ಬೆಂಗಳೂರು: ಪ್ರವಾಸಿ ತಾಣಗಳಲ್ಲಿ ಮಂಗಗಳ ಹಿಂಡು ಕಾಣಿಸಿಕೊಳ್ಳುವುದು ಸಾಮಾನ್ಯ. ಅದರಲ್ಲೂ ನಿಸರ್ಗದ ಮಧ್ಯೆ ಇರುವ ಪ್ರವಾಸಿ ತಾಣಗಳಲ್ಲಂತೂ ಮಂಗಗಳು ಕುಳಿತುಕೊಂಡು ಪ್ರವಾಸಿಗರು ತರುವ ತಿಂಡಿಗಾಗಿಯೇ ಕಾಯುತ್ತಲಿರುತ್ತವೆ. ಆದರೆ ಇಲ್ಲಿ ಪ್ರವಾಸಿ ತಾಣಗಳನ್ನೆಲ್ಲವನ್ನೂ ಬಿಟ್ಟು ಮಂಗವೊಂದು ಸೀದಾ ವಿಮಾನ ನಿಲ್ದಾಣಕ್ಕೇ ಪ್ರವಾಸಿಗರನ್ನು ಹುಡುಕಿಕೊಂಡು ಬಂದುಬಿಟ್ಟಿದೆ! ಅಂತದ್ದೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ವೈರಲ್ (Viral Video) ಆಗಿದೆ ಕೂಡ.
ಹೌದು. ಮಲೇಷ್ಯಾದ ಕೌಲಾಲಂಪುರ್ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಇತ್ತೀಚೆಗೆ ಮಂಗವೊಂದು ಕಾಣಿಸಿಕೊಂಡಿದೆ. ತನ್ನ ಹಿಂಡಿನಿಂದ ತಪ್ಪಿಸಿಕೊಂಡಿರುವ ಮಂಗಣ್ಣ ಒಬ್ಬಂಟಿಯಾಗಿ ಬಂದು ವಿಮಾನ ನಿಲ್ದಾಣದಲ್ಲಿ ಅತ್ತಿಂದಿತ್ತ ಹಾರಾಟ ನಡೆಸಲಾರಂಭಿಸಿದೆ. ಇದನ್ನು ನೋಡಿದ ಕೆಲವು ಪ್ರಯಾಣಿಕರು ಗಾಬರಿಯಿಂದ ಬೇರೆ ಕಡೆ ಹೋಗಿ ಕುಳಿತುಕೊಂಡಿದ್ದಾರೆ. ಇನ್ನೂ ಕೆಲವರು ಈ ವಿಶೇಷ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳಲಾರಂಭಿಸಿದ್ದಾರೆ.
ಇದನ್ನೂ ಓದಿ: Viral Video: ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಸಂಸದ; ಕಾಲಿಗೆ ಬಿದ್ದು ವೋಟು ಕೇಳಿದ್ದು ಮರೆತು ಹೋಯಿತೆ?
ಈ ರೀತಿ ವಿಮಾನ ನಿಲ್ದಾಣಕ್ಕೆ ಮಂಗ ಬಂದ ದೃಶ್ಯದ ವಿಡಿಯೊವನ್ನು ಕೌಲಾಲಂಪುರ್ ವಿಮಾನ ನಿಲ್ದಾಣ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. “ಪೂರ್ ಬಡ್ಡಿ! ನಿಜಕ್ಕೂ ಬಹಳ ಸಂತಸದಲ್ಲಿರಬೇಕು. ಅಲ್ಲಿಯೇ ಇರಿ. ನಿಮ್ಮನ್ನು ರಕ್ಷಿಸಲು ಪರ್ಹಿಲಿಟನ್‌ನಿಂದ ಅಬಾಂಗ್ ತಜ್ಞರನ್ನು ಕರೆಸುತ್ತಿದ್ದೇವೆ. ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿರುವ ಪ್ರಯಾಣಿಕರು ಗಾಬರಿಯಾಗಬೇಡಿ. ಅಲ್ಲಿನ ಪರಿಸ್ಥಿತಿಯತನ್ನು ಮೇಲ್ವಿಚಾರಣೆ ಮಾಡಲು ನಮ್ಮ ತಂಡವಿದೆ. ದಯವಿಟ್ಟು ಎಲ್ಲರು ಶಾಂತರಾಗಿರಿ ಮತ್ತು ಚಿಂತಿಸಬೇಡಿ. ಹಿಂಡಿನಿಂದ ಕಳೆದುಹೋಗಿರುವ ಈ ಚಿಕ್ಕ ಸ್ನೇಹಿತನಿಗೆ ನಾವು ಸಹಾಯ ಮಾಡಲಿದ್ದೇವೆ” ಎಂದು ವಿಮಾನ ನಿಲ್ದಾಣದ ಆಡಳಿತವು ವಿಡಿಯೊಗೆ ಕ್ಯಾಪ್ಶನ್ ಅನ್ನು ಕೊಟ್ಟಿದೆ.
