸಿದ್ದರು.
ಶಾಹೀದ್ ಕಪೂರ್ ಅಭಿನಯದ ‘ಫರ್ಜಿ಼’ ವೆಬ್ಸೀರಿಸ್ನಲ್ಲಿ ಇಂಥದ್ದೇ ಒಂದು ದೃಶ್ಯವಿದ್ದು, ಅದನ್ನು ಮರುಸೃಷ್ಟಿಸುವ ಸಲುವಾಗಿಯೇ ಈ ಯುವಕರು ಇಂಥ ಸಾಹಸ ಮಾಡಿದ್ದರು. ಅದರಲ್ಲಿ ಮುಖ ಮುಚ್ಚಿಕೊಂಡ ಯುವಕನೊಬ್ಬ ಕಾರಿನ ಡಿಕ್ಕಿಯಿಂದ ನೋಟುಗಳನ್ನು ಮೊಗೆದು ಮೊಗೆದು ರಸ್ತೆಗೆ ಎಸೆದಿದ್ದಾನೆ. ಕೆಲ ಸಮಯ ಹೀಗೇ ಮಾಡಿ, ಕಾರಿನ ಡಿಕ್ಕಿಯ ಬಾಗಿಲು ಹಾಕಿದ್ದಾನೆ.
ಇದನ್ನೂ ಓದಿ: KR Market Flyover : ಕೆ.ಆರ್. ಮಾರ್ಕೆಟ್‌ನಲ್ಲಿ ಹಣ ಎಸೆದ ಅರುಣ್ ಪೊಲೀಸ್ ವಶಕ್ಕೆ, ಅಜ್ಞಾತ ಸ್ಥಳದಲ್ಲಿ ವಿಚಾರಣೆ
ವಿಡಿಯೊ ವೈರಲ್ ಆದ ಕೆಲವೇ ಹೊತ್ತಲ್ಲಿ ಹರ್ಯಾಣ ಪೊಲೀಸರು ಪ್ರತಿಕ್ರಿಯೆ ನೀಡಿ ‘ಆರೋಪಿಗಳನ್ನು ಗುರುತಿಸಲಾಗಿದೆ, ಶೀಘ್ರವೇ ಬಂಧಿಸುತ್ತೇವೆ ಎಂದಿದ್ದರು. ಇಂದು ಅವರಿಬ್ಬರನ್ನೂ ಅರೆಸ್ಟ್ ಮಾಡಲಾಗಿದ್ದು, ಒಬ್ಬಾತ ಜೋರಾವರ್ ಸಿಂಗ್ ಕಲ್ಸಿ ಮತ್ತು ಇನ್ನೊಬ್ಬಾತನ ಹೆಸರು ಗುರ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಇದರಲ್ಲಿ ಕಾರು ಡ್ರೈವ್ ಮಾಡುತ್ತಿದ್ದವನ್ಯಾರು. ಹಣ ಎಸೆಯುತ್ತಿದ್ದವನು ಯಾರು ಎಂಬುದು ಗೊತ್ತಾಗಿಲ್ಲ. ಆರೋಪಿಗಳು ಹೋಗುತ್ತಿದ್ದ ಮಾರುತಿ ಸುಜುಕಿ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗುರುಗ್ರಾಮ ಎಸಿಪಿ ವಿಕಾಸ್ ಕೌಶಿಕ್ ತಿಳಿಸಿದ್ದಾರೆ.