ತಿರುವನಂತಪುರಂ: ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಲುಲು ಮಾಲ್‌ನ ಒಳಗೆ ಬುರ್ಖಾ ಹಾಕಿಕೊಂಡು ಹೋಗಿ ಅಲ್ಲಿನ ಶೌಚಾಲಯದೊಳಗೆ ಮಹಿಳೆಯ ಖಾಸಗಿ ದೃಶ್ಯಗಳನ್ನು ಮೊಬೈಲ್ ಕ್ಯಾಮರಾದಲ್ಲಿ ವಿಡಿಯೊ ಮಾಡಿದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಆರೋಪಿ ವ್ಯಕ್ತಿಯನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಟೆಕ್ಕಿಯ ಕೃತ್ಯದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಗೆಯೇ ಈ ಸುದ್ದಿ ವೈರಲ್ (Viral News) ಆಗಿದೆ.
23 ವರ್ಷದ ಅಭಿಮನ್ಯು ಹೆಸರಿನ ವ್ಯಕ್ತಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಬುಧವಾರ ಕೊಚ್ಚಿಯ ಲುಲು ಮಾಲ್‌ಗೆ ಆತ ಬುರ್ಖಾ ತೊಟ್ಟಿಕೊಂಡು ಬಂದಿದ್ದಾನೆ. ಒಂದು ಬಾಕ್‌ನಲ್ಲಿ ಮೊಬೈಲ್ ಅನ್ನು ಇರಿಸಿ, ಅದರ ಕ್ಯಾಮರಾಗಾಗಿ ಸಣ್ಣ ರಂಧ್ರ ಮಾಡಿದ್ದಾನೆ. ಆ ಬಾಕ್ಸ್ ಅನ್ನು ಮಹಿಳೆಯರ ಶೌಚಾಲಯದ ಬಾಗಿಲಿಗೆ ಸಿಲುಕಿಸಿದ್ದಾನೆ. ನಂತರ ಶೌಚಾಲಯದಿಂದ ಹೊರಬಂದ ಆತ ಶೌಚಾಲಯದ ಮುಖ್ಯ ಬಾಗಿಲಿನ ಬಳಿ ನಿಂತು ಯಾರಾದರೂ ಶೌಚಾಲಯದೊಳಗೆ ಹೋಗುತ್ತಾರೆಯೇ ಎಂದು ಕಾಯಲಾರಂಭಿಸಿದ್ದಾನೆ.
ಇದನ್ನೂ ಓದಿ: Viral News : ಇಡೀ ಏರಿಯಾದ ಕರೆಂಟ್ ತೆಗೆದ ಮೀನು! ಇದಕ್ಕೆ ಕಾರಣವಾಗಿದ್ದು ಹಕ್ಕಿ!
ಬುರ್ಖಾ ತೊಟ್ಟಿದ್ದ ಅಭಿಮನ್ಯುವಿನ ವರ್ತನೆ ಲುಲು ಮಾಲ್‌ನ ಸೆಕ್ಯುರಿಟಿ ಗಾರ್ಡ್‌ಗೆ ಅನುಮಾನ ತರಿಸಿದೆ. ಆ ಹಿನ್ನೆಲೆ ಅವರು ಪೊಲೀಸರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಬುರ್ಕಾದೊಳಗಿರುವುದು ಹೆಣ್ಣಲ್ಲ ಬದಲಾಗಿ ಗಂಡು ಎನ್ನುವುದು ತಿಳಿದುಬಂದಿದೆ. ನಂತರ ಆತನನ್ನು ವಿಚಾರಣೆ ಮಾಡಿದಾಗ ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ತಕ್ಷಣವೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತ ಶೌಚಾಲಯದಲ್ಲಿ ಇರಿಸಿದ್ದ ಮೊಬೈಲ್ ಹಾಗೂ ಹಾಕಿಕೊಂಡಿದ್ದ ಬುರ್ಕಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿ ಟೆಕ್ ಪದವೀಧರನಾಗಿರುವ ಅಭಿಮನ್ಯು ವಿರುದ್ಧ ಐಪಿಸಿಯ ಸೆಕ್ಷನ್ 354(ಸಿ) ಮತ್ತು 419 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 ಇ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಂತರ ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಅಭಿಮನ್ಯುವನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಕಲಮಸ್ಸೆರಿಯ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳೊಬ್ಬರು ಮಾಹಿತಿ ಕೊಟ್ಟಿದ್ದಾರೆ.