ಈ ವಿಡಿಯೊವನ್ನು ಜುಲೈ 29ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊವನ್ನು 4.7 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ನೂರಾರು ಮಂದಿ ವಿಡಿಯೊಗೆ ಲೈಕ್ ಮಾಡಿದ್ದಾರೆ. ಹಲವರು ವಿಡಿಯೊಗೆ ಜೋರಾಗಿ ನಗುವ ಇಮೋಜಿಯನ್ನು ಕೊಟ್ಟಿದ್ದಾರೆ. ವಿಡಿಯೊಗೆ ಹಲವಾರು ರೀತಿಯ ಕಾಮೆಂಟ್‌ಗಳೂ ಬಂದಿವೆ.
“ಪಾಪ ಮಂಗಣ್ಣ, ಪ್ರವಾಸಿಗರನ್ನು ಹುಡುಕಿಕೊಂಡು ವಿಮಾನ ನಿಲ್ದಾಣಕ್ಕೇ ಬಂದಿರಬೇಕು”, “ಬಹುಶಃ ಈ ಮಂಗಕ್ಕೂ ಯಾವುದೋ ಸ್ಥಳಕ್ಕೆ ಭೇಟಿ ನೀಡಬೇಕಾಗಿರಬಹುದು” ಎನ್ನುವಂತಹ ಹಾಸ್ಯಮಯ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.
ಇದನ್ನೂ ಓದಿ: Viral Video : ಕನ್ಫ್ಯೂಸ್ ಆಗಬೇಡಿ, ಇದು ಮಾನವನಲ್ಲ, ಮನುಷ್ಯನಂತೇ ಇರುವ ಕರಡಿ!
ಇಂತಹ ಅನೇಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಬ್ರಿಟನ್‌ನ ಪ್ಯಾರಡೈಸ್ ವನ್ಯಜೀವಿ ಉದ್ಯಾನವನದಲ್ಲಿ ಕೈರಾ ಹೆಸರಿನ ಕರಡಿಯೊಂದು ಮನುಷ್ಯರಂತೆ ಎದ್ದು ನಿಂತುಕೊಳ್ಳುವುದು ಮತ್ತು ಓಡಾಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ಯಾರಡೈಸ್ ವನ್ಯಜೀವಿ ಉದ್ಯಾನದ ಇನ್‌ಸ್ಟಾಗ್ರಾಂ ಖಾತೆಯಲ್ಲೇ ಆ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಕೈರಾ ಕರಡಿಯನ್ನು ಸನ್ ಬಿಯರ್ ಪ್ರಭೇದದ ಕರಡಿ ಎಂದು ಕರೆಯಲಾಗಿತ್ತು. ಅದಕ್ಕೂ ಮೊದಲು ಚೀನಾದ ಮೃಗಾಲಯವೊಂದರಲ್ಲಿ ಕರಡಿಯೊಂದು ಮನುಷ್ಯರಂತೆಯೇ ನಡೆದಾಡುವ ವಿಡಿಯೊವೊಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.