ಮೊಸಳೆ ಅದೆಷ್ಟು ಭಯಂಕರ ಸರೀಸೃಪ ಎಂಬುದು ನಮಗೆಲ್ಲ ಗೊತ್ತು. ಅದು ನರಭಕ್ಷಕ..ಮೊಸಳೆಯಿದ್ದ ನದಿ-ಕೆರೆಗಳ ದಡಕ್ಕೆ ಹೋದಾಗ ಮೈಯೆಲ್ಲ ಕಣ್ಣಾಗಿರಬೇಕು. ಇಲ್ಲದೆ ಇದ್ದರೆ ಅದರ ಬಾಯಿಗೆ ಬೀಳಲು ನಿಮಿಷ ಸಾಕು.. ಹೀಗಿರುವಾಗ ವ್ಯಕ್ತಿಯೊಬ್ಬ ಮೊಸಳೆಯ ಪಕ್ಕದಲ್ಲಿ ಮಲಗಿ, ಅದರ ಕಾಲು- ಮೈ ಮುಟ್ಟುತ್ತ ತಮಾಷೆಯಾಡಿದ್ದಾನೆ. ಆದರೆ ಅವನು ಇದಕ್ಕಾಗಿ ಬೊಂಬಾಟ್ ಐಡಿಯಾ ಮಾಡಿದ್ದ. ಮೊಸಳೆಯಂಥ ವೇಷ ಧರಿಸಿ ಆ ಸರೀಸೃಪದ ಪಕ್ಕ ಮಲಗಿಕೊಂಡಿದ್ದ.
ಈಗಂತೂ ಎಲ್ಲ ರೀತಿಯ ಪ್ರಾಣಿಗಳ ಕಾಸ್ಟ್ಯೂಮ್ಗಳು (ಉಡುಪು) ಮಾರುಕಟ್ಟೆಯಲ್ಲಿ ಲಭ್ಯ. ಹುಲಿ, ಕರಡಿ, ಗೊರಿಲ್ಲಾ, ನಾಯಿ ಸೇರಿ ವಿವಿಧ ಪ್ರಾಣಿಗಳ ಮಾದರಿಯ ಬಟ್ಟೆಗಳು ಸಿಗುತ್ತವೆ. ಈ ವ್ಯಕ್ತಿ ಮೊಸಳೆಯಂಥ ಉಡುಪು ಖರೀದಿಸಿದ್ದ. ನದಿ ದಡದ ಮೇಲೆ, ಮೊಸಳೆಯ ಚರ್ಮದಂಥ ಬಟ್ಟೆ ಧರಿಸಿ, ನಿಜವಾದ ಮೊಸಳೆ ಪಕ್ಕದಲ್ಲಿ ಮಲಗಿದ್ದ. ಹಾಗೇ, ಮಲಗಿದವನು ಸುಮ್ಮನಿರದೆ, ಅದರ ಕಾಲನ್ನು ಮುಟ್ಟುತ್ತಿದ್ದ. ಹಿಡಿದು ಎಳೆಯುತ್ತಿದ್ದ. ಒಟ್ಟಾರೆ ಅದಕ್ಕೆ ಕೀಟಲೆ ಕೊಡುತ್ತಿದ್ದ. ಆದರೆ ಆ ಮೊಸಳೆ ಸುಮ್ಮನೆ ಮಲಗಿತ್ತು. ಬಹುಶ್ಯಃ ಅವನನನ್ನು ಅದು ಇನ್ನೊಂದು ಮೊಸಳೆ ಎಂದೇ ಭಾವಿಸಿತ್ತು. ಈ ವಿಡಿಯೊವನ್ನು ನರೇಂದ್ರ ಸಿಂಗ್ ಎಂಬುವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು ‘ಈತ ಅದ್ಯಾವ ಡ್ರಗ್ಸ್ ತೆಗೆದುಕೊಂಡಿರಬಹುದು?’ ಎಂದು ಫನ್ನಿ ಕ್ಯಾಪ್ಷನ್ ಬರೆದಿದ್ದಾರೆ.
ಆದರೆ ನೆಟ್ಟಿಗರು ಆ ವ್ಯಕ್ತಿಯ ಈ ಕೀಟಲೆಯನ್ನು ಪ್ರೋತ್ಸಾಹಿಸಿಲ್ಲ. ‘ಶೌರ್ಯಕ್ಕೂ, ಮೂರ್ಖತನಕ್ಕೂ ಒಂದು ಚಿಕ್ಕ ಅಂತರವಷ್ಟೇ ಇದೆ’ ಎಂದು ಒಬ್ಬರು ಕಮೆಂಟ್ ಬರೆದಿದ್ದರೆ, ಇನ್ನೊಬ್ಬರು ‘ಅತ್ಯಂತ ಸೃಜನಶೀಲ ಮಾರ್ಗದಲ್ಲಿ ಸಾಯಲು ಹೊರಟಿದ್ದಾನೆ’ ಎಂದು ಹೇಳಿದ್ದಾರೆ. ಮೊಸಳೆಯೊಂದಿಗೆ ಆಟವೆಂದರೆ ಅಪಾಯದ ಪರಮಾವಧಿ ಎಂದೇ ಎಲ್ಲರೂ ಹೇಳುತ್ತಾರೆ. ಅಂಥದ್ದರಲ್ಲಿ ಈತ ತಾನಾಗೇ ಹೋಗಿ, ಕೆಣಕಿ ಅದರ ಬಾಯಿಗೆ ಬೀಳುತ್ತಿದ್ದಾನೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮನಕಲಕುವ ಸುದ್ದಿ ಇದು; ಬೋಟ್ ಕಟ್ಟುತ್ತಿದ್ದ ಅಪ್ಪನ ಎದುರೇ 1 ವರ್ಷದ ಮಗುವನ್ನು ಎಳೆದೊಯ್ದು, ನುಂಗಿದ ಮೊಸಳೆ