ನವದೆಹಲಿ: ಹುಡುಗ ನೋಡಲು ಸುಮಾರಾಗಿ ಇದ್ದರೂ ಪರವಾಗಿಲ್ಲ, ಹಣ, ಬಂಗಲೆ ಇರದಿದ್ದರೂ ಓಕೆ, ಆದರೆ ಆತ ಎಂಜಿನಿಯರ್ ಆಗಿರಬೇಕು. ಅದರಲ್ಲೂ, ಸಾಫ್ಟ್‌ವೇರ್ ಎಂಜಿನಿಯರ್ ಆಗಿರಬೇಕು ಎಂಬುದು ಬಹುತೇಕ ಯುವತಿಯರ, ಅವರ ಪೋಷಕರ ಬೇಡಿಕೆ ಆಗಿದ್ದ ಕಾಲವೊಂದಿತ್ತು. ಆದರೆ, ಕಾಲ ಈಗ ಬದಲಾಗಿದೆ. ಇದಕ್ಕೆ ನಿದರ್ಶನ ಸಿಕ್ಕಿದ್ದು, ವರ ಬೇಕಾಗಿದ್ದಾನೆ ಎಂದು (Matrimonial Ad) ಪತ್ರಿಕೆಯಲ್ಲಿ ನೀಡಿರುವ ಜಾಹೀರಾತಿನಲ್ಲಿ, “ಸಾಫ್ಟ್‌ವೇರ್ ಎಂಜಿನಿಯರ್ ಬೇಡ” ಎಂದು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಇದು ತುಂಬ “ಸಾಫ್ಟ್”ವೇರ್ ಎಂಜಿನಿಯರ್‌ಗಳಿಗೆ “ಹಾರ್ಡ್” ಆಗಿ ಪರಿಣಮಿಸಿದೆ.
ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತನ್ನು ಸಮೀರ್ ಅರೋರಾ ಎಂಬುವರು ಟ್ವೀಟ್ ಮಾಡಿದ್ದಾರೆ. “ಐಟಿ ಕ್ಷೇತ್ರದ ಭವಿಷ್ಯವು ಉಜ್ವಲವಾಗಿಲ್ಲ ಎಂದು ಎನಿಸುತ್ತಿದೆ” ಎಂಬ ಒಕ್ಕಣೆ ಹಾಕಿದ್ದಾರೆ. “ಶ್ರೀಮಂತ ಕುಟುಂಬದ ಹಿನ್ನೆಲೆಯ ಸುಂದರ ಯುವತಿಗೆ ವರ ಬೇಕಾಗಿದ್ದಾನೆ. ಐಎಎಸ್, ಐಪಿಎಸ್, ವೈದ್ಯ (ಪಿಜಿ), ಕೈಗಾರಿಕೋದ್ಯಮಿ ಇದ್ದರೆ ಓಕೆ. ಆದರೆ, ಸಾಫ್ಟ್‌ವೇರ್ ಎಂಜಿನಿಯರ್‌ಗಳು ಮಾತ್ರ ಕರೆ ಮಾಡುವುದು ಬೇಡ” ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ.
ಸಮೀರ್ ಅರೋರಾ ಅವರು ಟ್ವೀಟ್ ಮಾಡಿರುವ ಫೋಟೊ ವೈರಲ್ ಆಗಿದ್ದು, ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. “ಸಾಫ್ಟ್‌ವೇರ್ ಎಂಜಿನಿಯರ್‌ಗಳೇ ಎಚ್ಚರ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ಭವಿಷ್ಯದಲ್ಲಿ ಐಟಿ ಕ್ಷೇತ್ರಕ್ಕೆ ಭವಿಷ್ಯವಿಲ್ಲ ಎಂಬುದನ್ನು ಯುವತಿ ಚೆನ್ನಾಗಿ ಅರಿತುಕೊಂಡಿದ್ದಾಳೆ” ಎಂದು ಮತ್ತೊಬ್ಬರು ಕೋಟ್ ಮಾಡಿದ್ದಾರೆ. ಒಟ್ಟಿನಲ್ಲಿ, ಆಧುನಿಕ ಯುಗದಲ್ಲಿ ಜನರ ಬೇಡಿಕೆಗಳು, ಔದ್ಯೋಗಿಕ ಟ್ರೆಂಡ್‌ಗಳು ಸುದೀರ್ಘವಾಗಿ ಬಾಳಿಕೆ ಬರುವುದಿಲ್ಲ ಎಂಬುದು ಜಾಹೀರಾತಿನಿಂದ ಸಾಬೀತಾಗಿದೆ.
ಇದನ್ನೂ ಓದಿ | Missing Case | ಕರ್ತವ್ಯನಿರತ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನಾಪತ್ತೆ; ಪೋಸ್ಟರ್ ವೈರಲ್!